ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಡಿಸಿ ಕಚೇರಿ ಸಿದ್ಧಾರ್ಥನಗರಕ್ಕೆ ಸ್ಥಳಾಂತರ

2018ರಲ್ಲಿ ಉದ್ಘಾಟನೆಯಾಗಿದ್ದರೂ ಈವರೆಗೆ ಸಂಪೂರ್ಣವಾಗಿ ಬಳಕೆಯಾಗಿರಲಿಲ್ಲ
Published 9 ಜೂನ್ 2023, 7:03 IST
Last Updated 9 ಜೂನ್ 2023, 7:03 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲಾಧಿಕಾರಿ ಕಚೇರಿಯನ್ನು ಸಿದ್ಧಾರ್ಥನಗರದ ತಿ.ನರಸೀಪುರ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿರುವ ‘ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣ’ಕ್ಕೆ ಗುರುವಾರ ಸ್ಥಳಾಂತರಿಸಲಾಗಿದೆ. ಈ ಕಟ್ಟಡ ಉದ್ಘಾಟನೆಯಾಗಿ ಐದು ವರ್ಷ ಮೂರು ತಿಂಗಳು ಕಳೆದ ಮೇಲೆ ಸಂಪೂರ್ಣವಾಗಿ ಬಳಕೆಯಾಗುವ ಕಾಲ ಕೊನೆಗೂ ಕೂಡಿಬಂದಿದೆ.

‘ಜಿಲ್ಲಾಧಿಕಾರಿ ಕಚೇರಿಯು ಹೊಸ ಕಟ್ಟಡದಲ್ಲಿ ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿದೆ. ಸರ್ಕಾರದ ಹಾಗೂ ಸಾರ್ವಜನಿಕ ಕೆಲಸ– ಕಾರ್ಯಗಳಿಗೆ ಸಾರ್ವಜನಿಕರು ಹೊಸ ಕಚೇರಿಯನ್ನು ಸಂಪರ್ಕಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮನವಿ ಮಾಡಿದ್ದಾರೆ.

‘ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಮುಖ್ಯ ಕಚೇರಿಯನ್ನು ಗುರುವಾರ ದಿಂದಲೇ ಸ್ಥಳಾಂತರಿಸಲಾಗಿದೆ. ಎಲ್ಲ ಶಾಖೆಗಳನ್ನೂ ಇನ್ನೆರಡು ದಿನಗಳಲ್ಲಿ ಸ್ಥಳಾಂತರಿಸ ಲಾಗುವುದು. ಖಜಾನೆಯನ್ನು ತರಲು ಒಂದಷ್ಟು ಸಮಯ ಬೇಕಾಗುತ್ತದೆ. ಅಲ್ಲಿಯವರೆಗೆ ಹಿಂದಿನ ಕಟ್ಟಡದಲ್ಲೇ ಇರಲಿದೆ. ಹೊಸ ಕಟ್ಟಡದಲ್ಲಿ ಅಂತರ್ಜಾಲ ಸಂಪರ್ಕ (ಸೆಕ್ಯೂರ್ಡ್‌ ಬಿಎಸ್‌ಎನ್‌ಎಲ್ ನೆಟ್‌ವರ್ಕ್‌) ಅಗತ್ಯವಿದೆ. ಅದು ಆಗುವವರೆಗೆ ವಿಡಿಯೊ ಕಾನ್ಫರೆನ್ಸ್ ಮೊದಲಾದವುಗಳನ್ನು ಹಳೆಯ ಕಟ್ಟಡದಲ್ಲೇ ನಡೆಸಲಾಗುವುದು’ ಎಂದು ಜಿಲ್ಲಾಧಿಕಾರಿ ‘‍ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸಿದ್ದರಾಮಯ್ಯ ಅವರಿಂದ ಶಂಕುಸ್ಥಾಪನೆ: ಮೈಸೂರಿನವರೇ ಆದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 2016ರಲ್ಲಿ ಈ ಕಟ್ಟಡದ ಕಾಮಗಾರಿ ಆರಂಭವಾಗಿತ್ತು. 2018ರ ಮಾರ್ಚ್‌ನಲ್ಲಿ ಉದ್ಘಾಟನೆಯನ್ನೂ ಅವರೇ ನೆರವೇರಿಸಿದ್ದರು. ಆದರೆ, ಇದನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಕೆಲಸ ನಡೆದಿರಲಿಲ್ಲ. ಇದೀಗ, ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಹಾಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗುತ್ತಿದ್ದಂತೆಯೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಈಚೆಗೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಸಭೆ ನಡೆಸಿದ್ದ ಮುಖ್ಯಮಂತ್ರಿ ಹೊಸ ಕಟ್ಟಡವನ್ನು ಕೂಡಲೇ ಬಳಸಿಕೊಳ್ಳುವಂತೆ ನಿರ್ದೇಶನ ನೀಡಿದ್ದರು. ಮುಖ್ಯಮಂತ್ರಿ ಕಚೇರಿಯಿಂದ ಕೆಲವು ದಿನಗಳ ಹಿಂದೆ ಬಂದ ಸ್ಪಷ್ಟ ಸೂಚನೆಗಳನ್ನು ಆಧರಿಸಿ ಪ್ರಮುಖ ಕಚೇರಿಯಾದ ಜಿಲ್ಲಾಧಿಕಾರಿ ಕಚೇರಿಯನ್ನು ಸ್ಥಳಾಂತರಿಸಲಾಗಿದೆ.

₹84.66 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡದ ಮೊದಲ ಮಹಡಿಯ ಒಂದು ಕೊಠಡಿಯಲ್ಲಿ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ತಮ್ಮ ಕಚೇರಿಯನ್ನು ತೆರೆದಿದ್ದರು. ಅಲ್ಲದೇ, ಆರು ಇಲಾಖೆಗಳು ನೂತನ ಕಟ್ಟಡದಲ್ಲೇ ಕಾರ್ಯಾರಂಭಿಸಿದ್ದವು.

ಭೂದಾಖಲೆಗಳ ಉಪನಿರ್ದೇಶಕರ ಕಚೇರಿ, ಜಿಲ್ಲಾ ನಗರ ಅಭಿವೃದ್ಧಿ ಕೋಶ, ಜಿಲ್ಲಾ ಸಾಂಖ್ಯಿಕ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಹಾಗೂ ಮುಜರಾಯಿ ಇಲಾಖೆ ತಹಶೀಲ್ದಾರ್‌ ಕಚೇರಿಗಳು ಸ್ಥಳಾಂತರಗೊಂಡಿದ್ದವು. ಸ್ಥಳಾವಕಾಶದ ಲಭ್ಯತೆ ನೋಡಿಕೊಂಡು ಇತರ ಕಚೇರಿಗಳ ಸ್ಥಳಾಂತರಕ್ಕೆ ಕ್ರಮ ವಹಿಸಲು ಜಿಲ್ಲಾಡಳಿತ ಯೋಜಿಸಿದೆ.

ಈ ಕಟ್ಟಡದ ಕೆಳ ಮಹಡಿಯಲ್ಲಿ ಖಜಾನೆಗೆ ಅವಕಾಶ ಕಲ್ಪಿಸಲಾಗಿದೆ. ಆಹಾರ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಕಾರ್ಯಾರಂಭಿಸಿದೆ. ಮೊದಲ ಮಹಡಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಅದಕ್ಕೆ ಸಂಬಂಧಿಸಿದ ಎಡಿಸಿ ಕಚೇರಿ, ನ್ಯಾಯಾಲಯ ಸಭಾಂಗಣ, ಆಪ್ತ ಶಾಖೆಯವರಿಗೆ ಕಚೇರಿಗಳು, ಮೂರು ಮೀಟಿಂಗ್ ಹಾಲ್‌ಗಳು, ಒಂದು ವಿಡಿಯೊ ಕಾನ್ಫರೆನ್ಸ್‌ ಹಾಲ್‌ ಇದೆ. 2ನೇ ಮಹಡಿಯಲ್ಲಿ ವಿವಿಧ ಇಲಾಖೆಗಳ ಏಳು ಕಚೇರಿ ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕೆಲವು ಜಿಲ್ಲಾ ಮಟ್ಟದ ಕಚೇರಿಗಳು ಈಗಾಗಲೇ ಅಲ್ಲೇ ಇದ್ದವು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹಲವು ಸಭೆಗಳನ್ನು ಅಲ್ಲೇ ನಡೆಸಿದ್ದೆ.

ಡಾ.ಕೆ.ವಿ.ರಾಜೇಂದ್ರ ಜಿಲ್ಲಾಧಿಕಾರಿ

‘ಕಂದಾಯ ವಸ್ತುಸಂಗ್ರಹಾಲಯ’ ಈವರೆಗೆ ಜಿಲ್ಲಾಧಿಕಾರಿ ಕಚೇರಿ ಇದ್ದ ಕಟ್ಟಡವನ್ನು ಕಂದಾಯ ವಸ್ತುಸಂಗ್ರಹಾಲಯನ್ನಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ‘ಮೈಸೂರು ಪ್ರಾಂತ್ಯ ಉತ್ತಮ ಆಡಳಿತಕ್ಕೆ ಹೆಸರು ವಾಸಿಯಾಗಿತ್ತು. ಇದನ್ನು ಬಿಂಬಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ದಾಖಲೆಗಳನ್ನು ಒಳಗೊಂಡ ವಸ್ತುಸಂಗ್ರಹಾಲಯವನ್ನಾಗಿ ರೂಪಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು.

ಕಾಯಕಲ್ಪಕ್ಕೆ ಕಾಯುತ್ತಿದೆ! ಈವರೆಗೆ ಜಿಲ್ಲಾಧಿಕಾರಿ ಕಚೇರಿ ಇದ್ದ ಕಟ್ಟಡವು ಐತಿಹಾಸಿಕ ಮಹತ್ವ ಹೊಂದಿದೆ. ಪಾರಂಪರಿಕ ನಗರಿಯ ಹಳೆಯ ಕಟ್ಟಡಗಳಲ್ಲಿ ಸುಂದರವಾದ ಈ ಕಟ್ಟಡವು ಕಾಯಕಲ್ಪಕ್ಕೆ ಕಾಯುತ್ತಿದೆ. ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಕಂಡುಬರುತ್ತಿದೆ ಎಂಬ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಮೇ 18ರಂದು ವಿಶೇಷ ವರದಿ ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT