ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನ ಬ್ರಾಂಡ್‌ ‘ಆಕಾಶವಾಣಿ’

ಮನೆಯಿಂದ ಕಾರ್ಯಾರಂಭ ಮಾಡಿದ ರೇಡಿಯೊ ಕೇಂದ್ರಕ್ಕೆ ಹಲವು ಪ್ರಥಮಗಳ ಗರಿ
Last Updated 28 ಜುಲೈ 2022, 3:45 IST
ಅಕ್ಷರ ಗಾತ್ರ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ‘ಬ್ರಾಂಡ್‌’ ಮೌಲ್ಯ ತಂದುಕೊಟ್ಟ ಸಂಸ್ಥೆಗಳಲ್ಲಿ ‘ಮೈಸೂರು ಆಕಾಶವಾಣಿ’ಯೂ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ.

ನಗರದ ಅನೇಕ ‍ಪಾರಂಪರಿಕ ಕಟ್ಟಡಗಳಲ್ಲಿ ಯಾದವಗಿರಿಯ ಆಕಾಶವಾಣಿ ಕಟ್ಟಡವೂ ಒಂದಾಗಿದ್ದು, ವಿಶಿಷ್ಟ ಐತಿಹ್ಯ ಹೊಂದಿದೆ.

‘ಆಕಾಶವಾಣಿ ಮೈಸೂರು’ ಜನಕ ಡಾ.ಎಂ.ವಿ. ಗೋಪಾಲಸ್ವಾಮಿ ಅವರಿಂದ ಆರಂಭವಾಗಿ ಕೇಂದ್ರದ ಸಹಾಯಕ ನಿರ್ದೇಶಕರಾಗಿ ಬಂದ ಪ್ರೊ.ಎ.ಎನ್‌.ಮೂರ್ತಿರಾಯರು, ಡಾ.ಎ.ಎಂ.ನಟೇಶ್‌, ಎಂ.ಶಂಕರ್‌, ಎಸ್‌.ಪುಟ್ಟತಾಯಮ್ಮ, ಪಿ.ಎಸ್‌.ರಂಗಾಚಾರ್‌, ಡಾ.ಜೋತ್ಸ್ನಾಕೆ. ಕಾಮತ್‌ ಸೃಜನಶೀಲತೆಯ ಬೆಳಕಿನಲ್ಲಿ ಆಕಾಶವಾಣಿಯನ್ನು ಮುನ್ನಡೆಸಿದ್ದಾರೆ.

ಬೆಳಿಗ್ಗೆ 5.55ರಿಂದ ರಾತ್ರಿ 11.05ರವರೆಗೆ ನಿರಂತರವಾಗಿ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಆರಂಭಿಸಿದ ಹಿಂದಿ ಪಾಠದ ಪ್ರಸಾರ, ‘ಗಾನವಿಹಾರ’ ಸಂಗೀತ ಪಾಠ, ‘ಸುಗಮ ಸಂಗೀತ’... ಎಲ್ಲವೂ ಮೈಸೂರು ಆಕಾಶವಾಣಿಯಲ್ಲೇ ಮೊದಲು ಆರಂಭಗೊಂಡಿದ್ದು.

30ರ ದಶಕದಲ್ಲಿ ದೆಹಲಿ ಕೇಂದ್ರವನ್ನು ಬಿಟ್ಟರೆ ದಿನಕ್ಕೆ ನಾಲ್ಕು ಬಾರಿ ವಾರ್ತಾ ಪ್ರಸಾರ ಮಾಡಿದ ವೈಶಿಷ್ಟ್ಯ ಈ ಕೇಂದ್ರದ್ದು. ಶಿಕ್ಷಣ, ಮಾಹಿತಿ, ಮನರಂಜನೆ ಮೂಲಕ ಕೇಳುಗರ ಬದುಕನ್ನು ಹಸನಾಗಿಸಿದೆ.

ಕೃಷಿ ಸಂಬಂಧಿತ ಕಾರ್ಯಕ್ರಮಗಳ ಪ್ರಸಾರದಲ್ಲೂ ಮೈಸೂರು ಆಕಾಶವಾಣಿ ಮುಂಚೂಣಿಯಲ್ಲಿದೆ. 1945ರಲ್ಲಿ ಸಮುದಾಯ ಕೇಳುಗರಿಗಾಗಿ ಮುನ್ನೂರು ರೇಡಿಯೊ ಸೆಟ್‌ಗಳನ್ನು ಧ್ವನಿವರ್ಧಕಗಳೊಂದಿಗೆ ಹಳ್ಳಿಗಳಿಗೆ ವಿತರಿಸಲಾಗಿತ್ತು. ‘ಗ್ರಾಮಾಂತರ ರೇಡಿಯೊ ಗೋಷ್ಠಿ’ಗಳೂ ಯಶಸ್ವಿಗೊಂಡವು. ನೇಗಿಲ ಯೋಗಿಗಳ ಶ್ರಮ, ಸಾಧನೆ, ಸಂತಸ ಪರಿಚಯಿಸುವ ‘ಕೃಷಿರಂಗ’ ಕಾರ್ಯಕ್ರಮ ಮೂಡಿಬಂದಿದೆ.

ಆಕಾಶವಾಣಿಯಲ್ಲಿ ಸಂಗೀತ, ನಾಟಕ, ಕೃಷಿ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಪ್ರಸಾರ ಮಾಡಲಾಗುತ್ತಿದೆ. ನಾಡಿನ ಹೆಸರಾಂತ ನಾಟಕಕಾರರು, ಸಾಹಿತಿಗಳು ಹಾಗೂ ವಿಜ್ಞಾನಿಗಳು ಸಂದರ್ಶನ ನೀಡಿದ್ದಾರೆ. ಕುವೆಂಪು, ಬೇಂದ್ರೆ ಅವರಿಂದ ಟಿ.ವಿ.ವೆಂಕಟಾಚಲಶಾಸ್ತ್ರಿ ವರೆಗೆ ಸಾಹಿತಿಗಳ ಸಂದರ್ಶನ ಮೂಡಿಬಂದಿವೆ.

ಐದು ನಿಮಿಷಗಳ ಅವಧಿಯ 50ಕ್ಕೂ ಹೆಚ್ಚು ಸರಣಿ ಕಾರ್ಯಕ್ರಮಗಳು ಈಗಲೂ ಪ್ರಸಾರಗೊಳ್ಳುತ್ತಿವೆ. ಭಾರತೀಯ ಸಂಸ್ಕೃತಿ, ನದಿಗಳು, ಸ್ವಾತಂತ್ರ್ಯ ಹೋರಾಟ, ವಿಜ್ಞಾನಿಗಳು, ದೇಶ ವಿದೇಶಗಳ ಸಾಹಿತ್ಯ ದಿಗ್ಗಜರು, ಆಯುರ್ವೇದ ಚಿಕಿತ್ಸೆ, ವಿಜ್ಞಾನದ ಅನ್ವೇಷಣೆಗಳ ಕಾರ್ಯಕ್ರಮಗಳನ್ನು ಒಳಗೊಂಡಿದೆ. ‘ನಿಮ್ಮೊಂದಿಗೆ ಮೈಸೂರು ಆಕಾಶವಾಣಿ’,‘ಲಯ ಸಂಭ್ರಮ’ ಜನಪ್ರಿಯವಾಗಿವೆ.

ದಸರಾ ಸಂದರ್ಭದಲ್ಲಿ ಜಂಬೂಸವಾರಿಯ ವೀಕ್ಷಕ ವಿವರಣೆ ಮಾಡುತ್ತಿರುವುದು ಇದರ ಮತ್ತೊಂದು ಹೆಗ್ಗಳಿಕೆ. ಕಳೆದ ಜೂನ್ ತಿಂಗಳಲ್ಲಿ 20 ದಿನ ‘ಯೋಗ ವಿದ್ಯಾ ಪರಂಪರೆ’ ಕಾರ್ಯಕ್ರಮ ಪ್ರಸಾರ ಮಾಡಿ ಮನೆಮಾತಾಯಿತು.

ಎಎಂನಿಂದ ಎಫ್‌ಎಂವರೆಗೆ...

ಎಎಂನಿಂದ ಎಫ್‌ಎಂವರೆಗೆ ಪ್ರಸಾರ ತಂತ್ರಜ್ಞಾನ ಬದಲಾವಣೆ ಯೊಂದಿಗೆ ಆಕಾಶವಾಣಿ ಮುನ್ನಡೆ ಯುತ್ತಿದೆ. ರೇಡಿಯೊ ಸೆಟ್‌ಗಳಿಂದ ಮೊಬೈಲ್‌ ಫೋನ್‌ಗಳವರೆಗೆ ಬಂದಿದೆ. ಮೈಸೂರು ಆಕಾಶವಾಣಿ ಸೇರಿದಂತೆ ದೇಶದ ಎಲ್ಲಾ 16 ರೇಡಿಯೊ ಕೇಂದ್ರಗಳನ್ನು ಒಳಗೊಂಡ newsonair ಆ್ಯಪ್‌ ಅಭಿವೃದ್ಧಿಪಡಿಸಿದ್ದು, ಅದರಲ್ಲಿ ನಮಗೆ ಬೇಕಾದ ಕೇಂದ್ರಗಳ ಕಾರ್ಯಕ್ರಮಗಳನ್ನು ಆಲಿಸಬಹುದು. ಮುಖ್ಯ ಕಾರ್ಯಕ್ರಮಗಳು ಯೂಟ್ಯೂಬ್‌ನಲ್ಲೂ ಅಪ್‌ಲೋಡ್‌ ಮಾಡಿ ಜಗತ್ತಿನಾದ್ಯಂತ ಕೇಳುಗರಿಗೆ ತಲುಪಿಸುವ ಯಶಸ್ವಿ ಪ್ರಯತ್ನ ಮಾಡಿದೆ.

ಕೋವಿಡ್‌ ಕಾಲದಲ್ಲಿ ನೆರವು: ಆಕಾಶವಾಣಿಯು ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಜನ ಮನೆಯಿಂದ ಹೊರ‌ಕ್ಕೆ ಬರದ ಸ್ಥಿತಿಯಿದ್ದಾಗ ಪ್ರತಿ ದಿನ ನಾಲ್ಕು ಗಂಟೆ ನೇರ ಸಂವಾದ ಕಾರ್ಯಕ್ರಮ ಪ್ರಸಾರ ಮಾಡಿ ನೊಂದವರಿಗೆ ನೆರವು ನೀಡುವ ಸಾಮಾಜಿಕ ಕಳಕಳಿಯ ಕೆಲಸ ಮಾಡಿತು. ಸಾವಿರಕ್ಕೂ ಹೆಚ್ಚು ಜನರಿಗೆ ಇದರ ಸಹಾಯ ದೊರಕಿತು.

‘ಸಮುದ್ಯತಾ ಶ್ರೋತೃ ಬಳಗದ ಸಹಕಾರದೊಂದಿಗೆ 50ಕ್ಕೂ ಹೆಚ್ಚು ಜನರಿಗೆ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು. ರೇಡಿಯೊ ಕೇಂದ್ರಕ್ಕೆ ಜನ ಕರೆ ಮಾಡಿ ಸಮಸ್ಯೆ ಹೇಳಿಕೊಂಡರು. ಲಾಕ್‌ಡೌನ್‌ ಸಮಯದಲ್ಲಿ ಪೊಲೀಸ್‌, ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಿಂದ ಪ್ರೇರಣೆಗೊಂಡು ಜನರಿಗೆ ನೆರವಾದರು. ರೋಗಿಗಳ ಮನೆಗಳಿಗೆ ಔಷಧಿ ತಲುಪಿಸಿದ್ದೇವೆ, ಅಂಚೆ ಕಚೇರಿ, ಬ್ಯಾಂಕ್‌ಗಳಿಂದ ಹಣ ಡ್ರಾ ಮಾಡಿಕೊಟ್ಟಿದ್ದೇವೆ. ಪೊಲೀಸರೊಂದಿಗೆ ಹೋಗಿ ಊಟ ಕೊಡಿಸಿದ್ದೇವೆ. ಬಹಳಷ್ಟು ಜನ ಸ್ವಯಂಪ್ರೇರಿತರಾಗಿ ನೆರವು ನೀಡಲು ಮುಂದೆ ಬಂದರು. ಮಧ್ಯವರ್ತಿಯಾಗಿ ಕೆಲಸ ಮಾಡಿದೆವು’ ಎಂದು ಆಕಾಶವಾಣಿ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದರು.

ಜನ ಕಳುಹಿಸಿದ ಅನುಭವ ಒಳಗೊಂಡ ಬರಹಗಳು ‘ಲಾಕ್‌ಡೌನ್‌ ಕಥೆಗಳಾಗಿ’ ಪ್ರಸಾರಗೊಂಡಿವೆ. ಆಯ್ದ 21 ನಾಟಕಗಳನ್ನು ಯೂಟ್ಯೂಬ್‌ನಲ್ಲಿ ಕೇಳಬಹುದು. ‘ವೀಣೆಯ ಬೆಡಗು ನಾದದ ಸೊಬಗು’ ಒಂದು ವರ್ಷ ಪೂರೈಸಿದೆ. ‘ಅರಿವಿನಶಿಖರ’, ‘ಲಯ ಸಂಭ್ರಮ’, ‘ಸಾವಯವ ಮಾತುಕತೆ’ (150 ಎಪಿಸೋಡ್‌), ‘ಹಾಡು ಹೇಳಿದ ಕಥೆ’, ‘ತೋರಣ ಹೂರಣ’, ‘ಡಾಕ್ಟರ್ ಸಮಯ’, ‘ಮಹಿಳಾ ರಂಗ’ ಜನಪ್ರಿಯ ಕಾರ್ಯಕ್ರಮಗಳಾಗಿವೆ.

ಮನೆಯಿಂದ ಶುರುವಾದ ‘ಬಾನುಲಿ ಕೇಂದ್ರ’

ಒಂದು ಮನೆಯಲ್ಲಿ ಕಾರ್ಯಾರಂಭ ಮಾಡಿದ ರೇಡಿಯೊ ಕೇಂದ್ರ ಹಲವು ಪ್ರಥಮಗಳಿಗೆ ನಾಂದಿ ಹಾಡಿ ದೇಶದಾದ್ಯಂತ ಹೆಸರು ಮಾಡಿತು.

ಒಬ್ಬ ವ್ಯಕ್ತಿಯ ಶ್ರದ್ಧೆ, ನಿರಂತರ ಪರಿಶ್ರಮದಿಂದ ಮನೆಯ ಒಂದು ಭಾಗವೇ ರೇಡಿಯೊ ಕೇಂದ್ರವಾಗಿ ಕೇಳುಗರ ಆಕರ್ಷಣೆಯ ಕೇಂದ್ರವಾಯಿತು.

‘ಆಕಾಶವಾಣಿ ಮೈಸರು’ ಜನಕ ಡಾ.ಎಂ.ವಿ. ಗೋಪಾಲಸ್ವಾಮಿ ಮೂಲತಃ ಮಹಾರಾಜ ಕಾಲೇಜಿನಲ್ಲಿ ಮನಃಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. 1935ರಲ್ಲಿ ಅವರು ದೇಶದ ಮೊಟ್ಟ ಮೊದಲ ಖಾಸಗಿ ಬಾನುಲಿ ಕೇಂದ್ರವನ್ನು ಆರಂಭಿಸಿದರು. ದೇಶದ ಪ್ರಥಮ ‘ನ್ಯಾರೋ ಬ್ರಾಡ್‌ಕಾಸ್ಟಿಂಗ್’ ಪ್ರಯೋಗ ಕೂಡ ಮೈಸೂರಿನದ್ದು. ಈ ಕೀರ್ತಿಯೂ ಗೋಪಾಲಸ್ವಾಮಿ ಅವರಿಗೆ ಸಲ್ಲುತ್ತದೆ. ದೇಶದ ಸಾಂಸ್ಕೃತಿಕ ಕ್ಷೇತ್ರಕ್ಕೆ ಅವರು ನೀಡಿದ ಮಹಾನ್ ಕೊಡುಗೆ.

ಕೇಂದ್ರದ ಮೊದಲ ಪ್ರಸಾರ ರಾಷ್ಟ್ರಕವಿ ಕುವೆಂಪು ಅವರ ಕವಿವಾಣಿಯೊಂದಿಗೆ ಆರಂಭಗೊಂಡಿದ್ದು ಮತ್ತೊಂದು ವಿಶೇಷ. ಮೊಟ್ಟ ಮೊದಲು ಮೂಡಿಬಂದ ಸಂಗೀತ ಕಾರ್ಯಕ್ರಮ ಮೈಸೂರು ವಾಸುದೇವಾಚಾರ್ಯ ಅವರ ಗಾಯನ. ಪ್ರತಿದಿನ ಸಂಜೆ ಕೆಲವು ಗಂಟೆಗಳು ಮಾತ್ರ ಪ್ರಸಾರವಾಗುತ್ತಿತ್ತು. ಮುಂದೆ ಈ ಕಾರ್ಯಕ್ರಮಕ್ಕೆ ಬೇಡಿಕೆ ಹೆಚ್ಚಾಗಿ ಆಸಕ್ತ ಕಲಾವಿದರು ಹೆಚ್ಚಾದರು.

ಗೋಪಾಲಸ್ವಾಮಿಯವರ ‘ಗೃಹಬಾನುಲಿ’ಯಲ್ಲಿ ಸ್ಥಳಾವಕಾಶವೂ ಕಡಿಮೆಯಾಯಿತು. ಹೀಗಾಗಿ 1939ರಲ್ಲಿ ಮೈಸೂರು ದಸರಾ ವಸ್ತುಪ್ರದರ್ಶನದ ಹಳೆಯ ಕಟ್ಟಡದ ಮೊದಲನೇ ಮಹಡಿಯಲ್ಲಿ (ಈಗಿನ ಮೈಸೂರು ಮೆಡಿಕಲ್‌ ಕಾಲೇಜು) ರೇಡಿಯೊ ಕೇಂದ್ರದ ಪ್ರಸಾರ ಮುಂದುವರಿಯಿತು.

ಆರು ವರ್ಷಗಳ ಕಾಲ ಸ್ವಂತ ಖರ್ಚಿನಲ್ಲಿ ಕೇಂದ್ರವನ್ನು ಮುನ್ನಡೆಸಿದರು. ನಂತರ ಆರ್ಥಿಕ ತೊಂದರೆಯಿಂದಾಗಿ ಮಹಾನಗರ ಪಾಲಿಕೆಗೆ ಆಡಳಿತವನ್ನು ವಹಿಸಿಕೊಟ್ಟರು. 1942ರಿಂದ ಮೈಸೂರು ಸಂಸ್ಥಾನದ ಮಹಾರಾಜರ ಸರ್ಕಾರವೇ ಆಡಳಿತ ವಹಿಸಿಕೊಂಡಿತು.

1943ರ ನಂತರ ಗೋಪಾಲಸ್ವಾಮಿ ಅವರ ಸಹೋದ್ಯೋಗಿಯಾಗಿದ್ದ ನಾ.ಕಸ್ತೂರಿ ಅವರನ್ನು ರೇಡಿಯೊ ಕೇಂದ್ರದ ಸಹಾಯಕ ನಿಲಯ ಅಧೀಕ್ಷಕ
ರಾಗಿ ನೇಮಿಸಿದರು. ಆ ವೇಳೆಗೆ ರೇಡಿಯೊ ಕೇಂದ್ರಕ್ಕೆ ಮೈಸೂರು ಆಕಾಶವಾಣಿ ಎಂಬ ಸೂಕ್ತ ಹೆಸರನ್ನು ಇಡಲಾಯಿತು. ಮುಂದೆ ಭಾರತ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿತು. ಇಂಗ್ಲಿಷ್‌ನಲ್ಲಿ ಆಲ್‌ ಇಂಡಿಯಾ ರೇಡಿಯೊ ಎಂಬುದಾಗಿತ್ತು.

ಬೆಂಗಳೂರಿಗೆ ಸ್ಥಳಾಂತರಗೊಂಡ ಮೈಸೂರು ಆಕಾಶವಾಣಿ

ಡಾ.ಎಂ.ವಿ.ಗೋಪಾಲಸ್ವಾಮಿ ಅವರುಕುದುರೆ ಸವಾರಿಹೋಗುವಾಗ ತಮ್ಮ ಮನೆ ಸಮೀಪದ ಜಾಗವನ್ನು ಕಂಡು ‘ಇದೇ ಆಕಾಶವಾಣಿಗೆ ಸೂಕ್ತ ಸ್ಥಳವೆಂದು’ ತೀರ್ಮಾನಿಸಿದರು. ಆ ನಿವೇಶನ ಒಬ್ಬ ಕೌನ್ಸಿಲರದ್ದಾಗಿತ್ತು. ದಿವಾನರ ಅಪ್ಪಣೆ ಪಡೆದು ಮೈಸೂರು ಸರ್ಕಾರದಿಂದ ಖರೀದಿಸುವ ಏರ್ಪಾಡು ಮಾಡಿದರು.

ಮಹಾರಾಜರ ಸೇವೆಯಲ್ಲಿದ್ದ ಜರ್ಮನ್‌ ಆರ್ಕಿಟೆಕ್ಟ್‌ ಎಂಜಿನಿಯರ್ ಆಟ್ಟೊ ಕೊನಿಗ್ಸ್‌ಬರ್ಗರ್‌ ಅವರ ಸಲಹೆ, ಸಹಕಾರದಿಂದ ಆಕಾಶವಾಣಿ ಕೇಂದ್ರ ತಲೆಯೆತ್ತಿತು. ಉತ್ತಮ ಸ್ಟುಡಿಯೊಗಳು ರೂಪುಗೊಂಡವು. 1944ರ ಫೆಬ್ರುವರಿಯಿಂದ ಸ್ವತಂತ್ರ ಕಟ್ಟಡದಲ್ಲಿ ಆಕಾಶವಾಣಿ ಕಾರ್ಯಕ್ರಮ ಮುಂದುವರಿಸಿತು.

1950ರ ದಶಕದಲ್ಲಿ ಬೆಂಗಳೂರು ವಿಶಾಲ ಕರ್ನಾಟಕದ ರಾಜಧಾನಿಯಾದ ಸಂದರ್ಭದಲ್ಲಿ ಅಲ್ಲೊಂದು ಆಕಾಶವಾಣಿ ಕೇಂದ್ರ ಇರಬೇಕೆಂದು ಕೆಲ ರಾಜಕೀಯ ಧುರೀಣರು ಆಲೋಚಿಸಿದರು. ನೂತನವಾಗಿ ಸ್ಥಾಪಿಸುವ ಬದಲು ಆ ವೇಳೆಗಾಗಲೇ ಪ್ರಸಿದ್ಧಿ ಪಡೆದಿದ್ದ ಮೈಸೂರು ಆಕಾಶವಾಣಿಯನ್ನೇ ಬೆಂಗಳೂರಿಗೆ ವರ್ಗಾಯಿಸುವ ಹುನ್ನಾರ ನಡೆಯಿತು. ಅದರಂತೆ 1955ರಲ್ಲಿ ಬೆಂಗಳೂರು ನಿಲಯದಿಂದ ಪ್ರಸಾರ ಮುಂದುವರಿಸಿತು. ಗಡಿಬಿಡಿಯಲ್ಲಿ ಯಂತ್ರೋಪಕರಣ, ಸಿಬ್ಬಂದಿಯನ್ನು ಸ್ಥಳಾಂತರಿಸಲಾಯಿತು. 1974ರ ನವೆಂಬರ್ 14ರಿಂದ ಮತ್ತೆ ಮೈಸೂರಿನಿಂದ ಆಕಾಶವಾಣಿ ಪ್ರಸಾರ ಪುನರಾರಂಭಿಸಿತು.

ಕೇಳುಗರು ಏನಂತಾರೆ...?

ಅತಿರಂಜನೆ ಇಲ್ಲ, ಮಾಹಿತಿಯೇ ಎಲ್ಲಾ

ಚಿಕ್ಕವಯಸ್ಸಿನಿಂದಲೂ ಆಕಾಶವಾಣಿ ಕೇಳುತ್ತಿದ್ದೇನೆ. ಅತೀ ರಂಜನೆ ಇಲ್ಲದ ಕಾರ್ಯಕ್ರಮ ಪ್ರಸಾರವಾಗುತ್ತವೆ. ಹೇಳಿದ್ದನ್ನೇ ಹೇಳಲ್ಲ. ಊಹಾಪೋಹವಿಲ್ಲ ಸತ್ಯವಾದ ಸುದ್ದಿ ಪ್ರಸಾರವಾಗುತ್ತದೆ. ಕೋವಿಡ್‌ ಕಾಲದಲ್ಲಿ ಜನರಿಗೆ ಭೀತಿ ಉಂಟು ಮಾಡದೇ ಧೈರ್ಯ ತುಂಬುವ ಕೆಲಸ ಮಾಡಿತು. ನಮ್ಮ ಮಕ್ಕಳಿಗೆ ಸುದ್ದಿಗಳನ್ನು ರೆಕಾರ್ಡ್‌ ಮಾಡಿ ಕೇಳಿಸುತ್ತಿದ್ದೇನೆ.

ಸೌಮ್ಯಾ, ವಿವೇಕಾನಂದನಗರ

***

ವ್ಯಕ್ತಿತ್ವ ವಿಕಸನವಾಯಿತು

ಆಕಾಶವಾಣಿ ಕೇಳುತ್ತಾ ಕೇಳುತ್ತಾ ವ್ಯಕ್ತಿತ್ವ ವಿಕಸನವಾಯಿತು, ಜ್ಞಾನ ಶಕ್ತಿ ವೃದ್ಧಿಸಿತು. ಆಕಾಶವಾಣಿ ನಮ್ಮದು ಎಂಬುವಂತಾಗಿ ಅನುಸಂಧಾನ ಮಾಡುವಂತಾಗಿದೆ. ಆರೋಗ್ಯಕರ ಸಮಾಜಕ್ಕೆ ಬೇಕಾದ ಕೆಲಸವನ್ನು ಮಾಡುತ್ತಿದೆ. ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಕೇಳುಗರೆಲ್ಲಾ ಒಟ್ಟಾಗಿ ಸಮುದ್ಯತಾ ಶ್ರೋತೃ ಬಳಗ ಮಾಡಿದೆವು. ಕೃಷ್ಣಮೂರ್ತಿಪುರಂನ ಅಂಧ ಸಂಗೀತ ಶಿಕ್ಷಕಿ ಎಂ.ಕೆ.ರುಕ್ಮಿಣಿ ಅವರು ಸಂಘವನ್ನು 2009ರಲ್ಲಿ ಹುಟ್ಟುಹಾಕಿದರು. ಬಳಗಕ್ಕೆ ಆಕಾಶವಾಣಿ ಉದ್ಯೋಗಿಗಳು ಸಹಕಾರ ನೀಡಿದ್ದಾರೆ. ಮೂರು ತಿಂಗಳಿಗೊಮ್ಮ ಹಳ್ಳಿಗಳಿಗೆ ಹೋಗಿ ಜನರಲ್ಲಿ ಆರೋಗ್ಯ ಅರಿವು ಮೂಡಿಸುತ್ತಿದ್ದೇವೆ. ಬಳಗದಲ್ಲಿ 150 ಸದಸ್ಯರಿದ್ದಾರೆ.

ಗೋವಿಂದಾಚಾರ್‌, ಸಮುದ್ಯತಾ ಶ್ರೋತೃ ಬಳಗ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT