ಮೈಸೂರು: ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.
ಹಳೆ ಜಿಲ್ಲಾಧಿಕಾರಿ ಕಚೇರಿ ಸಮೀಪ ಜಮಾಯಿಸಿದ ಪ್ರತಿಭಟನಕಾರರು, ‘ನೂರಾರು ಕೋಟಿ ಹಗರಣ ನಡೆದರೂ ಆಡಳಿತ ಹಾಗೂ ವಿರೋಧ ಪಕ್ಷಗಳು ರಾಜಕೀಯ ದೊಂಬರಾಟದಲ್ಲಿ ತೊಡಗಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ‘ಪಕ್ಷಗಳ ರಾಜಕೀಯ ಕೆಸರೆರಚಾಟ ನೋಡಿ ಜನರಿಗೆ ಬೇಸರವಾಗಿದೆ. ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣಗಳು ಜನರ ನಿದ್ದೆ ಕೆಡಿಸಿವೆ. 80 ಸಾವಿರ ಜನರು ಮುಡಾ ನಿವೇಶನಕ್ಕೆ ಕಾದು ಕುಳಿತಿದ್ದರೆ, ಸರ್ಕಾರ, ರಾಜಕಾರಣಿಗಳು, ಮುಡಾ ಅಧಿಕಾರಿಗಳು ಹಗರಣದಲ್ಲಿ ತೊಡಗಿದ್ದಾರೆ’ ಎಂದು ಆರೋಪಿಸಿದರು.
‘ಹಗರಣದಲ್ಲಿ ಭಾಗಿಯಾಗಿದ್ದರೆನ್ನಲಾದ ಆಯುಕ್ತರ ವಿಚಾರಣೆ ನಡೆಸದೇ ವರ್ಗಾವಣೆ ಮಾಡಿರುವುದು ಖಂಡನೀಯ’ ಎಂದರು.