ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಲೆ ಜಾಗದಲ್ಲಿ ಮುಡಾ ಸಿ.ಎ ನಿವೇಶನ!

ಶ್ರೀಧರ್ ಬಡಾವಣೆಯ ಪೂರ್ಣಯ್ಯ ನಾಲೆ ಬಫರ್‌ ವಲಯ
Published 27 ನವೆಂಬರ್ 2023, 6:01 IST
Last Updated 27 ನವೆಂಬರ್ 2023, 6:01 IST
ಅಕ್ಷರ ಗಾತ್ರ

ಮೈಸೂರು: ಬೋಗಾದಿಯ ರೈಲ್ವೆ ಬಡಾವಣೆ ಹಾಗೂ ಎಸ್‌ಬಿಎಂ ಬಡಾವಣೆಗಳಲ್ಲಿ ಪೂರ್ಣಯ್ಯ ನಾಲೆ ಜಾಗದಲ್ಲಿ ಮನೆಗಳನ್ನು ಕಟ್ಟಲಾಗಿದೆ. ಆರ್‌.ಶ್ರೀಧರ್‌ ಬಡಾವಣೆಯಲ್ಲಿ ನಾಲೆಯ ಮೇಲೆಯೇ ನಗರಾಭಿವೃದ್ಧಿ ಪ್ರಾಧಿಕಾರ ಸಿ.ಎ ನಿವೇಶನವನ್ನೂ ಮಾಡಿದೆ!

‘ದಿಶಾಂಕ್’ ಆ್ಯಪ್‌ನಲ್ಲಿ ನಿವೇಶನದ ಜಾಗ ನಾಲೆ ಹಾಗೂ ಬಫರ್ ವಲಯವೆಂದೂ ನೀಲಿ ಬಣ್ಣದಲ್ಲಿ ನಮೂದಾಗಿದೆ. ಆದರೆ, ಮುಡಾ ‘ಸಿ.ಎ 2’ ನಿವೇಶನವೆಂದು ಬರೆದಿರುವುದು ಇಲ್ಲಿ ಕಾಣಸಿಗುತ್ತದೆ. 

ನಿವೇಶನ ಮಾಡಿರುವುದಕ್ಕೆ ಮುಡಾ ವೆಬ್‌ಸೈಟ್‌ನಲ್ಲಿ ಫೆ.17ರಂದು ಕರೆಯಲಾದ ‘ಸಿ.ಎ–2023’ ಅಧಿಸೂಚನೆಯೂ ಆಧಾರವಾಗಿದೆ.

ಶ್ರೀಧರ್ ಬಡಾವಣೆಯ ಸರ್ವೆ ನಂ 326, 327ರಲ್ಲಿನ ಸಿಎ–2ಎ, ಬಿ, ಸಿಗಳು ಕ್ರಮವಾಗಿ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಹಾಪ್‌ಕಾಮ್ಸ್, ಮೀನು ಮಾರಾಟ ಮಳಿಗೆಗಳಿಗೆ ಮೀಸಲಾಗಿವೆ. ಆದರೆ, ಇವುಗಳು ನಾಲೆ ಹಾಗೂ ಬಫರ್ ವಲಯದಲ್ಲಿದ್ದು, ಇವುಗಳನ್ನೇ  ಹರಾಜಿಗಿಟ್ಟು, ಮುಡಾ ಹಣ ಗಳಿಕೆ ಮಾಡಲು ಮುಂದಾಗಿದೆ ಎನ್ನುತ್ತಾರೆ ನಿವಾಸಿಗಳು.

‘ಒಂದೆಡೆ ಗಿಡಗಂಟಿ ತೆರವಿನ ನೆಪದಲ್ಲಿ ನಾಲೆ ಮುಚ್ಚಿ ರಸ್ತೆಯನ್ನು ಮಾಡಿದ್ದರೆ, ಸರ್ವೆ ನಂ.327ರಲ್ಲಿ ನಾಲೆಯ ಬಫರ್‌ ವಲಯವನ್ನು ನಿವೇಶನಗಳನ್ನಾಗಿ  ಪರಿವರ್ತಿಸಲಾಗಿದೆ. ಸರ್ವೆ ನಂ 328ರಲ್ಲಿ ನಾಲೆಯ ಮೇಲೆಯೇ ಮನೆಗಳ ನಿರ್ಮಾಣ ಮಾಡಲಾಗಿದೆ. ನರ್ಸರಿ ಶಾಲೆಯೆಂದು ನಮೂದಿಸಿ ಮುಡಾ ಅನುಮೋದಿಸಿದೆ. ಇದೇ ದಾರಿಯಲ್ಲಿ ಬಂಡಿ ದಾರಿಯೂ ಇದೆ’ ಎಂದು ಬಡಾವಣೆ ನಿವಾಸಿ ಮಹದೇವು, ಸ್ಥಳಕ್ಕೆ ಬಂದ ‘ಪ್ರಜಾವಾಣಿ’ಗೆ ಪ್ರತಿನಿಧಿಗೆ ತೋರಿಸಿದರು.

‘ಇದುವರೆಗೂ ಹಲವು ಬಾರಿ ಎಸ್‌ಬಿಎಂ ಬಡಾವಣೆಯ ಯೋಜನೆ ಬದಲಿಸಿ ಅನುಮೋದನೆ ಪಡೆದುಕೊಳ್ಳಲಾಗಿದೆ. 135.8 ಎಕರೆಯ ಬಡಾವಣೆಯ 1994ರಲ್ಲಿನ ಅನುಮೋದಿತ ಯೋಜನಾ ನಕ್ಷೆಯಲ್ಲಿ 1,300 ನಿವೇಶನಗಳಿದ್ದರೆ, 1998ರ ತಿದ್ದುಪಡಿ ನಕ್ಷೆಯಲ್ಲಿ 1,378 ನಿವೇಶನ, 2003ರ ಪರಿಷ್ಕೃತ ನಕ್ಷೆಯಲ್ಲಿ 1,500 ನಿವೇಶನಗಳಿಗೆ ಏರಿಕೆಯಾಗಿದೆ. ಆದರೆ, 135.8 ಎಕರೆ ಜಾಗವು ಹಿಗ್ಗಿಲ್ಲ. ಬದಲಾಗಿ ಬಂಡಿ ದಾರಿ, ಬಿ ಕರಾಬು, ನಾಲೆಯ ಭೂಮಿಗಳನ್ನು ಒತ್ತುವರಿ ಮಾಡಲಾಗಿದೆ’ ಎಂದು ಆರೋಪಿಸಿದರು.

‘2003ರ ನಕ್ಷೆಯಲ್ಲಿ ಸರ್ವೆ ನಂ. 280ರಲ್ಲಿನ 6 ಎಕರೆ ಗೋಮಾಳದಲ್ಲಿ 2 ಎಕರೆ ಸರ್ಕಾರಿ ಗೋಮಾಳ ಹಾಗೂ ಸರ್ವೆ 329ರ ಭೂ ಸ್ವಾಧೀನಕ್ಕೆ ಒಳಪಡದ 4 ಎಕರೆ ಖಾಸಗಿ ಜಮೀನನ್ನು ಒಳಗೊಂಡಂತೆ ಅನುಮೋದನೆ ಪಡೆದು, ಇವುಗಳಲ್ಲಿ ನಿಯಮಬಾಹಿರವಾಗಿ ಉದ್ಯಾನಗಳು, ಸಿ.ಎ ನಿವೇಶನಗಳನ್ನು ಗುರುತಿಸಲಾಗಿದೆ. ಬೋಗಾದಿ ಗ್ರಾಮ ಪಂಚಾಯಿತಿಯಿಂದ 11ಬಿ ಸೃಷ್ಟಿಸಿ ಜನರಿಗೆ ನಿವೇಶನ ಕೂಡ ನೋಂದಣಿಯಾಗಿದೆ. ನಂತರ ಪಟ್ಟಣ ಪಂಚಾಯಿತಿಯಿಂದ ಕೆಎಂಎಫ್‌–24/ನಮೂನೆ 3 ನೀಡಲಾಗಿದೆ. ಈ ಜಾಗವೆಲ್ಲ ನಾಲೆ ಹಾಗೂ ಪ್ರಾಧಿಕಾರ ಅನುಮೋದಿತ ಉದ್ಯಾನವಾಗಿದೆ’ ಎಂದು ಹೇಳಿದರು. 

‘ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿ 208 ಹೊಸ ನಿವೇಶನಗಳನ್ನು ಸೃಷ್ಟಿಸಲಾಗಿದೆ. ಅವುಗಳನ್ನು ಹಂಚಿಕೆ ಮಾಡಿ, ಕಟ್ಟಡ ಪರವಾನಗಿ ಹಾಗೂ ಪೂರ್ಣಗೊಂಡ ವರದಿ ನೀಡಿ ಕಂದಾಯವನ್ನೂ ಮುಡಾ ವಸೂಲು ಮಾಡಿದೆ’ ಎಂದು ಎಸ್‌ಬಿಎಂ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಂಘದ ಅಧ್ಯಕ್ಷ ಉಮೇಶ್‌ ದೂರಿದರು.

‘1998ರ ಎಸ್‌ಬಿಎಂ ಬಡಾವಣೆ ಯೋಜನಾ ನಕ್ಷೆಯಲ್ಲಿ ಸರ್ವೆ 50ರಲ್ಲಿ 5.15 ಎಕರೆಯಲ್ಲಿ 5.4 ಎಕರೆ ಪಾರ್ಕ್‌ ಎಂದು ತೋರಿಸಲಾಗಿದೆ. 2003ರ ಪರಿಷ್ಕೃತ ಅನುಮೋದಿತ ಯೋಜನಾ ನಕ್ಷೆಯಲ್ಲಿ 3 ಎಕರೆ ಭಾಗವನ್ನು ನಿವೇಶನವಾಗಿ ಬದಲಿಸಲಾಗಿದೆ. ಎ ಹಾಗೂ ಇ ಬ್ಲಾಕ್‌ನಲ್ಲೂ ಹೀಗೆ ಆಗಿದೆ’ ಎಂದು ಉದಾಹರಿಸಿದರು.

‘ಕೋಟಿಗಟ್ಟಲೆ ಬೆಲೆ ಬಾಳುವ ಪ್ರಾಧಿಕಾರದ ಭೂಮಿ, ಹಿರಿಯರು ಕಟ್ಟಿದ ಪೂರ್ಣಯ್ಯ ನಾಲೆ, ಹಳ್ಳಗಳು ಭೂಗಳ್ಳರ ಪಾಲಾಗುತ್ತಿರುವುದು ಆಳುವವರಿಗೆ ಕಾಣುತ್ತಿಲ್ಲವೇ?. ಈ ಬಗ್ಗೆ ದಾಖಲೆ ಸಹಿತ ದೂರು ನೀಡಿದರೂ ಕ್ರಮ ವಹಿಸಿಲ್ಲ’ ಎಂದು ಅನಿಲ್‌ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಪ್ರತಿಕ್ರಿಯೆಗೆ ಮುಡಾ ಆಯುಕ್ತರು ಕರೆ ಸ್ವೀಕರಿಸಲಿಲ್ಲ.

ಎಸ್‌ಬಿಎಂ ಬಡಾವಣೆಯಲ್ಲಿ ಪೂರ್ಣಯ್ಯ ನಾಲೆ (ನೀಲಿ ಬಣ್ಣದಲ್ಲಿ)
ಎಸ್‌ಬಿಎಂ ಬಡಾವಣೆಯಲ್ಲಿ ಪೂರ್ಣಯ್ಯ ನಾಲೆ (ನೀಲಿ ಬಣ್ಣದಲ್ಲಿ)
ಎಸ್‌ಬಿಎಂ ಬಡಾವಣೆ ಗಡಿಯ ಪೂರ್ಣಯ್ಯ ನಾಲೆಯು ಮುಚ್ಚಿದ್ದು ನಾಲೆ ಹಾಗೂ ಬಫರ್‌ ವಲಯದಲ್ಲೂ ಮನೆಗಳೆದ್ದಿವೆ 
ಎಸ್‌ಬಿಎಂ ಬಡಾವಣೆ ಗಡಿಯ ಪೂರ್ಣಯ್ಯ ನಾಲೆಯು ಮುಚ್ಚಿದ್ದು ನಾಲೆ ಹಾಗೂ ಬಫರ್‌ ವಲಯದಲ್ಲೂ ಮನೆಗಳೆದ್ದಿವೆ 

‘ನಾಲೆ ಹಳ್ಳ ಎಲ್ಲವೂ ಒತ್ತುವರಿ’

‘ಸರ್ಕಾರಿ ಬಂಡಿದಾರಿ ಗೋಮಾಳ ಹಳ್ಳ ನಾಲೆ ಎಲ್ಲವೂ ಒತ್ತುವರಿಯಾಗಿದೆ. ಸರ್ವೆ ನಂ. 280ರಲ್ಲಿ ಗುರುತಿಸಲಾಗಿರುವ 16 ಎಕರೆ ಗೋಮಾಳದ ದಕ್ಷಿಣಕ್ಕೆ ನಾಲಾ ಎಂದು ಗಡಿ ಗುರುತಿಸಲಾಗಿದೆ. ನಾಲೆಯಿಂದ ಮುಂದೆಯೂ ಅಕ್ರಮವಾಗಿ ಬಡಾವಣೆಯ ಯೋಜನೆಯನ್ನು ವಿಸ್ತರಿಸಲಾಗಿದೆ’ ಎಂದು ಎಸ್‌ಬಿಎಂ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಂಘದ ಶ್ರೀರಾಮ್‌ ದಾಖಲೆ ಪ್ರದರ್ಶಿಸಿ ದೂರಿದರು. ‘ಗೋಮಾಳವನ್ನು ಬಡವರು ಮನೆಯಿಲ್ಲದವರು ಆಸ್ಪತ್ರೆಗೆ ಶಾಲೆಗೆ ನೀಡಬೇಕಿತ್ತು. ಆದರೆ ಖಾಸಗಿ ಲಾಭದಾಯಕ ಸಂಸ್ಥೆಯಾದ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ನೀಡಲಾಗಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT