ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಜಿಲ್ಲಾಡಳಿತ, ಪಾಲಿಕೆ ಅಧಿಕಾರಿಗಳ ಕಾರ್ಯವೈಖರಿಗೆ ಶಾಸಕ ತನ್ವೀರ್ ಗರಂ

Published 20 ಜೂನ್ 2024, 10:27 IST
Last Updated 20 ಜೂನ್ 2024, 10:27 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲಾಡಳಿತ ಹಾಗೂ ನಗರಪಾಲಿಕೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನರಸಿಂಹರಾಜ ಕ್ಷೇತ್ರದ ಆಡಳಿತಾರೂಢ ಕಾಂಗ್ರೆಸ್‌ ಶಾಸಕ ತನ್ವೀರ್ ಸೇಠ್, ‘ನಾನು ವೇದಿಕೆಯಲ್ಲಲ್ಲ, ಸಾರ್ವಜನಿಕರ ಜತೆ ಕುಳಿತು ಸಮಸ್ಯೆ ಹೇಳಿಕೊಳ್ಳಬೇಕಾದ ಸಮಯ ಬಂದಿದೆ’ ಎಂದು ತರಾಟೆಗೆ ತೆಗೆದುಕೊಂಡರು.

ಇಲ್ಲಿನ ಸಿದ್ಧಾರ್ಥನಗರದ ಜಿಲ್ಲಾಮಟ್ಟದ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಲೋಕಸಭೆ ಚುನಾವಣೆ ನೀತಿಸಂಹಿತೆ ಕಾರಣದಿಂದ ಸರ್ಕಾರಿ ಕೆಲಸಗಳು ನಿಂತಿದ್ದವು. ವಿಧವೆಯರು, ವೃದ್ಧರು, ಅಂಗವಿಕಲರಿಗೆ ಆರೇಳು ತಿಂಗಳಿಂದಲೂ ವೇತನ ಬಂದಿಲ್ಲ. ಇದರಿಂದ ಅವರು ಜನರು ಪರದಾಡುತ್ತಿದ್ದಾರೆ. ಈ ವಿಷಯದಲ್ಲಿ ತುರ್ತಾಗಿ ಸ್ಪಂದಿಸಬೇಕು’ ಎಂದು ಸೂಚಿಸಿದರು.

‘ಬಿಪಿಎಲ್ ಪಡಿತರ ಚೀಟಿ ಅರ್ಜಿಗಳು ವಿಲೇವಾರಿ ಆಗಿಲ್ಲ.‌ ವೈದ್ಯಕೀಯ ಸೌಲಭ್ಯಕ್ಕಾಗಿ ಹಲವರು ಈ ಕಾರ್ಡ್‌ ಬಯಸುತ್ತಿದ್ದಾರೆ. ಎಲ್ಲ ಸೌಲಭ್ಯಕ್ಕೂ ಈ ಚೀಟಿ ಪರಿಗಣಿಸಬಾರದು. ಪಡಿತರಕ್ಕೆ ಮಾತ್ರವೇ ಸೀಮಿತಗೊಳಿಸಬೇಕು’ ಎಂದರು.

‘ಮಳೆಯಿಂದಾದ ಹಾನಿಗೆ ಪರಿಹಾರ ನೀಡುವ ಕೆಲಸವನ್ನು ಜಿಲ್ಲಾಡಳಿತ ಅಥವಾ ಸ್ಥಳೀಯ ಸಂಸ್ಥೆಗಳಿಂದ ಆಗಿಲ್ಲ. ನಗರದಲ್ಲಿ ಒಳಚರಂಡಿ ಸಮಸ್ಯೆ ಬಹಳ ದೊಡ್ಡದಾಗಿ ಪರಿಣಮಿಸಿದೆ. ಇದನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು’ ಎಂದರು.

‘ಪೊಲೀಸರು ಪ್ರವಾಸಿಗರ ವಾಹನಗಳನ್ನು ಅನವಶ್ಯವಾಗಿ ತಪಾಸಣೆ ಮಾಡಿ ತೊಂದರೆ ಕೊಡುತ್ತಿದ್ದಾರೆ. ಇದರಿಂದ ಮೈಸೂರಿಗೆ ಕೆಟ್ಟ ಹೆಸರು ಬರುತ್ತಿದೆ. ಅಲ್ಲದೇ, ಕೆಟ್ಟದಾಗಿಯೂ ಬಿಂಬಿತವಾಗುತ್ತಿದೆ. ಎಲ್ಲೆಲ್ಲಿ ಅವಶ್ಯವೂ ಅಲ್ಲಿ ಸಿಸಿಟಿವಿ ಕ್ಯಾಮೆರಾಗಳಿಲ್ಲ. ಪೊಲೀಸ್ ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಳ್ಳುವುದು ಬಿಟ್ಟು ಬೇರೇನೂ ಮಾಡುತ್ತಿಲ್ಲ’ ಎಂದು ದೂರಿದರು.

‘ನಗರದಲ್ಲಿ ನಿರ್ಮಾಣವಾಗಿರುವ ಅನಧಿಕೃತ ಬಡಾವಣೆಗಳಿಗೆ ಕಾರಣ ಯಾರು? ಇದೆಲ್ಲವನ್ನೂ ಗಂಭೀರವಾಗಿ ಪರಿಗಣಿಸಬೇಕು. ಮುಕ್ತವಾಗಿ ಚರ್ಚಿಸಲು ಅಧಿಕಾರಿಗಳು ಸಭೆಯನ್ನೇ ನಡೆಸುತ್ತಿಲ್ಲ. ಮುಡಾದಲ್ಲೂ ಸಭೆಯಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೆಸರೆ ಎಸ್‌ಟಿಪಿ ಬಳಿ ಪಾಲಿಕೆಗೆ ಸೇರಿದ ಜಾಗ(ಸರ್ವೇ ನಂ. 501, 502ರಲ್ಲಿ)ದಲ್ಲಿ ಖಾಸಗಿಯವರು ವಾಣಿಜ್ಯ ಕಟ್ಟಡ ನಿರ್ಮಿಸಿದ್ದಾರೆ. ಸ್ವತಃ ನಾನೇ ದೂರು ಸಲ್ಲಿಸಿದರೂ ಪಾಲಿಕೆಯಿಂದ ಕ್ರಮ ವಹಿಸಿಲ್ಲ. ಸರ್ಕಾರಿ ಆಸ್ತಿಯನ್ನು ಕಬಳಿಸುತ್ತಾ ಇದ್ದರೂ ತಡೆಯುತ್ತಿಲ್ಲ’ ಎಂದು ಕಿಡಿಕಾರಿದರು.

‘ನಗರದ ಸುತ್ತಲಿನ ಸ್ಥಳೀಯ ಸಂಸ್ಥೆಗಳನ್ನು ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ ಮಾಡಲಾಗಿದೆ. ಆದರೆ, ದಾಖಲಾತಿಗಳನ್ನು ಹಸ್ತಾಂತರಿಸಿಲ್ಲ.‌ ಇದರಿಂದ ಬಹಳ ತೊಂದರೆ ಆಗುತ್ತಿದೆ. ಈ ಸಮಸ್ಯೆ ಪರಿಹರಿಸಬೇಕು.

ಅನಧಿಕೃತ ಬಡಾವಣೆಗಳು ತಲೆ ಎತ್ತದಂತೆ ನೋಡಿಕೊಳ್ಳಬೇಕು’ ಎಂದರು.

‘ಆರೋಗ್ಯದ ತುರ್ತು ಅವಶ್ಯಕತೆ ಇಲ್ಲದವರಿಗೆ ಬಿಪಿಎಲ್ ಕೊಟ್ಟಿದ್ದರೆ ಸಂಬಂಧಿಸಿದ ಅಧಿಕಾರಿಗಳ ತಲೆದಂಡ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಆಹಾರ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

‘ಒಳಚರಂಡಿ, ಸೆಪ್ಟಿಕ್ ಟ್ಯಾಂಕ್‌ ಸೇರಿದಂತೆ ಎಲ್ಲದಕ್ಕೂ ಬಡಾವಣೆಗಳನ್ನು ಅಭಿವೃದ್ಧಿಪಡಿಸಿದವರಿಂದಲೇ ಮುಡಾದವರು ಹಣ ಕಟ್ಟಿಸಿಕೊಳ್ಳುತ್ತಾರೆ. ಆದರೂ ಕೆಲಸ ಮಾಡಿಕೊಡುತ್ತಿಲ್ಲವೇಕೆ?’ ಎಂದು ವಿಧಾನಪರಿಷತ್‌ ಸದಸ್ಯ ವಿವೇಕಾನಂದ ಕೇಳಿದರು.

ಜನಸ್ಪಂದನ ಕಾರ್ಯಕ್ರಮದಲ್ಲಿ ತನ್ವೀರ್ ಸೇಠ್ ಭಾಷಣ‌ಕ್ಕೆ ಆದ್ಯತೆ ನೀಡಿದ್ದಕ್ಕೆ ಶಾಸಕ ಜಿ.ಟಿ. ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು. ‘ಇಲ್ಲಿ ಜನರ ಸಮಸ್ಯೆ ಆಲಿಸಬೇಕು. ಭಾಷಣ ಯಾರಿಗೆ ಬೇಕು?’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT