ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಪಾಲಿಕೆ ಚುಕ್ಕಾಣಿಗಾಗಿ ಪಕ್ಷಗಳ ಪೈಪೋಟಿ, ಕೆರಳಿದ ಕುತೂಹಲ

ಫೆ.24ಕ್ಕೆ ಮೈಸೂರು ಮಹಾನಗರ ಪಾಲಿಕೆಯ ಮೇಯರ್‌, ಉಪ ಮೇಯರ್‌ ಚುನಾವಣೆ
Last Updated 16 ಫೆಬ್ರುವರಿ 2021, 4:05 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ಚುಕ್ಕಾಣಿ ಹಿಡಿಯಲಿಕ್ಕಾಗಿ ಬಿಜೆಪಿ–ಕಾಂಗ್ರೆಸ್ ತೀವ್ರ ಪೈಪೋಟಿ ನಡೆಸಿವೆ. ರಾಷ್ಟ್ರೀಯ ಪಕ್ಷಗಳ ನಡುವಿನ ಜಿದ್ದಾಜಿದ್ದಿಯಲ್ಲಿ ಮತ್ತೊಮ್ಮೆ ತನಗೆ ಅವಕಾಶ ಸಿಗಲಿದೆಯಾ? ಎಂಬ ನಿರೀಕ್ಷೆಯಲ್ಲಿ ಜೆಡಿಎಸ್ ಯಥಾಪ್ರಕಾರ ಕಾದು ನೋಡುವ ತಂತ್ರಗಾರಿಕೆಯ ಮೊರೆಯೊಕ್ಕಿದೆ.

ರಾಜ್ಯದ ವಿವಿಧೆಡೆಯ ಮಹಾನಗರ ಪಾಲಿಕೆಯ ಮೇಯರ್‌–ಉಪ ಮೇಯರ್‌ ಸ್ಥಾನಕ್ಕಾಗಿ ಈಗಾಗಲೇ ಮೀಸಲಾತಿ ಪ್ರಕಟಗೊಂಡಿದೆ. ಮೈಸೂರು ಮಹಾನಗರ ಪಾಲಿಕೆಯ ಮೇಯರ್‌ ಸ್ಥಾನ ಮಹಿಳೆ (ಸಾಮಾನ್ಯ), ಉಪ ಮೇಯರ್‌ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಇದೀಗ ಚುನಾವಣೆ ಫೆ.24ರಂದು ನಿಗದಿಯಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಮಹಿಳಾ ಸಾಮಾನ್ಯ, ಸಾಮಾನ್ಯ ವರ್ಗಕ್ಕೆ ಎರಡೂ ಸ್ಥಾನಗಳು ಮೀಸಲಾಗಿದ್ದು, ಆಕಾಂಕ್ಷಿಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಬಹುತೇಕ ಸದಸ್ಯರು ಈಗಾಗಲೇ ಪಟ್ಟ ಗಿಟ್ಟಿಸಿಕೊಳ್ಳಲಿಕ್ಕಾಗಿ ತಂತ್ರಗಾರಿಕೆ ರೂಪಿಸಲಾರಂಭಿಸಿದ್ದಾರೆ. ಮೈತ್ರಿಗಾಗಿ ವರಿಷ್ಠರ ಮೇಲೆಯೇ ಪರೋಕ್ಷವಾಗಿ ಒತ್ತಡ ಹಾಕುವ ಜೊತೆಗೆ, ಲಾಬಿಯನ್ನೂ ಆರಂಭಿಸಿದ್ದಾರೆ.

ಪಕ್ಷಗಳ ‘ಮೈತ್ರಿ’ ಅನಿವಾರ್ಯ: ಪಾಲಿಕೆಯಲ್ಲಿ ಯಾವೊಂದು ಪಕ್ಷಕ್ಕೂ ಬಹುಮತವಿಲ್ಲ. ಅಧಿಕಾರದ ಚುಕ್ಕಾಣಿಗಾಗಿ ಮೈತ್ರಿ ಅನಿವಾರ್ಯವಾಗಿದೆ. ಮೊದಲ ಅವಧಿಯಿಂದಲೇ ಕಾಂಗ್ರೆಸ್‌–ಜೆಡಿಎಸ್‌ ಐದು ವರ್ಷದ ಹೊಂದಾಣಿಕೆ ಒಪ್ಪಂದ ಮಾಡಿಕೊಂಡಿವೆ.

ಈ ಒಡಂಬಡಿಕೆಯಂತೆ ಈ ಬಾರಿಯ ಮೇಯರ್‌ ಸ್ಥಾನ ಕಾಂಗ್ರೆಸ್‌ಗೆ, ಉಪ ಮೇಯರ್‌ ಸ್ಥಾನ ಜೆಡಿಎಸ್‌ಗೆ ಸಿಗಬೇಕಿದೆ. ಬದಲಾದ ರಾಜಕಾರಣದಲ್ಲಿ ಹಳೆಯ ಮೈತ್ರಿಯೇ ಮುಂದುವರೆಯಲಿದೆಯಾ? ಹೊಸ ಹೊಂದಾಣಿಕೆ ನಡೆಯಲಿದೆಯಾ? ಎಂಬುದು ಇನ್ನೂ ಖಚಿತಪಟ್ಟಿಲ್ಲ. ಸದಸ್ಯರ ಹಂತದಲ್ಲಷ್ಟೇ ಚರ್ಚೆ ನಡೆದಿದೆ. ಯಾರೊಬ್ಬರಿಗೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ.

ಚುನಾವಣಾ ದಿನಾಂಕ ಪ್ರಕಟಗೊಳ್ಳುತ್ತಿದ್ದಂತೆ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಲಾರಂಭಿಸಿದೆ. ಇದು ಆಯಾ ಪಕ್ಷದ ವರಿಷ್ಠರಿಗೆ ತಲೆ ನೋವಾಗಿದೆ. ಬಿಜೆಪಿಯ ಆಕಾಂಕ್ಷಿಗಳು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನೇ ಭೇಟಿಯಾಗಿ ತಮ್ಮ ಮನದಿಂಗಿತ ಹೇಳಿಕೊಂಡಿದ್ದಾರೆ.

ಬಿಜೆಪಿಯಲ್ಲಿ ಹಿರಿಯ ಸದಸ್ಯರಾದ ಸುನಂದಾ ಪಾಲನೇತ್ರ, ಪ್ರಮೀಳಾ ಭರತ್ ಪ್ರಮುಖ ಆಕಾಂಕ್ಷಿಗಳಾಗಿದ್ದರೆ, ಕಾಂಗ್ರೆಸ್‌ನಲ್ಲಿ ಹಿರಿಯ ಸದಸ್ಯೆ ಶಾಂತಕುಮಾರಿ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶೋಭಾ ಸುನೀಲ್‌, ಶಾಸಕ ತನ್ವೀರ್‌ ಸೇಠ್‌ ಆಪ್ತ ಶೌಕತ್ ಪಾಷಾ ಪತ್ನಿ ಸಹ ಮೇಯರ್‌ ಹುದ್ದೆಯ ಪೈಪೋಟಿಯಲ್ಲಿದ್ದಾರೆ ಎಂಬುದು ತಿಳಿದು ಬಂದಿದೆ.

ಜೆಡಿಎಸ್‌ನಲ್ಲಿ ಹಿರಿಯ ಸದಸ್ಯರಾದ ಪ್ರೇಮಾ ಶಂಕರೇಗೌಡ, ಭಾಗ್ಯಾ ಮಾದೇಶ್‌, ಅಶ್ವಿನಿ ಅನಂತು, ಲಕ್ಷ್ಮೀ ಶಿವಣ್ಣ ಆಕಾಂಕ್ಷಿಗಳಾಗಿದ್ದು, ಯಾವ್ಯಾವ ಪಕ್ಷಗಳ ನಡುವೆ ಮೈತ್ರಿ ಏರ್ಪಡಲಿದೆ ಎಂಬುದರ ಮೇಲೆ ಮೇಯರ್‌ ಅಭ್ಯರ್ಥಿ ಯಾರಾಗಲಿದ್ದಾರೆ? ಎಂಬುದು ನಿರ್ಧಾರವಾಗಲಿದೆ. ಇದು ಮೈಸೂರು ರಾಜಕಾರಣದಲ್ಲಿ ಕುತೂಹಲವನ್ನು ಕೆರಳಿಸಿದೆ.

ಕಮಲ ಅರಳಿಸಲು ಕಸರತ್ತು
ಮೈಸೂರು ಮಹಾನಗರ ಪಾಲಿಕೆಯಲ್ಲಿ ಮೊದಲ ಬಾರಿಗೆ ‘ಕಮಲ’ ಅರಳಿಸಲೇಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಯತ್ನಿಸಿದ್ದು, ಸಂಸದ ಪ್ರತಾಪ ಸಿಂಹ, ಶಾಸಕ ಎಲ್‌.ನಾಗೇಂದ್ರ ಸಚಿವರಿಗೆ ಸಾಥ್‌ ನೀಡಿದ್ದಾರೆ.

ಖಾಸಗಿ ಕಾರ್ಯಕ್ರಮಕ್ಕಾಗಿ ಮೈಸೂರಿಗೆ ಬಂದು ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭಾನುವಾರ ಬೆಳಿಗ್ಗೆ ನಗರ ಘಟಕದ ಪ್ರಮುಖರು, ಮೇಯರ್‌ ಸ್ಥಾನದ ಆಕಾಂಕ್ಷಿಗಳು ಭೇಟಿಯಾಗಿ, ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ಅವಕಾಶವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ರಾಜ್ಯ ಘಟಕದ ಅಧ್ಯಕ್ಷರು, ನೀವು ನೀಡುವ ಸೂಚನೆಯಂತೆ ಕಾರ್ಯತಂತ್ರ ರೂಪಿಸುವುದಾಗಿ ತಿಳಿಸಿದ್ದಾರೆ ಎಂಬುದು ಕಮಲ ಪಾಳೆಯದಿಂದ ಗೊತ್ತಾಗಿದೆ.

‘2010–11ರಲ್ಲಿ ನನಗೆ ಮೇಯರ್‌ ಆಗುವ ಅವಕಾಶವಿತ್ತು. ಆಗ ಕೈ ತಪ್ಪಿತ್ತು. ಇದೀಗ ಸುವರ್ಣಾವಕಾಶ ಒದಗಿ ಬಂದಿದೆ. ಜೆಡಿಎಸ್‌ ಜೊತೆ ಮೈತ್ರಿ ಶೇ 100ರಷ್ಟು ಖಚಿತ’ ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಲ್‌.ನಾಗೇಂದ್ರ ತಿಳಿಸಿದರು.

ಸಾರಾ–ತನ್ವೀರ್‌ ಮಾತುಕತೆ
‘ನಮ್ಮ ದೋಸ್ತಿಯೇ ಮುಂದುವರೆಯಲಿದೆ. ಈಗಾಗಲೇ ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌, ತನ್ವೀರ್‌ ಸೇಠ್‌ ಮಾತನಾಡಿದ್ದಾರೆ. ಬಿಜೆಪಿ ಜೊತೆ ಕೈ ಜೋಡಿಸಲು ಜೆಡಿಎಸ್‌ನ ಅಲ್ಪಸಂಖ್ಯಾತ ಸದಸ್ಯರು ತೀವ್ರ ವಿರೋಧವಿದ್ದಾರೆ. ಕೆಲ ಸದಸ್ಯರಿಗೂ ಸಹಮತವಿಲ್ಲ ಎಂಬುದು ಗೊತ್ತಾಗಿದೆ’ ಎಂದು ಮೈಸೂರು ನಗರ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಆರ್‌.ಮೂರ್ತಿ ತಿಳಿಸಿದರು.

‘ಪ್ರಸಕ್ತ ಬೆಳವಣಿಗೆಗಳನ್ನು ಕಾರ್ಯಾಧ್ಯಕ್ಷರ ಮೂಲಕ ಈಗಾಗಲೇ ಕೆಪಿಸಿಸಿ ಗಮನಕ್ಕೆ ತಂದಿದ್ದೇವೆ. ಈ ಹಿಂದಿನ ಬಾರಿ ಕೃಷ್ಣ ಬೈರೇಗೌಡ ವೀಕ್ಷಕರಾಗಿ ಬಂದಿದ್ದರು. ಈ ಬಾರಿ ಇನ್ನೂ ಯಾರ ನೇಮಕವೂ ಆಗಿಲ್ಲ. ಶೀಘ್ರದಲ್ಲೇ ಕೆಪಿಸಿಸಿಯಿಂದ ಸೂಚನೆ ಬರಲಿದೆ. ವೀಕ್ಷಕರ ಸಮ್ಮುಖದಲ್ಲಿ ಜೆಡಿಎಸ್‌ ಮುಖಂಡರ ಜೊತೆ ಮಾತುಕತೆ ನಡೆಸಲಿದ್ದೇವೆ’ ಎಂದು ಅವರು ಹೇಳಿದರು.

‘ಸಿದ್ದರಾಮಯ್ಯ ಹೇಳಿದ್ದು ರಾಜ್ಯ ಮಟ್ಟದಲ್ಲಿ ಹೊಂದಾಣಿಕೆಯಿಲ್ಲ ಎಂದು. ಸ್ಥಳೀಯ ಮೈತ್ರಿಗಲ್ಲ. ಮೇಯರ್‌ ಸ್ಥಾನ ಮಹಿಳಾ ಸಾಮಾನ್ಯಕ್ಕೆ ಮೀಸಲಾಗಿರುವುದರಿಂದ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿದೆ. ಒತ್ತಡ–ಲಾಬಿಯೂ ಬಿರುಸುಗೊಂಡಿದೆ’ ಎಂದು ಮೂರ್ತಿ ತಿಳಿಸಿದರು.

ವರಿಷ್ಠರ ನಿರ್ಧಾರವೇ ಅಂತಿಮ
‘ಮೈತ್ರಿಗೆ ಸಂಬಂಧಿಸಿದಂತೆ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ. ಇದಕ್ಕೆ ಜೆಡಿಎಸ್‌ ಸದಸ್ಯರ ಸಹಮತವಿದೆ’ ಎಂದು ಮೇಯರ್‌ ತಸ್ನಿಂ ತಿಳಿಸಿದರು.

‘ಶಾಸಕ ಸಾ.ರಾ.ಮಹೇಶ್‌ ಈ ಹಿಂದೆಯೇ ಸದಸ್ಯರ ಸಭೆ ನಡೆಸಿದ್ದರು. ಅಭಿಪ್ರಾಯವನ್ನೂ ಆಲಿಸಿದ್ದರು’ ಎಂದು ಅವರು ಹೇಳಿದರು.

‘ಮೈಸೂರಿಗೆ ಸಂಬಂಧಿಸಿದಂತೆ ಜೆಡಿಎಸ್‌ನಲ್ಲಿ ಅಬ್ದುಲ್‌ ಅಜೀಜ್‌ ಅಬ್ದುಲ್ಲಾ ಅಲ್ಪಸಂಖ್ಯಾತರ ಮುಖಂಡರು. ಯಾರನ್ನು ಬೆಂಬಲಿಸಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲಿರುವವರು. ಈಗಾಗಲೇ ಎಲ್ಲ ಮಾಹಿತಿ ಅವರಲ್ಲಿದೆ. ಶಾಸಕ ಸಾ.ರಾ.ಮಹೇಶ್‌ ಜೊತೆ ಮಾತುಕತೆ ನಡೆಸಲಿದ್ದಾರೆ. ಆ ನಂತರವೇ ಈ ಬಾರಿಯ ಮೇಯರ್‌–ಉಪ ಮೇಯರ್‌ ಚುನಾವಣೆಯಲ್ಲಿ ಯಾರಿಗೆ ಬೆಂಬಲ ಕೊಡುವುದು, ಯಾರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಎಂಬುದು ಘೋಷಣೆಯಾಗಲಿದೆ’ ಎಂದು ಅಲ್ಪಸಂಖ್ಯಾತ ಸಮುದಾಯದ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

*
ಒಂದೆರಡು ದಿನದಲ್ಲೇ ಉಭಯ ಪಕ್ಷಗಳ ಶಾಸಕರಾದ ತನ್ವೀರ್‌ ಸೇಠ್‌, ಸಾ.ರಾ.ಮಹೇಶ್‌ ಮತ್ತೊಮ್ಮೆ ಮಾತುಕತೆ ನಡೆಸಲಿದ್ದಾರೆ. ನಂತರ ಸದಸ್ಯರ ಸಭೆ ನಡೆಸುತ್ತೇವೆ
-ಆರ್‌.ಮೂರ್ತಿ, ನಗರ ಕಾಂಗ್ರೆಸ್‌ ಅಧ್ಯಕ್ಷ

*
ಬಿಜೆಪಿ ಅಧಿಕಾರ ಹಿಡಿಯೋದು ಖಚಿತ. ಹೊರಟ್ಟಿಗೆ ನಾವು ಬೆಂಬಲ ಕೊಟ್ಟಿದ್ದೇವೆ. ಇದು ಮೈಸೂರಿನಲ್ಲಿ ಅನುಕೂಲಕರವಾಗಬಹುದು. ಮೇಲ್ಮಟ್ಟದಲ್ಲಿ ಮಾತುಕತೆ ನಡೆದಿದೆ
-ಎಲ್.ನಾಗೇಂದ್ರ, ಶಾಸಕ

*
ಮೇಯರ್–ಉಪ ಮೇಯರ್‌ ಚುನಾವಣೆಗೆ ಸಂಬಂಧಿಸಿದಂತೆ ನಾಳೆ ಅಥವಾ ನಾಡಿದ್ದು ಜೆಡಿಎಸ್ ಸದಸ್ಯರ ಸಭೆ ನಡೆಯಲಿದೆ. ವರಿಷ್ಠರ ನಿರ್ಣಯವೇ ಅಂತಿಮಗೊಳ್ಳಲಿದೆ
-ತಸ್ನಿಂ, ಮೇಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT