ನಂಜನಗೂಡು: ‘ಒಂದು ವಾರದಿಂದ ನಮ್ಮ ಭಾಗದಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ಕಾವೇರಿ ನೀರಾವರಿ ನಿಗಮ ಅಧಿಕಾರಿಗಳು ತಮಿಳುನಾಡಿಗೆ ನೀರು ಹರಿಸಲು ತಯಾರಿ ನಡೆಸಿದ್ದಾರೆ. ಮೊದಲಿಗೆ ಕಾವೇರಿ, ಕಬಿನಿ ಕೊಳ್ಳದ ಕಾಲುವೆಗಳಿಗೆ ನೀರು ಹರಿಸಬೇಕು ಇಲ್ಲದಿದ್ದರೆ ರೈತ ಸಂಘದಿಂದ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸತತವಾಗಿ ಮಳೆಯಾಗುತ್ತಿರುವುದರಿಂದ ಕಾವೇರಿ ನದಿಯಲ್ಲಿ 40 ಸಾವಿರ ಕ್ಯುಸೆಕ್, ಕಬಿನಿ ನದಿಯಲ್ಲಿ 25 ಸಾವಿರ ಕ್ಯುಸೆಕ್, ನೀರು ಹರಿಯುತ್ತಿದೆ. ನಮ್ಮ ಭಾಗದ ಕಬಿನಿ ಬಲದಂಡೆ, ರಾಂಪುರ, ಹುಲ್ಲಹಳ್ಳಿ ನಾಲೆಗಳಿಗೆ ನಿಗಮ ನೀರು ಹರಿಸಿಲ್ಲ, ಕೆರೆಗಳು ನೀರಿಲ್ಲದೆ ಒಣಗುತ್ತಿದ್ದು, ದನಕರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಿದೆ’ ಎಂದರು.
‘ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮೊದಲಿಗೆ ಕಾವೇರಿ, ಕಬಿನಿ ಕೊಳ್ಳದ ಕಾಲುವೆಗಳಿಗೆ ನೀರು ಹರಿಸಲು ಕ್ರಮವಹಿಸಬೇಕು, ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಬಿಡುವುದಾದರೆ ನಮ್ಮ ಅಭ್ಯಂತರವಿಲ್ಲ, ಮೊದಲಿಗೆ ನಿಗಮ ನಮ್ಮ ರೈತರ ಹಿತ ಕಾಪಾಡುವತ್ತಾ ಗಮನಹರಿಸಬೇಕು, ಇಲ್ಲದಿದ್ದರೆ ರೈತ ಸಂಘದಿಂದ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.