ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು | 'ಸಕ್ಕಿಂಗ್‌ ಯಂತ್ರ ಖರೀದಿ; ಅಧಿಕಾರಿಗೆ ನೋಟಿಸ್ '

ಸಾಮಾನ್ಯ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ
Published 7 ಮಾರ್ಚ್ 2024, 15:16 IST
Last Updated 7 ಮಾರ್ಚ್ 2024, 15:16 IST
ಅಕ್ಷರ ಗಾತ್ರ

ಹುಣಸೂರು: ‘ನಗರಸಭೆ ವ್ಯಾಪ್ತಿಯ ಸರ್ಕಾರಿ ಮಹಿಳಾ ಶಾಲೆಯಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದು ಶಾಲೆಯಲ್ಲಿ ಸೂಕ್ತ ಶೌಚಾಲಯದ ವ್ಯವಸ್ಥೆ ಇಲ್ಲ, ನಗರಸಭೆ ಸೆಸ್ ಹಣದಲ್ಲಿ ಶೌಚಾಲಯ ನಿರ್ಮಿಸಬೇಕು’ ಎಂದು ನಗರಸಭೆ ಸದಸ್ಯ ಕೃಷ್ಣರಾಜ ಗುಪ್ತ ಬಜೆಟ್ ಮೇಲಿನ ಚರ್ಚೆ ಸಭೆಯಲ್ಲಿ ಪ್ರಸ್ತಾಪಿಸಿದರು.

‘ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿಗಳು ಹೆಣ್ಣು ಮಕ್ಕಳ ಶಾಲೆಯಲ್ಲಿ ಶೌಚಾಲಯವಿಲ್ಲದಿದ್ದರೆ ಮೊದಲು ಆದ್ಯತೆ ನೀಡಿ ಕಾಮಗಾರಿಗೆ ಅನುಮೋದಿಸಿ’ ಎಂದು‌ ಮನವಿ ಮಾಡಿದರು. ಸಭೆ ಕಾಮಗಾರಿ ಕೈಗೊಳ್ಳಲು ಸರ್ವಾನುಮತದಿಂದ ಒಪ್ಪಿಗೆ ನೀಡಿತು.

‘ನಗರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ 20 ರಿಂದ 25 ವರ್ಷ ಹಳೆಯದಾಗಿದ್ದು, ಪೈಪ್ ಲೈನ್ ಆ ದಿನಕ್ಕೆ ಅನುಗುಣವಾಗಿ ಬಳಸಲಾಗಿತ್ತು. ಇಂದಿನ ಜನಸಂಖೆಗೆ ಹಳೆಯ ಪೈಪ್ ಲೈನ್ ನಿಂದಾಗಿ ಸಮಸ್ಯೆ ತಲೆ ದೂರಿದೆ. 15 ನೇ ಹಣಕಾಸು ಯೋಜನೆಯಲ್ಲಿ ಒಳಚರಂಡಿ ಕಾಮಗಾರಿ ತೆಗೆದುಕೊಳ್ಳಲು ಟೆಂಡರ್ ಪ್ರಕ್ರಿಯೆ ನಡೆದಿದೆ’ ಎಂದು ಸಹಾಯಕ ಎಂಜಿನಿಯರ್ ಶರ್ಮಿಳಾ ಸಭೆಗೆ ಮಾಹಿತಿ ನೀಡಿದರು.

‘ನಗರದಲ್ಲಿ 3,600 ಕಂಬಗಳಲ್ಲಿ ಬೀದಿ ದೀಪ ಹಾಕಿದ್ದು, ಈ ಪೈಕಿ 600 ಸಿಎಫ್ಎಲ್ ದೀಪಗಳಿದೆ, ಇದರ ನಿರ್ವಹಣೆ ಗಂಜಾಂ ಶಿವು ಗುತ್ತಿಗೆ ನೀಡಿದ್ದರೂ ಸಮಪರ್ಕವಾಗಿ ನಿರ್ವಹಿಸದೆ ನಗರ ಕತ್ತಲೆಯಲ್ಲಿ ಮುಳುಗಿದೆ’ ಎಂದು ಸದಸ್ಯ ಸೈಯದ್ ಯೂನಿಸ್, ಗಣೇಶ್ ಕುಮಾರಸ್ವಾಮಿ, ಶರವಣ, ಹರೀಶ್ ಮತ್ತು ಮಲ್ಲಿಕ್ ಪಾಶ ಸಭೆಗೆ ತಿಳಿಸಿದರು. ಈ ಸಂಬಂಧ ಆಡಳಿತಾಧಿಕಾರಿ ಪೌರಾಯುಕ್ತರಿಗೆ ನಗರ ವ್ಯಾಪ್ತಿಯಲ್ಲಿ ಎಷ್ಟು ದೀಪ ಬಳಸಲಾಗಿದೆ ಸಮೀಕ್ಷೆ ನಡೆಸಿ ಸಮಗ್ರ ವರದಿ ನೀಡಲು ಸೂಚಿಸಿದರು.

ಒಳಚರಂಡಿ ನಿರ್ವಹಣೆ ಸಮರ್ಪಕ ನಿರ್ವಹಣೆ ಇಲ್ಲದೆ ಮ್ಯಾನ್ ಹೋಲ್ ನೀರಿನಿಂದ ತುಂಬಿ ತುಳುಕಿದೆ. ‘ಪ್ರಜಾವಾಣಿ’ ಕುಂದು ಕೊರತೆ ವಿಭಾಗದಲ್ಲಿ ಸುದ್ದಿ ಪ್ರಕಟಿಸಿದ್ದರೂ ಅಧಿಕಾರಿಗಳು ಗಮನಿಸಿಲ್ಲ. ನಗರಸಭೆ ಕೆಲಸಕ್ಕೆ ಬಾರದ ಸಕ್ಕಿಂಗ್ ವಾಹನ ಖರೀದಿಸಿ ಜನರ ತೆರಿಗೆ ಹಣ ಪೋಲು ಮಾಡಿದೆ. ಈಗ 3 ಸಾವಿರ ಲೀಟರ್‌ ಸಾಮರ್ಥ್ಯದ ಸಕ್ಕಿಂಗ್ ವಾಹನ ಖರೀದಿಸಲು ಮುಂದಾಗಿದೆ ಎಂದು ಸದಸ್ಯರು ದೂರಿದರು.

ಜಿಲ್ಲಾಧಿಕಾರಿಗಳು ಸಹಾಯಕ ಎಂಜಿನಿಯರ್ ಕಳಂದ್ರ ಅವರನ್ನು ತರಾಟೆಗೆ ತೆಗೆದುಕೊಂಡು ‘ತಾಂತ್ರಿಕವಾಗಿ ಅಸಮರ್ಪಕ ಎಂದು ತಿಳಿದಿದ್ದರು ಕಡಿಮೆ ಸಾಮರ್ಥ್ಯದ ಸಕ್ಕಿಂಗ್ ಯಂತ್ರ ಖರೀದಿಸಿದ ಕಾರಣವೇನು’ ಎಂದು ಪ್ರಶ್ನಿಸಿ, ಯೋಜನಾ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಲು ಆದೇಶಿಸಿದರು.

ತ್ಯಾಜ್ಯ ಸಂಗ್ರಹಕ್ಕೆ ಪೌರಕಾರ್ಮಿಕರ ಕೊರತೆ ಮತ್ತು ಮರಣ ಹೊಂದಿದ ಪೌರಕಾರ್ಮಿಕರ ಕುಟುಂಬಕ್ಕೆ ಅನುಕಂಪದಲ್ಲಿ ಉದ್ಯೋಗ ನೀಡುವಂತೆ ಸದಸ್ಯೆ ರಾಣಿಪೆರುಮಾಳ ಮನವಿ ಮಾಡಿದರು. ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ನೇರಪಾವತಿಯಲ್ಲಿ ನಿಯೋಜನೆ ಆದವರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲು ಸಾಧ್ಯವಿಲ್ಲ. ಹೊರಗುತ್ತಿಗೆ ಆಧಾರದಲ್ಲಿ ನೊಂದ ಕುಟುಂಬದವರಿಗೆ ಉದ್ಯೋಗ ನೀಡಬಹುದು. ನಗರಸಭೆ ಹೊರಗುತ್ತಿಗೆಯಲ್ಲಿ ಸಿಬ್ಬಂದಿ ನಿಯೋಜಿಸಿಕೊಳ್ಳಲು ಅನುಮತಿ ನೀಡಿದ್ದೇನೆ ಎಂದರು.

ಖಾಸಗಿ ಬಡಾವಣೆಯಲ್ಲಿ ಉದ್ಯಾನಕ್ಕೆ ಮೀಸಲಿಟ್ಟ ಸ್ಥಳದಲ್ಲಿ ಒಳಚರಂಡಿ ತ್ಯಾಜ್ಯ ಸಂಗ್ರಹ ಘಟಕ ನಿರ್ಮಿಸಲು ಹುಡಾ ಅನುಮತಿ ನೀಡುತ್ತಿದೆ ಎಂದು ಸದಸ್ಯ ಸ್ವಾಮಿಗೌಡ ಸಭೆ ಗಮನಕ್ಕೆ ತಂದರು. ಜಿಲ್ಲಾಧಿಕಾರಿಗಳು ಹುಡಾ ಕಾರ್ಯದರ್ಶಿ ಶ್ರೀಧರ್ ಅವರನ್ನು ಪ್ರಶ್ನಿಸಿದರು. ಸಮರ್ಪಕ ಉತ್ತರ ನೀಡದಿದ್ದಾಗ ಕಾನೂನು ಉಲ್ಲಂಘಿಸಿದ್ದೀರಿ ಈ ಸಂಬಂಧ ಯೋಜನಾಧಿಕಾರಿ ತನಿಖೆ ನಡೆಸಿ ವರದಿ ನೀಡಬೇಕು ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT