ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರೊಂದಿಗೂ ನಂಟು ಹೊಂದಿದ್ದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

Last Updated 23 ಮಾರ್ಚ್ 2023, 14:32 IST
ಅಕ್ಷರ ಗಾತ್ರ

ಮೈಸೂರು: ಹಾಸನ ಜಿಲ್ಲೆ ಶ್ರವಣಬೆಳಗೊಳ ದಿಗಂಬರ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೈಸೂರಿನೊಂದಿಗೂ ನಂಟು ಹೊಂದಿದ್ದರು. ಸುತ್ತೂರು ಮಠ, ಮೈಸೂರು ವಿಶ್ವವಿದ್ಯಾಲಯದಿಂದ ಇಲ್ಲಿ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಂಡಿದ್ದರು.

2019ರ ಡಿ.12ರಂದು ಅವರ ದೀಕ್ಷಾ ಸುವರ್ಣ ಮಹೋತ್ಸವದ ಅಂಗವಾಗಿ ಕೋಟೆ ಶಾಂತಿನಾಥ ಜೈನ ಬಸದಿಯಲ್ಲಿ ಮತ್ತು ಮೈಸೂರು ವಿಶ್ವವಿದ್ಯಾಲಯದ ಸೆನೆಟ್‌ ಸಭಾಂಗಣದಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಪ್ರಾಕೃತ ಸಮಾವೇಶದಲ್ಲಿ ಗುರುವಂದನೆ ಸಲ್ಲಿಸಲಾಗಿತ್ತು. ಗುರುವಂದನೆ ಸ್ವೀಕರಿಸಿದ್ದ ಬಳಿಕ ಅವರು ಬಸದಿಯ ಮುಂಭಾಗದ ಮಾನಸ್ತಂಭ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.

ವಿಶ್ವವಿದ್ಯಾಲಯದಲ್ಲಿ ಮಾತನಾಡಿದ್ದ ಅವರು, ‘ಕನ್ನಡದಲ್ಲಿ ಮಾತನಾಡುವಾಗ ಆಂಗ್ಲ ಭಾಷೆ ಬಳಸುವುದನ್ನು ನಿಯಂತ್ರಿಸಬೇಕು. ಆಂಗ್ಲ ಭಾಷಾ ಸಾಮ್ರಾಜ್ಯದ ಬೆಳವಣಿಗೆಯ ಭರಾಟೆಯಲ್ಲಿ ಕನ್ನಡ ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ’ ಎಂದು ಸಲಹೆ ನೀಡಿ ಕನ್ನಡ ಪ್ರೇಮವನ್ನು ಮರೆದಿದ್ದರು.

‘ಪ್ರಾಕೃತ ಭಾಷೆಯು 2,300 ವರ್ಷಗಳ ಹಿಂದೆಯೇ ಶ್ರವಣಬೆಳಗೊಳಕ್ಕೆ ಬಂದಿದೆ. ಭಾರತೀಯ ಸಂಸ್ಕೃತಿ ಬಿಂಬಿಸುವ ಸಂಸ್ಕೃತ ಭಾಷೆಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ನಮ್ಮೆದುರಿಗಿದೆ. ಈ ಎರಡೂ ಭಾಷೆಗಳ ಜತೆ, ನೆಲದ ಭಾಷೆಯಾದ ಕನ್ನಡವನ್ನು ಕಾಪಾಡಬೇಕಿದೆ. ಇದಕ್ಕಾಗಿ ಫ್ರೆಂಚರು, ಜರ್ಮನ್ನರಂತೆ ತಾಯ್ನುಡಿಯ ಅಭಿಮಾನವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು’ ಎಂದು ತಿಳಿಸಿದ್ದರು.

‘ಜ್ಞಾನದ ಬೆಳಕು ನಿರಂತರವಾದುದು. ಜ್ಞಾನ ಪ್ರಸಾರಕ್ಕೆ ಯಾವುದೇ ಅಡೆತಡೆಯಿಲ್ಲ. ಸೂರ್ಯನು ಜಗತ್ತಿನಲ್ಲಿ ಹೇಗೆ ಅಸ್ತಂಗತನಾಗದೆ ಬೆಳಗುತ್ತಾನೆ, ಅದೇ ರೀತಿ ಜ್ಞಾನಕ್ಕೂ ಅಸ್ತಂಗತ ಎಂಬುದಿಲ್ಲ. ಜ್ಞಾನೋಪಾಸನೆಗೆ ಭೇದ–ಭಾವವಿಲ್ಲ. ಪ್ರತಿಯೊಬ್ಬರೂ ಜ್ಞಾನೋಪಾಸಕರಾಗುವ ಜತೆಯಲ್ಲೇ ಸತ್ಯದ ಸಂಶೋಧನೆ ಅರಿಯಲು ಮುಂದಾಗಬೇಕು’ ಎಂದು ಜ್ಞಾನದ ಮಹತ್ವದ ಮೇಲೆ ಬೆಳಕು ಚೆಲ್ಲಿದ್ದರು.

2020ರ ಜ.23ರಂದು ಜಿಲ್ಲೆಯ ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆದ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಮಾತನಾಡಿದ್ದ ಅವರು, ‘ಧರ್ಮ ಇದ್ದಲ್ಲಿ ಜಯ ಇರುತ್ತದೆ. ಅಧರ್ಮವಾಗಿ ಯಾರೂ ನಡೆಯಬಾರದು. ಶಾಂತಿ ಇಂದ ಎಲ್ಲರೂ ಇರುವ ಮೂಲಕ ಅಶಾಂತಿಯನ್ನು ತೊಲಗಿಸಬೇಕು’ ಎಂದು ಸಲಹೆ ನೀಡಿದ್ದರು.

ಇತ್ತೀಚಿನ ದಿನಗಳಲ್ಲಿ ಅವರು ಮೈಸೂರು ಪ್ರವಾಸ ಕೈಗೊಂಡಿರಲಿಲ್ಲ.

‘ಮೈಸೂರಿನಲ್ಲಿ ಒಂದು ಬಸದಿ ಹಾಗೂ ಇನ್ನೊಂದು ಶಿಕ್ಷಣ ಸಂಸ್ಥೆಯನ್ನು ಆರಂಭಿಸಲು ಪ್ರಯತ್ನಿಸಿದ್ದರು. ಆದರೆ, ಅದಕ್ಕೆ ಚಾಲನೆ ಕೊಡುವುದರೊಳಗೆ ಅವರು ಇಲ್ಲವಾಗಿದ್ದಾರೆ. ಡಿ.ಬನುಮಯ್ಯ ಕಾಲೇಜಿನಲ್ಲಿರುವ ಬಸದಿ ಶತಮಾನೋತ್ಸವ ಅವರ ನೇತೃತ್ವದಲ್ಲೇ ನಡೆದಿತ್ತು. ಮೈಸೂರಿನ ಜನರೊಂದಿಗೂ ಉತ್ತಮ ಬಾಂಧವ್ಯವನ್ನು ಹೊಂದಿದ್ದರು’ ಎಂದು ಕೈಗಾರಿಕೋದ್ಯಮಿ ಸುರೇಶ್‌ಕುಮಾರ್‌ ಜೈನ್ ಪ್ರತಿಕ್ರಿಯಿಸಿದರು.

ಇಲ್ಲಿನ ನಿವಾಸಿಯಾಗಿರುವ, ವಿಧಾನಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ ಅವರು ಸ್ವಾಮೀಜಿಯೊಂದಿಗೆ ಒಡನಾಟವನ್ನು ಹೊಂದಿದ್ದರು. ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕಕ್ಕೆ ದೆಹಲಿಯಿಂದ ಗಣ್ಯರನ್ನು ಕರೆತರುವ ಪ್ರಯತ್ನದಲ್ಲಿ ಮಠದ ಪ್ರತಿನಿಧಿಯಾಗಿ ಕೆಲಸ ಮಾಡಿದ್ದರು. ಕೇಂದ್ರದಿಂದ ಅನುದಾನ ಬಿಡುಗಡೆ ಮಾಡಿಸುವಲ್ಲೂ ದೊಡ್ಡ ಪಾತ್ರ ವಹಿಸಿದ್ದರು.

‘ಅವರ ಸ್ವಭಾವವೇ ದೊಡ್ಡ ಆಕರ್ಷಣೆಯಾಗಿತ್ತು. ಎಂದಿಗೂ ಹಣದ ಹಿಂದೆ ಬಿದ್ದವರಲ್ಲ. ದೊಡ್ಡ ಶ್ರೀಮಂತರಿಗೆ ಪ್ರವೇಶವನ್ನೇ ಕೊಡುತ್ತಿರಲಿಲ್ಲ. ಮೋಸದ ಮಾರ್ಗದಲ್ಲಿ ಹಣ ಸಂಪಾದಿಸಿದವರನ್ನು ದೂರ ಇಡುತ್ತಿದ್ದರು. ಅವರೆಂದೂ ನಮ್ಮನ್ನು ಬೇರೆ ಧರ್ಮೀಯರು ಎಂದು ನೋಡಲೇ ಇಲ್ಲ. ಎರಡು ತಿಂಗಳ ಹಿಂದೆ ಅವರನ್ನು ಭೇಟಿಯಾಗಿ ಮಾತನಾಡಿಕೊಂಡು ಬಂದಿದ್ದೆ. ಆಯುರ್ವೇದ ಔಷಧಿಯನ್ನೇ ತೆಗೆದುಕೊಳ್ಳುತ್ತಿದ್ದರು. ದೂರವಾಣಿ ಅಥವಾ ಮೊಬೈಲ್‌ ಫೋನ್‌ನಲ್ಲಿ ಮಾತನಾಡುವುದು ಅವರಿಗೆ ಇಷ್ಟವಾಗುತ್ತಿರಲಿಲ್ಲ. ನನ್ನ ಮೇಲೆ ವಿಶೇಷವಾದ ಪ್ರೀತಿ ಇಟ್ಟುಕೊಂಡಿದ್ದರು. ಹಲವು ಕಾರ್ಯಕ್ರಮಗಳಲ್ಲಿ ನನ್ನಿಂದ ಹಿಂದಿಯಲ್ಲಿ ಭಾಷಣ ಮಾಡಿಸಿದ್ದಾರೆ’ ಎಂದು ಗೋ.ಮಧುಸೂದನ ನೆನೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT