ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಗುಣಮಟ್ಟದ ಸೌಲಭ್ಯಕ್ಕೆ ಸಿದ್ದರಾಮಯ್ಯ ತಾಕೀತು

Published 3 ಸೆಪ್ಟೆಂಬರ್ 2024, 7:11 IST
Last Updated 3 ಸೆಪ್ಟೆಂಬರ್ 2024, 7:11 IST
ಅಕ್ಷರ ಗಾತ್ರ

ಮೈಸೂರು: ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಗುಣಮಟ್ಟದ ವ್ಯವಸ್ಥೆ ಕಲ್ಪಿಸದಿದ್ದರೆ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.

ಚಾಮುಂಡಿ ಬೆಟ್ಟದ ದಾಸೋಹ ಭವನದಲ್ಲಿ ಮಂಗಳವಾರ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು‌.

‘ಹಿಂದೆಯೂ ಸಮಿತಿ ಇತ್ತು. ಆದರೆ ಪ್ರಾಧಿಕಾರ ರಚನೆಯಿಂದಾಗಿ ಅಭಿವೃದ್ಧಿಗೆ ಹೆಚ್ಚಿನ ಅಧಿಕಾರ ಮತ್ತು ಅವಕಾಶ ಒದಗಿದಂತಾಗಿದೆ. ಇಲ್ಲಿಗೆ ಬರುವ ಭಕ್ತರಿಗೆ ಆರೋಗ್ಯಕರ ಸವಲತ್ತು ಹಾಗೂ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ’ ಎಂದರು.

ಶ್ರೀ ಕ್ಷೇತ್ರ ಹಾಗೂ ದೇವಸ್ಥಾನದ ಸಂಪ್ರದಾಯ ಮತ್ತು ಚರಿತ್ರೆ, ಘನತೆಯನ್ನು ಕಾಪಾಡುವ ಜೊತೆಗೆ ಉನ್ನತೀಕರಿಸಬೇಕು ಎಂದರು.

ಪ್ರಾಧಿಕಾರ ವ್ಯವಸ್ಥಿತವಾಗಿ ನಡೆಯಬೇಕು. ಕಾಲ ಕಾಲಕ್ಕೆ ಸಭೆಗಳು ನಡೆದು ಹೆಚ್ಚಿನ ಶ್ರಮ ಶುಚಿತ್ವಕ್ಕೆ ಹಾಕಬೇಕು. ಕಸವನ್ನು ಆಗಿಂದಾಗ್ಗೆ ತೆರವುಗೊಳಿಸಬೇಕು. ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ವಾಹನ ನಿಲುಗಡೆಗೆ ಇನ್ನಷ್ಟು ಸುಸಜ್ಜಿತ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಹೇಳಿದರು.

ಕ್ಷೇತ್ರದ ಅಭಿವೃದ್ಧಿಗೆ ಹಣಕ್ಕೆ ತೊಂದರೆ ಇಲ್ಲ. ಕೇಳಿದಷ್ಟು ಹಣವನ್ನು ಕೇಳಿದಾಗಲೆಲ್ಲಾ ಒದಗಿಸಲಾಗುತ್ತಿದ್ದರೂ ಕೆಲಸಗಳು ಮಾತ್ರ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಇದನ್ನು ನಾನು ಸಹಿಸಲ್ಲ. ಸಮಯಕ್ಕೆ ಸರಿಯಾಗಿ ಕೆಲಸ ಮಾಡದಿದ್ದರೆ ನಾನು ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಸಿದರು.

ತಾಯಿ, ಶಕ್ತಿ ದೇವತೆ ಚಾಮುಂಡಿ ದೇವಿ ಬಗ್ಗೆ ಕೋಟ್ಯಂತರ ಮಂದಿಗೆ ಅಪಾರ ಭಕ್ತಿ, ಶ್ರದ್ಧೆ, ನಂಬಿಕೆ ಇದೆ. ದೇಶದ ಮೂಲೆ ಮೂಲೆಗಳಿಂದ ಭಕ್ತರು ಬರುತ್ತಾರೆ. ಇವರೆಲ್ಲರಿಗೂ ಅಗತ್ಯ ಸವಲತ್ತುಗಳನ್ನು ಒದಗಿಸಬೇಕು ಎಂದು ಸೂಚನೆ ನೀಡಿದರು.

ಕೊಪ್ಪಳ ಹುಲಿಗಮ್ಮ ದೇವಸ್ಥಾನ ಮತ್ತು ಘಾಟಿ ಸುಬ್ರಮಣ್ಯ ದೇವಸ್ಥಾನಗಳ ಹೆಚ್ಚಿನ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಬಗ್ಗೆಯೂ ಹೆಚ್ಚಿನ ಬೇಡಿಕೆ ಇದೆ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ, ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ರವಿಶಂಕರ್, ಡಾ.ತಿಮ್ಮಯ್ಯ, ಹರೀಶ್ ಗೌಡ, ಜಿ.ಟಿ. ದೇವೇಗೌಡ, ವಿವೇಕಾನಂದ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT