ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Mysuru Dasara: ಟೆಂಟ್‌ ಶಾಲೆಯಲ್ಲಿ ಕಾಡಿನ ಮಕ್ಕಳ ಖುಷಿ

Published 13 ಅಕ್ಟೋಬರ್ 2023, 7:07 IST
Last Updated 13 ಅಕ್ಟೋಬರ್ 2023, 7:07 IST
ಅಕ್ಷರ ಗಾತ್ರ

– ದೀಕ್ಷಾ/ ಮಹೇಶ್‌ಬಾಬು ಎಚ್.

ಮೈಸೂರು: ‘ಅರಮನೆಯನ್ನು ನಾನು ಬರಿ ಫೋಟೊದಲ್ಲಿ ನೋಡಿದ್ದೆ. ಆದರೆ, ಈಗ ನೇರವಾಗಿ ಕಣ್ತುಂಬಿಸಿಕೊಂಡು ಇಲ್ಲಿಯೇ ಓದುತ್ತಿರುವುದರಿಂದ ಸಂತೋಷವಾಗುತ್ತಿದೆ...

–ನಗರದ ಅಂಬಾವಿಲಾಸ ಅರಮನೆಯಲ್ಲಿ ದಸರಾ ಪ್ರಯುಕ್ತ ಕಾವಾಡಿ–ಮಾವುತ ಪೋಷಕರೊಂದಿಗೆ ಬಂದು ‘ಟೆಂಟ್‌ ಶಾಲೆ’ಯಲ್ಲಿ ಓದುತ್ತಿರುವ 10ನೇ ತರಗತಿಯ ರಾಧಿಕಾ ಎಂ. ಹೀಗೆ ಸಂತಸ ವ್ಯಕ್ತಪಡಿಸಿದಳು.

ಆಕೆಯೊಂದಿಗೇ ಬಂದಿರುವ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಚಿತ್ರಾ, ‘ರಾಜಮಾತೆಯೇ ಬಂದು ನಮಗೆಲ್ಲ ಬ್ಯಾಗ್‌, ಸಮವಸ್ತ್ರ, ಪುಸ್ತಕಗಳನ್ನು ನೀಡಿದ್ದು ಖುಷಿಯಾಯಿತು’ ಎಂದು ಹೇಳಿ ಆ ದಿನವನ್ನು ಸ್ಮರಿಸಿಕೊಂಡರು.

ಒಂದೆಡೆ ನಾಡಹಬ್ಬ ದಸರಾ ಉತ್ಸವಕ್ಕೆ ಪೋಷಕರು ಗಜಪಡೆ ಗಳೊಂದಿಗೆ ತಾಲೀಮಿನಲ್ಲಿ ತೊಡಗಿರುವ ವೇಳೆಯಲ್ಲೇ, ಅವರ ಕುಟುಂಬಗಳ 33 ಮಕ್ಕಳು ಸೆ.21ರಿಂದ ಅರಮನೆ ಆವರಣದಲ್ಲಿ ಶಿಕ್ಷಣ ಇಲಾಖೆಯು ಕಲ್ಪಿಸಿರುವ ಕೊಠಡಿ ಯೊಂದರಲ್ಲಿ ಕಲಿಕೆಯನ್ನು ಮುಂದುವರಿಸಿದ್ದಾರೆ.

ಪ್ರತಿವರ್ಷ ಇಲಾಖೆಯು ಈ ಮಕ್ಕಳಿಗಾಗಿ ಅರಮನೆ ಆವರಣದಲ್ಲಿ ‘ಟೆಂಟ್‌’ಗಳನ್ನು ರೂಪಿಸಿ, ಬೋಧನೆ– ಕಲಿಕೆಗೆ ವ್ಯವಸ್ಥೆ ಮಾಡುತ್ತಿತ್ತು. ಈ ವರ್ಷದಿಂದ ಅರಮನೆ ಆವರಣದ ಕೊಠಡಿಯನ್ನೇ ಮಕ್ಕಳಿಗಾಗಿ ಮೀಸಲಿರಿಸಲಾಗಿದೆ.

ಬಹುತೇಕ ವಿದ್ಯಾರ್ಥಿಗಳಲ್ಲಿ ಅರಮನೆಯ ಲೋಕವು ಅಚ್ಚರಿ ಗಳನ್ನು, ಸಂತೋಷದ ಘಳಿಗೆಗಳನ್ನು ಹೆಚ್ಚಿಸಿದೆ. ಈ ತಾತ್ಕಾಲಿಕ ಶಾಲೆ ಶುರು ವಾಗಿ 20 ದಿನಗಳಾಗಿವೆ.

ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ತರಗತಿ ಗಳು ನಡೆಯುತ್ತಿವೆ. ಪಠ್ಯಕ್ಕೆ ಸಂಬಂಧಿಸಿದ ಕನ್ನಡ, ಗಣಿತ, ಪರಿಸರ, ವಿಜ್ಞಾನದ ಬೋಧನೆಯೊಂದಿಗೆ ದಿನಪತ್ರಿಕೆಗಳ ಓದು ಕೂಡ ನಡೆದಿದೆ. ಯೋಗ, ಚಿತ್ರಕಲೆ, ನೃತ್ಯ, ಸಂಗೀತದ ಪರಿಚಯಗಳೂ ನಡೆದಿವೆ. ಶಿಕ್ಷಕರು ಲ್ಯಾಪ್‌ಟಾಪ್‌ಗಳನ್ನು ಬಳಸಿ  ಹೇಳಿ ಕೊಡುತ್ತಿರುವುದು ವಿಶೇಷ. ನಗರ ಕೇಂದ್ರ ಗ್ರಂಥಾಲಯವು ಈ ಮಕ್ಕಳಿಗಾಗಿ ಕಿರು ಗ್ರಂಥಾಲಯವನ್ನೂ ಸ್ಥಾಪಿಸಿದೆ.

ಮಕ್ಕಳ ದಸರಾಕ್ಕೂ ಸಿದ್ಧತೆ:

ಈ ಮಕ್ಕಳು ತಮ್ಮ ದೈನಂದಿನ ಕಲಿಕೆಯ ಜೊತೆಗೆ ಇದೇ 18ರಂದು ನಡೆಯಲಿರುವ ಮಕ್ಕಳ ದಸರಾದಲ್ಲಿ ಕಾರ್ಯಕ್ರಮ ನೀಡಲು ತಾಲೀಮು ನಡೆಸುತ್ತಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT