ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ ಹಗರಣ: ಒಂದೇ ಕುಟುಂಬಕ್ಕೆ 98 ಸಾವಿರ ಚ.ಅಡಿ ನಿವೇಶನ!

₹75-80 ಕೋಟಿ ಮೌಲ್ಯದ ಬದಲಿ ನಿವೇಶನ ಮಂಜೂರು ಮಾಡಿದ್ದ ಮುಡಾ ಆಯುಕ್ತ: ಆದೇಶಕ್ಕೆ ತಡೆ
Published 10 ಜುಲೈ 2024, 23:23 IST
Last Updated 10 ಜುಲೈ 2024, 23:23 IST
ಅಕ್ಷರ ಗಾತ್ರ

ಮೈಸೂರು: ನ್ಯಾಯಾಲಯದ ಸ್ಪಷ್ಟ ಆದೇಶ ಇಲ್ಲದಿದ್ದರೂ, ವಿಶೇಷ ಭೂಸ್ವಾಧೀನಾಧಿಕಾರಿಯ ವರದಿ ಹಾಗೂ ಪೌತಿ ವಾರಸುದಾರರು ನೀಡಿದ ಪ್ರಮಾಣಪತ್ರವನ್ನಷ್ಟೇ ಆಧಾರವಾಗಿಟ್ಟುಕೊಂಡು, ಒಂದೇ ಕುಟುಂಬಕ್ಕೆ 98 ಸಾವಿರ ಚದರ ಅಡಿ ಮೌಲ್ಯದ ನಿವೇಶನಗಳನ್ನು ಬದಲಿ ನಿವೇಶನದ ರೂಪದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನೀಡಿದೆ.

ಮುಡಾ ಆಯುಕ್ತ ದಿನೇಶ್‌ಕುಮಾರ್ ವರ್ಗಾವಣೆಗೊಳ್ಳುವ ಎರಡು ವಾರಗಳ ಹಿಂದಷ್ಟೇ, ಅಂದರೆ, ಜೂನ್‌ 15ರಂದು ಈ ಕಡತಕ್ಕೆ ಸಹಿ ಹಾಕಿದ್ದಾರೆ. ವಿಜಯನಗರ ಹಾಗೂ ದಟ್ಟಗಳ್ಳಿ ಭಾಗದಲ್ಲಿ ಅವರಿಗೆ ಬದಲಿ ನಿವೇಶನಗಳನ್ನು ಮಂಜೂರು ಮಾಡಲಾಗಿತ್ತು. ಈ ನಿವೇಶನಗಳ ಮೌಲ್ಯವೇ ₹75–80 ಕೋಟಿಯಷ್ಟಿದೆ. ಪ್ರಕರಣವು ಬೆಳಕಿಗೆ ಬರುತ್ತಲೇ ನಿವೇಶನ ಹಂಚಿಕೆಯನ್ನು ತಡೆ ಹಿಡಿಯಲಾಗಿದೆ.

ಮೈಸೂರಿನ ಗೋಕುಲಂ ಬಡಾವಣೆ ನಿರ್ಮಾಣಕ್ಕಾಗಿ ಉಗ್ರಯ್ಯ ಕುಟುಂಬವು ಮೈಸೂರಿನ ಮಾರಗೌಡನಹಳ್ಳಿ ಸರ್ವೆ ಸಂಖ್ಯೆ 57 ಹಾಗೂ 77/2 ರಲ್ಲಿ ಒಟ್ಟು 8 ಎಕರೆ 14 ಗುಂಟೆ ಜಮೀನನ್ನು ಬಿಟ್ಟುಕೊಟ್ಟಿತ್ತು. ಆದರೆ ಪರಿಹಾರ ಪಡೆದಿರಲಿಲ್ಲ. ಅದನ್ನೇ ಆಧಾರವಾಗಿಟ್ಟುಕೊಂಡು 2023ರಲ್ಲಿ ಜಮೀನಿನ ವಾರಸುದಾರರಾದ ನಾಗರಾಜು ಮುಡಾಕ್ಕೆ ಮನವಿ ಸಲ್ಲಿಸಿದ್ದರು. ಐದು ದಶಕಗಳ ಹಿಂದಿನ ಪ್ರಕರಣವನ್ನೂ 50:50 ಅನುಪಾತದ ಅಡಿ ಪರಿಗಣಿಸಿ, ಬರೋಬ್ಬರಿ 98,206 ಚ.ಅಡಿ ನಿವೇಶನಗಳನ್ನು ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಮಂಜೂರು ಮಾಡಿದ್ದಾರೆ.

ನ್ಯಾಯಾಲಯಗಳ ಆದೇಶ ಉಲ್ಲೇಖ:
‘ಪ್ರತಿ ಹಳೇ ಪ್ರಕರಣಗಳಿಗೂ ನ್ಯಾಯಾಲಯಗಳ ಕೆಲವು ಮಹತ್ವದ ಪ್ರಕರಣಗಳು ಹಾಗೂ ಅದರ ಆದೇಶಗಳನ್ನು ಉಲ್ಲೇಖ ಮಾಡಿರುವ ಮುಡಾ ಅಧಿಕಾರಿಗಳು, ಸಮರ್ಪಕ ದಾಖಲೆಗಳಿಲ್ಲದ ಪ್ರಕರಣಗಳನ್ನೂ 50:50 ಅನುಪಾತದಲ್ಲಿ ಪರಿಗಣಿಸಿರುವುದು ಅಕ್ರಮಕ್ಕೆ ಸಾಕ್ಷಿಯಾಗಿದೆ’ ಎಂಬ ದೂರುಗಳು ಕೇಳಿಬಂದಿವೆ.

‘ಪ್ರಭಾವಿ’ಗಳ ಕಚ್ಚಾಟದಿಂದ ಪ್ರಕರಣ ಬೆಳಕಿಗೆ

ದಶಕಗಳಷ್ಟು ಹಳೆಯದಾದ ಪ್ರಕರಣಗಳಲ್ಲಿ ಭೂಸಂತ್ರಸ್ತರಿಗೆ 80–90 ಸಾವಿರ ಚದರ ಅಡಿಗಳವರೆಗೆ ನಿವೇಶನಗಳನ್ನು ಹಂಚಲಾಗಿದ್ದು ಅದರಲ್ಲಿ ಪ್ರಭಾವಿಗಳ ಕೈವಾಡ ಕೆಲಸ ಮಾಡಿದೆ. ಪ್ರಕರಣವೊಂದರಲ್ಲಿ ಸರ್ಕಾರಿ ಆದೇಶಕ್ಕೆ ವಿರುದ್ಧವಾಗಿ ಸ್ವತಃ ಮುಡಾ ಅಧ್ಯಕ್ಷ ಕೆ. ಮರಿಗೌಡ ನಿವೇಶನ ಹಂಚಿಕೆಗೆ ಶಿಫಾರಸು ಮಾಡಿದ್ದಾರೆ. ನಿವೇಶನಗಳನ್ನು ಕೊಡಿಸುವ ವಿಚಾರದಲ್ಲಿ ಮೂರ್ನಾಲ್ಕು ‘ಪ್ರಭಾವಿ’ಗಳ ಗುಂಪು ಕೆಲಸ ಮಾಡುತ್ತಿತ್ತು. ಅರ್ಜಿಗಳ ಸಲ್ಲಿಕೆಯಿಂದ ಹಿಡಿದು ನಿವೇಶನ ಮಂಜೂರಾತಿ ಆದೇಶದವರೆಗೆ ಎಲ್ಲವನ್ನೂ ಗುಂಪು ನಿರ್ವಹಿಸುತ್ತಿತ್ತು. ಅದಕ್ಕೆ ಪೂರಕವಾಗಿ ಶಿಫಾರಸು–ಒತ್ತಡ ಹೇರುವ ತಂತ್ರಗಾರಿಕೆಯನ್ನೂ ಮಾಡುತ್ತಿತ್ತು. ‘ಪ್ರಕರಣವೊಂದರಲ್ಲಿ ಅರ್ಜಿದಾರರು ಮೊದಲು ಒಂದು ಗುಂಪನ್ನು ಸಂಪರ್ಕಿಸಿದ್ದು ಅಲ್ಲಿ ಕೆಲಸವಾಗದೇ ಇದ್ದಾಗ ಮತ್ತೊಂದು ಗುಂಪಿನ ಮನೆಯ ಕದ ತಟ್ಟಿದ್ದರು. ಅದರಿಂದ ಸಿಟ್ಟಾದ ಎದುರಾಳಿ ಗುಂಪು ನಿವೇಶನ ಹಂಚಿಕೆಗೆ ತಡೆ ಒಡ್ಡಿತು. ಬಳಿಕ ಅದರ ದಾಖಲೆಗಳನ್ನೂ ಬಹಿರಂಗಗೊಳಿಸಿತು’ ಎಂಬ ಮಾತುಗಳು ಕೇಳಿಬರುತ್ತಿವೆ.

ಮುಡಾದಲ್ಲಿ ನಡೆಯಿತೆ ಕಡತ ನಾಶ?

ಕೆಲವು ಪ್ರಮುಖ ಪ್ರಕರಣಗಳಿಗೆ ಸಂಬಂಧಿಸಿದ ಮೂಲ ದಾಖಲೆಗಳು ಮುಡಾ ಕಚೇರಿಯಿಂದ ಕಾಣೆಯಾಗಿದ್ದು ‘ಕಡತ ಯಜ್ಞ’ ನಡೆದಿರುವ ಶಂಕೆ ವ್ಯ‌ಕ್ತವಾಗಿದೆ. ‘ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಲೇ ಎಚ್ಚೆತ್ತ ಮುಡಾ ಅಧಿಕಾರಿ–ಸಿಬ್ಬಂದಿ ತಂಡವೊಂದು ಅಕ್ರಮಕ್ಕೆ ಸಂಬಂಧಿಸಿದ ಮೂಲ ದಾಖಲೆಗಳನ್ನು ನಾಶಪಡಿಸಿದೆ’ ಎಂಬ ಆರೋಪ ಕೇಳಿಬಂದಿದೆ. ನೋಂದಣಿ ದಾಖಲೆ ಪುಸ್ತಕಗಳ ಕೆಲವು ಪುಟಗಳನ್ನು ಹರಿಯಲಾಗಿದೆ. ನಿವೇಶನ ಮಂಜೂರಾತಿಗೆ ಸಂಬಂಧಿಸಿ ಅಧಿಕಾರಿಗಳು ನೀಡಿದ್ದ ಋಣಾತ್ಮಕ ವರದಿಗಳೂ ಸೇರಿದಂತೆ ಪ್ರಮುಖ ದಾಖಲೆಗಳೇ ಇಲ್ಲವಾಗಿವೆ. ಆಯುಕ್ತರ  ಮನೆಗೆ ಕೊಂಡೊಯ್ದಿದ್ದ ಕೆಲವು ಕಡತಗಳೂ ಹಿಂತಿರುಗಿಲ್ಲ ಎನ್ನಲಾಗಿದೆ. ಸದ್ಯ ಲಭ್ಯ ಇರುವ ಕಡತಗಳನ್ನು ಮುಂದಿಟ್ಟುಕೊಂಡಿರುವ ಆರ್‌. ವೆಂಕಟಾಚಲಪತಿ ನೇತೃತ್ವದ ತನಿಖಾ ಸಮಿತಿಯು ಉಳಿದ ದಾಖಲೆಗಳಿಗಾಗಿ ಮುಡಾ ಸಿಬ್ಬಂದಿಯನ್ನು ಪ್ರಶ್ನಿಸುತ್ತಿದೆ. ಪ್ರಕರಣದ ವಿಚಾರಣೆ ಆರಂಭಿಸುತ್ತಲೇ ತನಿಖಾ ಸಮಿತಿಯು ಮುಡಾದ ದಾಖಲೆಗಳ ಕೊಠಡಿಯನ್ನು ಸೀಜ್ ಮಾಡಿದ್ದು ಅಲ್ಲಿ ಮುಡಾ ಸಿಬ್ಬಂದಿಗೂ ಪ್ರವೇಶ ನಿರ್ಬಂಧಿಸಿದೆ. ದಾಖಲೆಗಳ ಕೊಠಡಿಯ ಕಡತಗಳಿಗೆ ಸಂಬಂಧಿಸಿದ ರಿಜಿಸ್ಟರ್‌ಗಳನ್ನೂ ಪರಿಶೀಲಿಸಿದ್ದು ಯಾರಿಂದ ಯಾವ ಅಧಿಕಾರಿಗೆ ಈ ಕಡತಗಳು ಹೋಗಿದ್ದವು ಎಂಬ ಮಾಹಿತಿ ಪಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT