ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಹೋದ ವರ್ಷ ಜಾಸ್ತಿ ಮಳೆ, ಈ ಬಾರಿ ಕೊರತೆ!

ಜೂನ್‌ 1ರಿಂದ 21ರವರೆಗೆ ವಾಡಿಕೆಗಿಂತ ಶೇ 25ರಷ್ಟು ಕಡಿಮೆ ವರ್ಷಧಾರೆ
Published 24 ಜೂನ್ 2023, 4:25 IST
Last Updated 24 ಜೂನ್ 2023, 4:25 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ ಹೋದ ವರ್ಷ ಈ ಅವಧಿಯಲ್ಲಿ ಮುಂಗಾರು ಮಳೆ ವಾಡಿಕೆಗಿಂತಲೂ ಜಾಸ್ತಿ ಪ್ರಮಾಣದಲ್ಲಿ ಸುರಿದಿದ್ದರಿಂದ ಬಿತ್ತನೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿತ್ತು. ಈ ಬಾರಿ ಮಳೆಯಾಗದೇ ಬಿತ್ತನೆ ಕಾರ್ಯಕ್ಕೆ  ತೊಡಕಾಗಿದೆ! ಅಲ್ಲದೇ, ಸಹಜ ಕೃಷಿಯ ಪ್ರಕ್ರಿಯೆಗೆ ತೊಂದರೆಯಾಗಿದೆ.

ಮುಂಗಾರಿನಲ್ಲಿ ಜೂನ್ ತಿಂಗಳಲ್ಲಿ 94.7 ಮಿ.ಮೀ. ವಾಡಿಕೆ ಮಳೆ ಅಂದಾಜಿಸಲಾಗಿದೆ. ಜೂನ್‌ 1ರಿಂದ 21ರವರೆಗೆ 66 ಮಿ.ಮೀ. ವಾಡಿಕೆ ಮಳೆ ನಿರೀಕ್ಷಿಸಲಾಗುತ್ತದೆ. ಹೋದ ಮುಂಗಾರಿನಲ್ಲಿ ಜೂನ್‌ 21ರವರೆಗೆ ವಾಸ್ತವವಾಗಿ 84.8 ಮಿ.ಮೀ. ಬಿದ್ದಿತ್ತು. ಅಂದರೆ, ನಿರೀಕ್ಷೆಗೂ ಮೀರಿ ಸುರಿದಿದ್ದರಿಂದಾಗಿ ಬಿತ್ತನೆ ಕಾರ್ಯಕ್ಕೆ ಅವಕಾಶ ದೊರೆತಿರಲಿಲ್ಲ. ಈ ವರ್ಷ ಜೂನ್‌ 21ರವರೆಗೆ ಬಿದ್ದಿರುವುದು ಸರಾಸರಿ 40.3 ಮಿ.ಮೀ. ಮಳೆ ಮಾತ್ರ. ಇದರಿಂದ 25.7 ಮಿ.ಮೀ. ವ್ಯತ್ಯಾಸ ಕಂಡುಬಂದಿದೆ. ಮುಂಗಾರು ಪೂರ್ವ ಬಿತ್ತನೆಯಷ್ಟೇ ನಡೆದಿದೆಯೇ ಹೊರತು, ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯವೇ ಗಣನೀಯ ಪ್ರಮಾಣದಲ್ಲಿ ನಡೆದಿಲ್ಲ. ಇದು, ಕೃಷಿಯನ್ನೇ ನಂಬಿರುವವರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಆಹಾರ ಧಾನ್ಯ ಉತ್ಪಾದನೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಕಂಡುಬಂದಿದೆ.

ಕಾದಿರುವ ಕೃಷಿಕರು: ಈ ತಿಂಗಳಲ್ಲಿ ಜೂನ್‌ 21ರಂದು ಮಾತ್ರವೇ ಜಿಲ್ಲೆಯಲ್ಲಿ ಸರಾಸರಿ ಉತ್ತಮ ಮಳೆಯಾಗಿದೆ. ಮರು ದಿನ ಬಿಸಿಲಿತ್ತು. ಶುಕ್ರವಾರ ಬಿಸಿಲು ಹಾಗೂ ಆಗಾಗ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನದ ನಂತರ ಆಗಾಗ ಅಲ್ಲಲ್ಲಿ ಸಾಧಾರಣ ಮಳೆ ಬಿದ್ದಿತು.

ಬಿತ್ತನೆ ಕಾರ್ಯ ಚುರುಕುಗೊಳಿಸಲು ವರುಣನ ಕೃಪೆಗಾಗಿ ರೈತರು ಕಾದಿದ್ದಾರೆ. ಜಲಾಶಯಗಳು, ಕೆರೆ–ಕಟ್ಟೆಗಳು ತುಂಬಲೆಂದು ಬಯಸುತ್ತಿದ್ದಾರೆ.

ಜಿಲ್ಲೆಯ ಎಚ್‌.ಡಿ.ಕೋಟೆಯ ಕಬಿನಿ ಬಳಿ ಕಪಿಲಾ ನದಿಗೆ ಕಟ್ಟಿರುವ ಜಲಾಶಯದಲ್ಲಿ ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಕೂಡ ಆ ಭಾಗದ ಹಾಗೂ ಅಚ್ಚುಕಟ್ಟು ಪ್ರದೇಶದ ಕೃಷಿಕರ ಆತಂಕಕ್ಕೆ ಕಾರಣವಾಗಿದೆ. 2,284 ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಈ ಜಲಾಶಯದಲ್ಲಿ ಶುಕ್ರವಾರ ನೀರಿನ ಮಟ್ಟ 2,250.67 ಅಡಿ ಇತ್ತು. ಹೋದ ವರ್ಷ ಇದೇ ಅವಧಿಯಲ್ಲಿ 2,260.87 ಅಡಿ ಇತ್ತು. ಅಂದರೆ, ಈ ಬಾರಿ 10 ಅಡಿಗಳಷ್ಟು ಕಡಿಮೆ ಇದೆ.

ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ 19.52 ಟಿಎಂಸಿ ಅಡಿ ಇದ್ದು, ಶುಕ್ರವಾರ ಕೇವಲ 4.27 ಟಿಎಂಸಿ ಅಡಿ ನೀರಿತ್ತು (ಹೋದ ವರ್ಷ ಇದ್ದದ್ದು 7.65 ಟಿಎಂಸಿ ಅಡಿ ನೀರು). 115 ಕ್ಯುಸೆಕ್‌ ಒಳಹರಿವಿದ್ದರೆ, 300 ಕ್ಯುಸೆಕ್‌ ಹೊರಹರಿವಿತ್ತು. ಹಿಂದಿನ ವರ್ಷ ಒಳಹರಿವಿನ ಪ್ರಮಾಣ 1,131 ಕ್ಯುಸೆಕ್‌ ಇತ್ತು.

‘ಜೂನ್‌ನಲ್ಲಿ ಬುಧವಾರವಷ್ಟೆ (ಜೂನ್‌ 21) ಉತ್ತಮ ಮಳೆಯಾಗಿದೆ. ನೀರಿಲ್ಲದೇ ಒಣಗುತ್ತಿದ್ದ ಅಲಸಂದೆ, ಉದ್ದು, ಹೆಸರು, ಸೂರ್ಯಕಾಂತಿ, ಹತ್ತಿ, ಮುಸುಕಿನಜೋಳ ಬೆಳೆಗೆ ಮಳೆಯಿಂದ ನೆರವಾಗಿದೆ. ಅವೀಗ ಚೇತರಿಕೆ ಕಾಣುತ್ತಿವೆ. ಪೂರ್ವ ಮುಂಗಾರಿನಲ್ಲಿ ಬಿತ್ತನೆ ಕಾರ್ಯ ನಡೆದಿತ್ತು. ಈವರೆಗೆ ಶೇ 45ರಷ್ಟೇ ಬಿತ್ತನೆ ಕಾರ್ಯ ನಡೆದಿದೆ. ರೈತರು, ರಾಗಿ, ಮುಸುಕಿನಜೋಳ, ಅಲಸಂದೆ ಮೊದಲಾದವುಗಳನ್ನು ಮೂರ್ನಾಲ್ಕು ದಿನಗಳಲ್ಲಿ ಬಿತ್ತನೆ ಮಾಡಲಿದ್ದಾರೆ. ಈಚೆಗೆ ಬಿದ್ದ ಮಳೆಯಿಂದ ಅನುಕೂಲವಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್‌ ತಿಳಿಸಿದರು.

ಕೃಷಿ ಇಲಾಖೆಯ ಮಾಹಿತಿಯ ಪ್ರಕಾರ, ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 3,97,879 ಹೆಕ್ಟೇರ್‌ ಬಿತ್ತನೆಯ ಗುರಿ ಹೊಂದಲಾಗಿದ್ದು, ಇದರಲ್ಲಿ 1,79,394 ಹೆಕ್ಟೇರ್ ಬಿತ್ತನೆಯಾಗಿದೆ. ಅಂದರೆ ಸಾಧನೆಯಾಗಿರುವುದು ಶೇ 45ರಷ್ಟು ಮಾತ್ರ. ಜೋಳ ಶೇ 104, ರಾಗಿ ಶೇ 1, ಮುಸುಕಿನಜೋಳ ಶೇ 67, ಸಿರಿಧಾನ್ಯಗಳು ಶೇ 18, ತೊಗರಿ ಶೇ 32, ಉದ್ದು ಶೇ 121, ಹೆಸರು ಶೇ 131, ಎಳ್ಳು ಶೇ 31, ಸೂರ್ಯಕಾಂತಿ ಶೇ 159, ಹರಳು ಶೇ 227, ಹತ್ತಿ ಶೇ 75, ಕಬ್ಬು– ಹೊಸನಾಟಿ ಶೇ 20, ಕಬ್ಬು–ಕೂಳೆ ಶೇ 51 ಹಾಗೂ ತಂಬಾಕು ಶೇ 100ರಷ್ಟು ಬಿತ್ತನೆಯಾಗಿದೆ. 1,03,200 ಹೆಕ್ಟೇರ್‌ ಭತ್ತದ ಬಿತ್ತನೆಯ ಗುರಿ ಹೊಂದಿದ್ದು, ಬಿತ್ತನೆ ಕಾರ್ಯ ಇನ್ನಷ್ಟೇ ಪ್ರಾರಂಭವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT