ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಕ್ರೀದ್: ಹೆಚ್ಚಿದ ಕುರಿ ವ್ಯಾಪಾರ

ಮಿಲೇನಿಯಂ ವೃತ್ತದಲ್ಲಿ ನೆರೆದ ವರ್ತಕರು
Published 16 ಜೂನ್ 2024, 7:42 IST
Last Updated 16 ಜೂನ್ 2024, 7:42 IST
ಅಕ್ಷರ ಗಾತ್ರ

ಮೈಸೂರು: ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾದ, ತ್ಯಾಗ ಹಾಗೂ ಬಲಿದಾನದ ಪ್ರತೀಕವಾಗಿ ಆಚರಿಸುವ ಬಕ್ರೀದ್ (ಈದ್ ಉಲ್ ಅದಾ) ಹಬ್ಬ ಜೂನ್ 17ರಂದು ನಡೆಯುತ್ತಿದ್ದು, ಪೂರ್ವಭಾವಿ ಸಿದ್ಧತೆಗಳು ಭರದಿಂದ ಸಾಗಿವೆ. ನಗರದ ಎಲ್‌ಐಸಿ ವೃತ್ತ (ಮಿಲೇನಿಯಂ ವೃತ್ತ)ದ ಸುತ್ತ ಕುರಿ ವ್ಯಾಪಾರವು ಭರ್ಜರಿಯಾಗಿ ನಡೆಯುತ್ತಿದೆ.

ವಿವಿಧ ಊರಿನಿಂದ ಕುರಿಗಳನ್ನು ಗಾಡಿಯಲ್ಲಿ ತುಂಬಿಕೊಂಡು ಬಂದ ವ್ಯಾಪಾರಿಗಳು ಎಲ್‌ಐಸಿ ವೃತ್ತದ ಸುತ್ತಲಿನ ಮರದ ನೆರಳಿನಲ್ಲಿ ಅವನ್ನು ಕಟ್ಟಿಹಾಕಿದ್ದರು. ಮಂಡ್ಯ ಜಿಲ್ಲೆಯ ನಾಗಮಂಗಲ, ನಂಜನಗೂಡು, ಶ್ರೀರಂಗಪಟ್ಟಣ, ಬನ್ನೂರು, ಪಾಂಡವಪುರ, ಚಾಮರಾಜನಗರ, ಹುಣಸೂರು, ಮದ್ದೂರು ಭಾಗದಿಂದ ವ್ಯಾಪಾರಿಗಳು ಕುರಿಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ.

ಅನೇಕರು ಕುರಿ ಮಂದೆ ತಂದು ವ್ಯಾಪಾರ ಮಾಡಿದರೆ, ಇನ್ನೂ ಕೆಲವರು ತಾವು ಮನೆಯಲ್ಲಿ ಸಾಕಿದ ಒಂದೇ ಕುರಿಯನ್ನು ವ್ಯಾಪಾರ ಮಾಡಲು ಕರೆತಂದಿದ್ದರು. ‘ಮರಿಯನ್ನು ಸಾಕಿ ದೊಡ್ಡದು ಮಾಡಿದ್ದೇವೆ, ಕೆಲವರು ಬಂದು ಕಡಿಮೆ ಹಣಕ್ಕೆ ವಿಚಾರಿಸಿದ್ದಾರೆ. ₹35 ಸಾವಿರ ಸಿಕ್ಕಿದರೆ ಮಾತ್ರ ಮಾರುತ್ತೇನೆ’ ಎನ್ನುತ್ತಾರೆ ಹುಣಸೂರಿನ ಯಶವಂತ್‌.

‘ಶುಕ್ರವಾರ ವ್ಯಾಪಾರಿಯೊಬ್ಬರು ಅಮೆರಿಕನ್‌ ತಳಿಯ ಕುರಿಗಳನ್ನು ತಂದು ಮಾರಿದ್ದಾರೆ. ₹1.20 ಲಕ್ಷಕ್ಕೆ ಮಾರಾಟವಾಗಿತ್ತು. ಕಳೆದ ಬಾರಿಯಷ್ಟು ಕುರಿಗಳು ಬಂದಿಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಬಂಡೂರು, ಬನ್ನೂರು, ಸಿಂಧೂರ, ಅಮೀನಗಢ, ಯಲಗಾ ಮುಂತಾದ ತಳಿಯ ಕುರಿಗಳು ಈ ಬಾರಿ ಬಂದಿವೆ. ಶುಕ್ರವಾರ ಉತ್ತಮ ವ್ಯವಹಾರ ನಡೆದಿದ್ದು, ರಾತ್ರಿ 11 ಗಂಟೆಯವರೆಗೂ ವ್ಯಾಪಾರ ನಡೆದಿತ್ತು.

‘ಬೆಳ್ಳೂರಿನಿಂದ 50 ಕುರಿ ಖರೀದಿಸಿ ಬೆಂಗಳೂರಿನಲ್ಲಿ ಮಾರಾಟಕ್ಕಾಗಿ ಕೊಂಡು ಹೋಗಿದ್ದೆವು. ಮೈಸೂರಿನಲ್ಲಿ ಬೇಡಿಕೆ ಇದೆ ಎಂದು ತಿಳಿದು, 10 ಕುರಿಗಳನ್ನು ತಂದಿದ್ದೇವೆ. ಇಲ್ಲ ಗ್ರಾಹಕರು ಹೆಚ್ಚಿದ್ದಾರೆ. ಆದರೆ ಎಲ್ಲರೂ ಕಡಿಮೆ ಬೆಲೆಗೆ ಕುರಿ ನಿರೀಕ್ಷಿಸುತ್ತಿದ್ದು, ವ್ಯಾಪಾರ ಕಡಿಮೆಯಿದೆ’ ಎಂದು ನಾಗಮಂಗಲದ ಮಹಮ್ಮದ್‌ ರಫೋಕ್ ತಿಳಿಸಿದರು.

ಮೈಸೂರಿನ ಎಲ್‌ಐಸಿ ವೃತ್ತ (ಮಿಲೇನಿಯಂ ವೃತ್ತ)ದಲ್ಲಿ ಜನ ಕುರಿ ವ್ಯಾಪಾರದಲ್ಲಿ ತೊಡಗಿರುವುದು
ಮೈಸೂರಿನ ಎಲ್‌ಐಸಿ ವೃತ್ತ (ಮಿಲೇನಿಯಂ ವೃತ್ತ)ದಲ್ಲಿ ಜನ ಕುರಿ ವ್ಯಾಪಾರದಲ್ಲಿ ತೊಡಗಿರುವುದು

ಕುರಿಗೆ ಹೆಚ್ಚಿದ ಬೇಡಿಕೆ ದೂರದೂರುಗಳಿಂದ ವ್ಯಾಪಾರಿಗಳ ಆಗಮನ ಸಂಜೆಯಾಗುತ್ತಿದ್ದಂತೆ ವ್ಯಾಪಾರ ಜೋರು

ಬಕ್ರೀದ್‌ ಸಮಯದಲ್ಲಿ ಕುರಿ ಮಾಂಸವನ್ನು ಬಡವರಿಗೆ ಹಂಚುತ್ತೇವೆ. ಈ ಬಾರಿ ಕುರಿಯ ಬೆಲೆ ಹೆಚ್ಚಿದೆ

–ಮಹಮ್ಮದ್‌ ರಫೋಕ್‌ ಬನ್ನಿಮಂಟಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT