ಮೈಸೂರು: ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಮಂಜೂರು ಮಾಡಿರುವ ನಿವೇಶನಗಳಿಗೂ, ಅಧಿಕಾರಿಗಳು ಸರ್ಕಾರಕ್ಕೆ ನೀಡಿದ ಅಂಕಿ–ಅಂಶಕ್ಕೂ ತಾಳೆಯಾಗುತ್ತಿಲ್ಲ.
ಇದು ಮುಡಾ ಹಗರಣದ ಹೊಸ ರೂಪವನ್ನು ಬಯಲು ಮಾಡಿದೆ.
ನಾಲ್ಕು ವರ್ಷದಲ್ಲಿ 4,829 ನಿವೇಶನ ಮಂಜೂರಾತಿ ಪತ್ರಗಳನ್ನು ನೀಡಲಾಗಿದೆ. ಆದರೆ ಅಧಿಕಾರಿಗಳು ನೀಡಿರುವ ನಿವೇಶನಗಳ ನೋಂದಣಿ ಲೆಕ್ಕದ ಸಂಖ್ಯೆ 1,200 ದಾಟುತ್ತಿಲ್ಲ.
2021ರ ಏಪ್ರಿಲ್‌ನಿಂದ 2024ರ ಜುಲೈ 3ರವರೆಗೆ ಬಳಕೆಯಾಗಿರುವ ಸೆಕ್ಯುರಿಟಿ ಬಾಂಡ್ ಶೀಟ್ ದಾಖಲೆಯು ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಕೇವಲ 54 ದಿನಗಳಲ್ಲಿ ಅಂದರೆ, 2024ರ ಮೇ 9ರಿಂದ ಜುಲೈ 3ರ ಅವಧಿಯಲ್ಲಿ 1,200 ಮಂಜೂರಾತಿ ಪತ್ರಗಳನ್ನು ಬಳಸಿರುವುದು ಕಡೆಯ ಕ್ಷಣದ ಕಸರತ್ತಿಗೆ ದಾಖಲೆಯಾಗಿದೆ.
ಮುಡಾದಲ್ಲಿ ನಿವೇಶನ ಹಂಚಿಕೆಗೂ ಮುನ್ನ ಅಧಿಕೃತವಾಗಿ ಮಂಜೂರಾತಿ ಪತ್ರವನ್ನು ಫಲಾನುಭವಿ
ಗಳಿಗೆ ನೀಡಲಾಗುತ್ತದೆ. ಅದಕ್ಕೆಂದೇ ಬಾರ್‌ಕೋಡ್ ಇರುವ ವಿಶಿಷ್ಟ ಬಾಂಡ್ ಶೀಟ್ ಬಳಸಲಾಗುತ್ತದೆ. ಪತ್ರಗಳನ್ನು ಮುದ್ರಿಸಿದ ಬಳಿಕ ಎಂಜಿನಿಯರ್ ದರ್ಜೆಯ ಅಧಿಕಾರಿಯ ವಶಕ್ಕೆ ನೀಡಲಾಗುತ್ತದೆ. ಅವುಗಳನ್ನು ಬಳಸುವ ಮುನ್ನ ರಿಜಿಸ್ಟರ್‌ನಲ್ಲಿ ಪ್ರತಿ ಪತ್ರದ ವಿವರಗಳನ್ನು ನಮೂದಿಸಬೇಕು. ನಿವೇಶನ ಮಂಜೂರಾತಿ ಆದೇಶವನ್ನು ಮುದ್ರಿಸಿದ ಬಳಿಕ, ಯಾರಿಗೆ, ಯಾವ ನಿವೇಶನ ಮಂಜೂರಾಗಿದೆ ಎಂಬ ಮಾಹಿತಿ ನೀಡಬೇಕು. ಅಧಿಕಾರಿಗಳು ಮಾಹಿತಿಯನ್ನು ಮರೆಮಾಚಿ ಪತ್ರಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.
‘ಮುಡಾ ಆಯುಕ್ತರಿಗೆ ಮಾತ್ರ ಪತ್ರ ಬಳಸುವ ಅಥವಾ ಬಳಸಲು ಅನುಮತಿ ನೀಡುವ ಅಧಿಕಾರವಿದೆ. ಒಪ್ಪಿಗೆ ಪಡೆದು ಕಾರ್ಯದರ್ಶಿಗಳು ಬಳಸಬಹುದು. ಆದರೆ, ನಿಯಮ ಮೀರಿ ಕ್ಲರ್ಕ್ ದರ್ಜೆಯ ಸಿಬ್ಬಂದಿಗೂ ಪತ್ರ ಸಿಕ್ಕಿದೆ’ ಎಂದು ಅಧಿಕಾರಿಯೊಬ್ಬರು ದೂರುತ್ತಾರೆ.
ಇಂತಹ ಪತ್ರಗಳನ್ನು ಬಳಸಿ ಅನಧಿಕೃತವಾಗಿ ನಿವೇಶನಗಳನ್ನು ಮಂಜೂರು ಮಾಡಿ, ಅನ್ಯರ ಹೆಸರಿಗೆ ನೋಂದಣಿ ಮಾಡಿಕೊಟ್ಟಿರುವ ಸಾಧ್ಯತೆ ಹೆಚ್ಚಿದೆ. ಅದನ್ನೇ ಮುಂದಿಟ್ಟುಕೊಂಡು ಹಣಕ್ಕೆ ಒತ್ತಾಯಿಸಲಾಗಿದೆ. ‘ಹೀಗಾಗಿ ಇಡೀ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು. ಈ ಹಿಂದಿನ ಆಯುಕ್ತರು, ಕಾರ್ಯದರ್ಶಿ, ವಿಶೇಷ ತಹಶೀಲ್ದಾರ್, ಆಯುಕ್ತರ ಆಪ್ತ ಸಹಾಯಕರನ್ನು ವಿಚಾರಣೆಗೆ ಒಳಪಡಿಸಬೇಕು’ ಎಂಬ ಆಗ್ರಹ ಕೇಳಿಬಂದಿದೆ.
5 ಸಾವಿರಕ್ಕೂ ಹೆಚ್ಚು ನಿವೇಶನ ಅಕ್ರಮವಾಗಿ ಹಂಚಿಕೆಆಗಿರುವುದಕ್ಕೆ ಈ ದಾಖಲೆಯೇ ಸಾಕ್ಷ್ಯ. ಪಾರದರ್ಶಕ ತನಿಖೆ ನಡೆಸಿ ನಿವೇಶನಗಳನ್ನು ಹಿಂಪಡೆಯಬೇಕುರಘು ಕೌಟಿಲ್ಯ ಬಿಜೆಪಿ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.