ಮೈಸೂರು: ‘ಸಂವಿಧಾನದಲ್ಲಿ ಪ್ರತಿಯೊಬ್ಬರ ನಂಬಿಕೆ, ಆಚರಣೆಗಳಿಗೆ ಅವಕಾಶವಿದೆ. ಇದರಲ್ಲಿ ಸರ್ಕಾರ ಮಧ್ಯಪ್ರವೇಶಿಸಲಾಗದು’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ‘ಮಹಿಷ ದಸರಾ’ ಆಚರಣೆಗೆ ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದರು.
ಇಲ್ಲಿ ಭಾನುವಾರ ‘ದಸರಾ ಸಂದರ್ಭದಲ್ಲಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ನಡೆಸುವ ಮಹಿಷ ದಸರೆಗೆ ಈ ಬಾರಿ ಅವಕಾಶವಿದೆಯೇ’ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಸಂವಿಧಾನದಲ್ಲಿಯೇ ಉದಾರವಾದವಿದೆ. ಅಭಿವ್ಯಕ್ತಿ, ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಲಾಗಿದೆ. ಯಾರಿಗೆ, ಯಾವುದರ ಮೇಲೆ ನಂಬಿಕೆ ಇದೆಯೋ ಅದನ್ನು ಆಚರಿಸುತ್ತಾರೆ. ಅದು ಮುಕ್ತ ಆಯ್ಕೆಯಾಗಿದೆ’ ಎಂದಷ್ಟೆ ಹೇಳಿದರು.
‘ದಸರೆಗೆ ಸಿದ್ಧತೆ ಆರಂಭಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಈ ತಿಂಗಳ ಕೊನೆಯಲ್ಲಿ ಉನ್ನತ ಮಟ್ಟದ ಸಮಿತಿ ಸಭೆ ನಡೆಯಲಿದೆ’ ಎಂದರು.
‘ಬಿಜೆಪಿ ಸರ್ಕಾರದ ಅವಧಿಯಲ್ಲಾದ ಮೀಸಲಾತಿ ಪರಿಷ್ಕರಣೆ ನಿರ್ಣಯದ ಕುರಿತು ಅಡ್ವೊಕೇಟ್ ಜನರಲ್ ಅವರಲ್ಲಿ ಕೇಳಬೇಕು. ಸುಪ್ರೀಂ ಕೋರ್ಟ್ ತೀರ್ಪಿನಂತೆ ಮೀಸಲಾತಿ ಪ್ರಮಾಣವನ್ನು ಶೇ 50ಕ್ಕಿಂತ ಹೆಚ್ಚಿಸಲಾಗದು. ಸಂವಿಧಾನ ಬದ್ಧವಾಗಿಯೇ ಮೀಸಲಾತಿ ನೀಡಬೇಕು’ ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.