ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂವಿಧಾನದ ಪ್ರಾಣ ಪ್ರತಿಷ್ಠಾಪನೆ ಅಗತ್ಯ: ಹೋರಾಟಗಾರ್ತಿ ಬೃಂದಾ ಕಾರಟ್‌ ಅಭಿಪ್ರಾಯ

Published 2 ಮಾರ್ಚ್ 2024, 17:05 IST
Last Updated 2 ಮಾರ್ಚ್ 2024, 17:05 IST
ಅಕ್ಷರ ಗಾತ್ರ

ಮೈಸೂರು: ‘ದೇಶದ ಸಂವಿಧಾನವು ಐಸಿಯುಗೆ ತಲುಪಿದ್ದು, ಅದರ ಪ್ರಾಣ ಪುನರ್‌ಪ್ರತಿಷ್ಠಾಪನೆಯ ಅಗತ್ಯವಿದೆ’ ಎಂದು ಹೋರಾಟಗಾರ್ತಿ ಬೃಂದಾ ಕಾರಟ್‌ ಅಭಿಪ್ರಾಯಪಟ್ಟರು.

ಪ್ರಗತಿಪರ ಸಂಘಟನೆಗಳ ಒಕ್ಕೂಟವು ‘ಪ. ಮಲ್ಲೇಶ್ 90’ ನೆನಪಿನಲ್ಲಿ ಇಲ್ಲಿನ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ಭಾರತ ಜನತಂತ್ರದ ಸಮಕಾಲೀನ ಸವಾಲುಗಳು’ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ‘ಭಾರತದಲ್ಲಿ ಸಮಕಾಲೀನ ಮಹಿಳಾ‌‌ ಚಳವಳಿಗಳು ಹಾಗೂ ಸವಾಲುಗಳು’ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ದೇಶ ಆಳುತ್ತಿರುವ ಬಿಜೆಪಿ ಹಾಗೂ ಅದರ ಬೆನ್ನೆಲುಬಾದ ಆರ್‌ಎಸ್ಎಸ್‌ನಿಂದ ಸಂವಿಧಾನ ಐಸಿಯು ಸ್ಥಿತಿಗೆ ತಲುಪಿದೆ. ಹಿಂದುತ್ವದ ಪ್ರತಿಪಾದನೆ ಹೆಸರಿನಲ್ಲಿ ಜಾತ್ಯತೀತ ರಾಷ್ಟ್ರವನ್ನು ಅಂಧಕಾರಕ್ಕೆ ತಳ್ಳುವ ಪ್ರಯತ್ನ ನಡೆದಿದೆ. ಧಾರ್ಮಿಕ ಕಾರ್ಯಕ್ರಮಗಳು ರಾಜಕೀಯ ಕಾರ್ಯಕ್ರಮಗಳಾಗಿವೆ. ನಿಜವಾಗಿ ನಮಗೆ ರಾಮನ ಪ್ರಾಣ ಪ್ರತಿಷ್ಠಾಪನೆಗಿಂತ ಸಂವಿಧಾನದ ಪ್ರಾಣ ಪ್ರತಿಷ್ಠಾಪನೆಯ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

‘ಆಳುವ ಸರ್ಕಾರವೇ ಕೋಮುವಾದವನ್ನು ಪ್ರಚೋದಿಸುತ್ತಿದೆ. ಅಲ್ಪಸಂಖ್ಯಾತರನ್ನೇ ಗುರಿಯಾಗಿಸಿ ದಾಳಿ ನಡೆಯುತ್ತಿದೆ. ಬಿಲ್ಕಿಸ್ ಬಾನು, ಶ್ರದ್ಧಾ ವಾಲ್ಕರ್ ಮೊದಲಾದ ಪ್ರಕರಣಗಳಲ್ಲಿ ಸಂತ್ರಸ್ತ ಮಹಿಳೆಯರ ಜಾತಿ- ಧರ್ಮದ ಬಗ್ಗೆ ಬಹಿರಂಗ ಹೇಳಿಕೆ ಹಾಗೂ ಲೈಂಗಿಕ ಅಪರಾಧಕ್ಕೆ ಕೋಮುವಿನ ಬಣ್ಣ ಬಳಿಯುತ್ತಿರುವುದು ವಿಷಾದದ ಸಂಗತಿ. ಬಿಜೆಪಿ ಇದನ್ನೇ ತನ್ನ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ’ ಎಂದು ದೂರಿದರು.

‘ಶೇ 90ರಷ್ಟು ಅತ್ಯಾಚಾರ ಪ್ರಕರಣಗಳು ಒಂದೇ ಕೋಮಿನ ಜನರಿಂದ ನಡೆದಿವೆ ಎಂದು ಆರ್‌ಎಸ್ಎಸ್ ಮುಖಂಡರು ಹೇಳುತ್ತಾರೆ. ಆದರೆ, ಹಿಂದೂ ಧರ್ಮದ ಮೇಲ್ವರ್ಗದ ಪುರುಷರು ಅತ್ಯಾಚಾರ ಮಾಡಿದಾಗ ಮಾತ್ರ ಅವರ ಧ್ವನಿ ಬದಲಾಗುತ್ತದೆ. ಸಂತ್ರಸ್ತೆಯರ ನಡೆ–ನುಡಿ, ತೊಟ್ಟ ಬಟ್ಟೆಗಳ ಮೇಲೆಯೇ ಆರೋಪಿಸಲಾಗುತ್ತದೆ. ದಲಿತ ಮಹಿಳೆಯ ಮೇಲೆ ಮೇಲ್ವರ್ಗದವರಿಂದ ಅತ್ಯಾಚಾರ ನಡೆದಾಗ ಇವರು ಪ್ರಶ್ನಿಸುವುದಿಲ್ಲ. ಸೀತೆ ಲಕ್ಷ್ಮಣ ರೇಖೆ ದಾಟಿದ್ದಕ್ಕೆ ಆಕೆಯನ್ನೇ ಶಿಕ್ಷಿಸಬೇಕು ಎಂದು ಮನುಸ್ಮೃತಿ ಹೇಳುತ್ತದೆ. ಆರ್‌ಎಸ್ಎಸ್ ಚಿಂತನೆಯೂ ಇದೇ ಆಗಿದೆ’ ಎಂದು ಕಿಡಿಕಾರಿದರು.

‘ದೇಶದಲ್ಲಿ ನಿತ್ಯ ಸರಾಸರಿ 88 ಅತ್ಯಾಚಾರ ಪ್ರಕರಣಗಳು ವರದಿ ಆಗುತ್ತಿವೆ. ಅದರಲ್ಲಿ ಶೇ 25ರಷ್ಟು ಪ್ರಕರಣಗಳಿಗೆ ಮಾತ್ರ ಶಿಕ್ಷೆ ಆಗುತ್ತಿದೆ. ಸಂಸತ್ತಿನಲ್ಲಿ ಮಾಹಿತಿ ನೀಡಿದಂತೆ, 2.4 ಲಕ್ಷ ಪೋಕ್ಸೊ ಪ್ರಕರಣಗಳು ಇನ್ನೂ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿವೆ’ ಎಂದು ವಿವರಿಸಿದರು.

‘ದೇಶದಲ್ಲಿ ಮಹಿಳೆಯರು ಹಿಂದೆಂದೂ ತಮ್ಮ ಹಕ್ಕುಗಳಿಗಾಗಿ ಇಷ್ಟು ಹೋರಾಟ ಮಾಡುವ, ಪ್ರತಿರೋಧ ತೋರುವ ಕಾಲ ಬಂದಿರಲಿಲ್ಲ. ಪ್ರತಿ ಕ್ಷಣ-ದಿನ ಮಹಿಳೆಯರ ಹಕ್ಕುಗಳ ಧಮನ ಯತ್ನ ನಡೆದಿದೆ. ಸಂವಿಧಾನ ನಮಗೆ ನೀಡಿದ ಹಕ್ಕುಗಳಿಗೆ ಚ್ಯುತಿ ಬಂದಿದೆ. ಕಳೆದ ಹತ್ತು ವರ್ಷದಲ್ಲಿ ಮೋದಿ ಸರ್ಕಾರ ವಿಧವಾ ವೇತನವನ್ನು ಬಿಡಿಗಾಸು ಏರಿಸಿಲ್ಲ. ಈಗಲಾದರೂ ಶೇ 33ರಷ್ಟು ಮೀಸಲಾತಿ ಕೊಡಿ ಎಂದರೆ ಜನಗಣತಿ, ಕ್ಷೇತ್ರ‌‌ ಪುನರ್ ವಿಂಗಡನೆ ಹೆಸರಲ್ಲಿ ಮಸೂದೆಯನ್ನು ಹತ್ತು ವರ್ಷಕ್ಕೆ‌ ಮುಂದೂಡಲಾಗಿದೆ’ ಎಂದು ದೂರಿದರು.

ಪ್ರಾಧ್ಯಾಪಕಿ ಸಬಿತಾ ಬನ್ನಾಡಿ, ನಿವೃತ್ತ ‍ಪ್ರಾಧ್ಯಾಪಕಿ ಆರ್. ಸುನಂದಮ್ಮ ವಿಚಾರ ಮಂಡಿಸಿದರು. ಎಂ. ಉಮಾದೇವಿ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT