ಮೈಸೂರು: ಸಾಂಸ್ಕೃತಿಕ ನಗರಿಗೆ ಪ್ರವೇಶ ಪಡೆದು ವಾರದ ನಂತರ ‘ಗಜಪಡೆ’ಗೆ ಇಂದು (ಸೋಮವಾರ) ತೂಕ ಪರೀಕ್ಷೆ ನಡೆಯುತ್ತಿದೆ. ಇದೇ ಮೊದಲ ಬಾರಿ ದೀರ್ಘ ಕಾಲದವರೆಗೆ ಆನೆಗಳು ಅಶೋಕಪುರಂನ ಅರಣ್ಯ ಭವನದಲ್ಲಿ ಬೀಡುಬಿಟ್ಟಿದ್ದವು.

ನಿಗದಿಯಂತೆ ಆ.7ರಂದು ಗಜಪಡೆ ಅರಮನೆ ಪ್ರವೇಶ ಪಡೆಯಬೇಕಾಗಿತ್ತು. ಕಾರಣಾಂತರ ಆ.10ಕ್ಕೆ ಮುಂದೂಡಲಾಗಿದೆ ಎಂದು ಜಿಲ್ಲಾಡಳಿತ ಹೇಳಿತ್ತು. ಹೀಗಾಗಿ, ಅರಣ್ಯ ಭವನದಲ್ಲಿಯೇ 6 ದಿನ ಉಳಿಯಬೇಕಾಯಿತು. 500 ಮೀಟರ್ನಷ್ಟು ಉದ್ದದ ಅಲ್ಲಿನ ರಸ್ತೆಯಲ್ಲಿಯೇ ನಿತ್ಯ ಎರಡು ಬಾರಿ ತಾಲೀಮು ನೀಡಲಾಗುತ್ತಿತ್ತು.

ಈ ಹಿಂದೆ ನವರಾತ್ರಿಗೆ 50ರಿಂದ 60 ದಿನ ಇರುವಾಗಲೇ ಗಜಪಡೆ ಅರಮನೆ ಪ್ರವೇಶ ಪಡೆಯುತ್ತಿದ್ದವು. ಇದೀಗ ಸೆ.22ರಂದು ಆರಂಭವಾಗುವ ನವರಾತ್ರಿಗೆ 42 ದಿನ ಬಾಕಿ ಇದೆ. ಇಷ್ಟರಲ್ಲಿ ಆನೆಗಳಿಗೆ ವಿವಿಧ ತಾಲೀಮುಗಳನ್ನು ಅರಣ್ಯ ಇಲಾಖೆಯು ನೀಡಬೇಕಿದೆ.

ಬಿಡಾರ ಹೂಡಿದ ಆನೆಗಳು

ಅರಮನೆ ಪ್ರವೇಶಿಸಿದ ಆನೆಗಳು ಬಿಡಾರದಲ್ಲಿ ಹಾಕಲಾಗಿದ್ದ ಶೆಡ್ಗಳಲ್ಲಿ ಕಟ್ಟಲಾಯಿತು. ಪ್ರತಿವರ್ಷದಂತೆ ‘ಅಭಿಮನ್ಯು’ ಕೋಡಿ ಸೋಮೇಶ್ವರ ದೇಗುಲದ ಅಂಗಳದಲ್ಲಿರುವ ಶೆಡ್ನಲ್ಲಿ ಬಿಡಾರ ಹೂಡಿದ್ದರೆ, ಉಳಿದವನ್ನು ದೇಗುಲದ ಹೊರ ಆವರಣದಲ್ಲಿ ಕಟ್ಟಲಾಗಿದೆ.

ಅರಣ್ಯ ಭವನದಲ್ಲಿ ‘ಗಜಪೂಜೆ’

ಅರಮನೆಗೆ ದಸರಾ ಆನೆಗಳನ್ನು ಬೀಳ್ಕೊಡುವ ಮೊದಲು ಅರಣ್ಯ ಭವನದಲ್ಲಿ ಇಲಾಖೆಯಿಂದ ಬೆಳಿಗ್ಗೆ 3.30ಕ್ಕೆ ‘ಗಜಪೂಜೆ’ ಸಲ್ಲಿಸಲಾಯಿತು. ಬೆಳಿಗ್ಗೆಯೇ ಆನೆಗಳನ್ನು ಹೂ–ಆಭರಣ ಹಾಗೂ ಬಣ್ಣದ ಚಿತ್ತಾರಗಳಿಂದ ಸಿಂಗರಿಸಲಾಗಿತ್ತು.

ಅರ್ಚಕ ಪ್ರಹ್ಲಾದ ರಾವ್ ಅಧಿಕಾರಿಗಳಿಂದ ಗಣಪತಿ ಸ್ತೋತ್ರ ಹೇಳಿಸಿದರು. ಪೂಜೆ ಸಲ್ಲಿಸಿ, ಪಂಚಫಲ, ಮೋದಕ, ಕಜ್ಜಾಯ ಸೇರಿದಂತೆ ತಿನಿಸುಗಳನ್ನು ನೀಡಿದರು. ಡಿಸಿಎಫ್ ಪ್ರಭುಗೌಡ ಅಭಿಮನ್ಯುಗೆ ಆರತಿ ಬೆಳಗಿ ಬೂದುಗುಂಬಳ ಒಡೆದರು. ನಂತರ ಅರಮನೆಗೆ ಬೀಳ್ಕೊಡಲಾಯಿತು.

ಬಿರುಮಳೆಗೆ ಕೊಡೆ ಹಿಡಿದ ಮಾವುತರು ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಅಶೋಕ ವೃತ್ತ, ರಾಮಸ್ವಾಮಿ ವೃತ್ತ, ಚಾಮರಾಜಜೋಡಿ ರಸ್ತೆ, ಊಟಿ ರಸ್ತೆ ಮೂಲಕ ಆನೆಗಳು ಅರಮನೆಯ ಜಯಮಾರ್ತಾಂಡ ದ್ವಾರಕ್ಕೆ ಮುನ್ನಡೆಸಿದರು. ದಾರಿಯುದ್ದಕ್ಕೂ ಪೊಲೀಸ್ ಬಿಗಿಭದ್ರತೆ ನೀಡಲಾಗಿತ್ತು.

ಗಾಂಭೀರ್ಯದ ನಡಿಗೆಯು ನಗರದಲ್ಲಿ ಹಬ್ಬದ ವಾತಾವರಣವನ್ನೂ ಸೃಷ್ಟಿಸಿತ್ತು. ಆನೆಗಳು ನಡೆದು ಬಂದ ದಾರಿಯ ಎರಡೂ ಬದಿಯಲ್ಲಿ ಹಿರಿಯರು ಹಾಗೂ ಮಕ್ಕಳೊಂದಿಗೆ ನಿಂತಿದ್ದ ಸಾವಿರಾರು ಮಂದಿ ಕೈಮುಗಿದು ಧನ್ಯತೆ ಅನುಭವಿಸಿದರು.

ಶಾಸಕರಾದ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಟಿ.ಎಸ್.ಶ್ರೀವತ್ಸ, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ಪಿ ಎನ್. ವಿಷ್ಣುವರ್ಧನ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಮೈಸೂರು ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಡಿಸಿಎಫ್ ಐ.ಬಿ. ಪ್ರಭುಗೌಡ, ಡಿಸಿಪಿಗಳಾದ ಬಿಂದುಮಣಿ, ಸುಂದರ್ ರಾಜ್, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಪಾಲ್ಗೊಂಡಿದ್ದರು.

ಕಲಾತಂಡಗಳ ಮೆರುಗು

ಜಯಮಾರ್ತಾಂಡ ದ್ವಾರದಿಂದ ಅರಮನೆ ಮುಂಭಾಗದವರೆಗೂ ಕಲಾತಂಡಗಳ ಜೊತೆ ಆನೆಗಳನ್ನು ಕರೆದೊಯ್ಯಲಾಯಿತು.

ಯದುಕುಮಾರ್ ಮತ್ತು ತಂಡದ 20 ಮಂದಿ ಸ್ಯಾಕ್ಸೊಫೋನ್ ಹಾಗೂ ತವಿಲ್ ನುಡಿಸಿದರು. ಅರಮನೆ ಪೊಲೀಸ್ ಬ್ಯಾಂಡ್ನ ಲಯದ ಸಂಗೀತದಿಂಪಿನಲ್ಲಿ ಆನೆಗಳು ಹೆಜ್ಜೆ ಹಾಕಿದವು. ಸುಂದರ್ ರಾಜ್ ಮತ್ತು ತಂಡದ ‘ಪೂಜಾ ಕುಣಿತ’, ಕೃಷ್ಣಮೂರ್ತಿ ತಂಡದ ‘ಡೊಳ್ಳು ಕುಣಿತ’, ‘ಕಂಸಾಳೆ’ ಆಕರ್ಷಿಸಿದವು.

ರಾಜಪೋಷಾಕು, ಬಿರುದು ಬಾವಲಿ ಹಿಡಿದಿದ್ದ ವಿದ್ಯಾರ್ಥಿಗಳು ಗಮನ ಸೆಳೆದರು. ರಾಜರ ಕಾಲದಲ್ಲಿ ನಡೆಯುತ್ತಿದ್ದ ದಸರೆ ಮಾದರಿಯಲ್ಲೇ ಸ್ವಾಗತವನ್ನು ಕೋರಿದರು. ಆನೆಗಳು ಬಂದಾಗ ಕಹಳೆ ಮೊಳಗಿಸಲಾಯಿತು.

ರೋಹಿತ್, ವರಲಕ್ಷ್ಮಿ, ಗೋಪಿ ಪ್ರತ್ಯಕ್ಷ!

ಈ ಬಾರಿಯ ದಸರಾ ಗಜಪಡೆಯ ಪಟ್ಟಿಯಲ್ಲಿ ಇಲ್ಲದ ರೋಹಿತ್, ವರಲಕ್ಷ್ಮಿ ಹಾಗೂ 2ನೇ ತಂಡದ ಆನೆಯಾದ ‘ಗೋಪಿ’ ಅರಮನೆ ಪ್ರವೇಶದ್ವಾರದಲ್ಲಿ ಕಾಣಿಸಿಕೊಂಡರು.

ಅರಮನೆ ಮಂಡಳಿಯು ಜಯಮಾರ್ತಾಂಡ ದ್ವಾರದ ಎದುರು ಹಾಕಿದ್ದ ಸ್ವಾಗತಿಸುವ ಫ್ಲೆಕ್ಸ್ನಲ್ಲಿ ಇವರು ಸ್ಥಾನ ಪಡೆದಿದ್ದರು. ಆದರೆ, ‘ಪ್ರಶಾಂತ’, ‘ಕಾವೇರಿ’ ಹಾಗೂ ಶ್ರೀರಂಗಪಟ್ಟಣದ ದಸರೆಯಲ್ಲಿ 2 ಬಾರಿ ಪಾಲ್ಗೊಂಡಿರುವ ಅನುಭವಿ ‘ಮಹೇಂದ್ರ’ ಭಾವಚಿತ್ರಗಳು ಇರಲಿಲ್ಲ.

ಗಜಪಡೆಯಲ್ಲಿ ಯಾವ ಆನೆಗಳು ಇವೆ ಹಾಗೂ ಯಾವ ಆನೆಗಳು ಇಲ್ಲ ಎಂಬ ಕನಿಷ್ಠ ಜ್ಞಾನ ಅರಮನೆ ಮಂಡಳಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಇಲ್ಲ ಎಂಬುದಕ್ಕೆ ‘ಫ್ಲೆಕ್ಸ್’ ಕನ್ನಡಿಯನ್ನು ತೋರಿತು.

ಪೊಲೀಸರ ತಪ್ಪು, ಸಚಿವರಿಗೆ ಮುಜುಗರ!

ಗಜಪಡೆಯ ಅರಮನೆ ಪ್ರವೇಶ ಕಾರ್ಯಕ್ರಮದ ವರದಿ ಮಾಡಲು ಬಂದಿದ್ದ ಪತ್ರಕರ್ತರು ಹಾಗೂ ಪತ್ರಿಕಾ ಛಾಯಾಗ್ರಾಹಕರನ್ನು ಪೊಲೀಸರು ತಳ್ಳಾಡಿದ ಪ್ರಸಂಗ ನಡೆಯಿತು.

ಜಯಮಾರ್ತಾಂಡ ದ್ವಾರದಲ್ಲಿ ಕೆಲವು ಯೂಟ್ಯೂಬ್ ಛಾಯಾಗ್ರಾಹಕರನ್ನು ಒಳಗೆ ಬಿಟ್ಟುಕೊಂಡ ಅವರು, ಟಿ.ವಿ. ಮಾಧ್ಯಮ ಹಾಗೂ ಪತ್ರಿಕಾ ಛಾಯಾಗ್ರಾಹಕರಿಗೆ ಸರಿಯಾಗಿ ಚಿತ್ರಗಳನ್ನು ತೆಗೆಯಲು ಅನುವು ಮಾಡಿಕೊಡಲಿಲ್ಲ. ಛಾಯಾಗ್ರಾಹಕರಿಗೆ ಮೀಸಲಿದ್ದ ಲಾರಿಯು ಹೆಚ್ಚಿನವರಿಂದ ತುಂಬಿತ್ತು. ದೃಶ್ಯಗಳನ್ನು ತೆಗೆದುಕೊಳ್ಳಲು ಕಷ್ಟಪಟ್ಟರು. ಅಲ್ಲದೇ ಪೂಜೆ ಸಲ್ಲಿಕೆಯಾಗುತ್ತಿದ್ದಂತೆ ಬೇಗನೆ ಲಾರಿಯನ್ನು ಕರೆದುಕೊಂಡು ಹೋದರು.

ಅಲ್ಲಿ, ಬ್ಯಾರಿಕೇಡ್ನ ಆಚೆಗೆ ಪತ್ರಕರ್ತರನ್ನು ಉಳಿಸಿದರು. ಗಜಪಡೆಗೂ, ಛಾಯಾಗ್ರಹಕರಿದ್ದ ಲಾರಿಗೂ 50 ಮೀಟರ್ ದೂರವಿತ್ತು. ಜನಪ್ರತಿನಿಧಿಗಳು, ಪೊಲೀಸರು, ಅಧಿಕಾರಿಗಳು ಹಾಗೂ ಅವರ ಕುಟುಂಬದವರು, ಬೆಂಬಲಿಗರೇ ಆನೆಗಳನ್ನು ಸುತ್ತುವರಿದಿದ್ದರು. ಜಾಗ ಬಿಡದೇ ಇದ್ದಾಗ, ಅಲ್ಲಿಗೆ ಛಾಯಾಚಿತ್ರ ತೆಗೆಯಲು ಹೋದವರನ್ನು ಪೊಲೀಸರು ಬ್ಯಾರಿಕೇಡ್ನ ಆಚೆಗೆ ತಳ್ಳಿದರು. ಮಾತಿನ ಚಕಮಕಿಯೂ ನಡೆಯಿತು.

ಸ್ಥಳಕ್ಕೆ ಬಂದ ಶಾಸಕ ತನ್ವೀರ್ ಸೇಠ್ ಸಮಾಧಾನ ಪಡಿಸಿದರು. ಸ್ಥಳಕ್ಕೆ ಬಂದ ಜಿಲ್ಲಾ ಉಸ್ತುವಾರಿ ಸಚಿವರನ್ನು ಪತ್ರಕರ್ತರು ಪ್ರಶ್ನಿಸಿದರು. ಪ್ರತಿ ವರ್ಷವೂ ಇದೇ ರೀತಿ ನಡೆಸಿಕೊಳ್ಳುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

‘ಅದ್ದೂರಿ ದಸರಾ ಆಚರಣೆ’

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆ ಮಾಡಿ ಎಂದು ಹೇಳಿದ್ದಾರೆ. 2025ರ ದಸರಾ ಕಾರ್ಯಕಾರಿ ಸಮಿತಿಯ ಸಭೆ ನಡೆಸಲಾಗಿದ್ದು, ಕಳೆದ ವರ್ಷದ ದಸರೆಗೆ ₹ 40 ಕೋಟಿ ಖರ್ಚಾಗಿತ್ತು. ಈ ಬಾರಿ ಅದಕ್ಕಿಂತಲೂ ಹೆಚ್ಚು ವೆಚ್ಚ ಆಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ವಿದ್ಯುತ್ ದೀಪಾಲಂಕಾರ 21 ದಿನ ಇರಲಿದೆ. ವಿಜಯದಶಮಿಗೆ ಮೂರು ವಾರ ಮುನ್ನವೇ ಆನ್ಲೈನ್ ಟಿಕೆಟ್ ಮಾರಾಟವನ್ನು ಮಾಡಲಾಗುತ್ತದೆ. 3 ಸಾವಿರ ಡ್ರೋಣ್ಗಳಿಂದ ‘ಡ್ರೋಣ್ ಶೋ’ ನಡೆಯಲಿದೆ. ದಸರಾ ವಸ್ತುಪ್ರದರ್ಶನದಲ್ಲಿ ಎಲ್ಲ ಸರ್ಕಾರಿ ಇಲಾಖೆಗಳ ಮಳಿಗೆಗಳು ಇರಲಿವೆ’ ಎಂದರು.

‘ದಸರಾ ಉದ್ಘಾಟಕರು ಯಾರೆಂಬುದು ಇನ್ನೂ ನಿರ್ಧಾರವಾಗಿಲ್ಲ. ಮುಖ್ಯಮಂತ್ರಿ ತೀರ್ಮಾನಿಸುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.