ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಪಾಲಿಕೆ, ಜಿ.ಪಂ, ತಾ.ಪಂ ಚುನಾವಣೆ ಯಾವಾಗ?

ಈ ಸಂಸ್ಥೆಗಳಲ್ಲಿ ಅಧಿಕಾರಿಗಳದ್ದೇ ದರ್ಬಾರ್, ಜನಪ್ರತಿನಿಧಿಗಳಿಲ್ಲದೆ ತೊಂದರೆ: ಜನರ ದೂರು
Published 4 ಮೇ 2024, 9:04 IST
Last Updated 4 ಮೇ 2024, 9:04 IST
ಅಕ್ಷರ ಗಾತ್ರ

ಮೈಸೂರು: ಲೋಕಸಭೆ ಸಾರ್ವತ್ರಿಕ ಚುನಾವಣೆಯ ಮತದಾನ ಮುಗಿದಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೂ ವೇಳಾಪಟ್ಟಿ ಪ್ರಕಟಿಸಲಾಗಿದೆ. ಆದರೆ, ಮೈಸೂರು ಮಹಾನಗರ ಪಾಲಿಕೆ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಯಾವಾಗ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಇದು ಆಡಳಿತ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಈ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಿಗಳದ್ದೇ ದರ್ಬಾರ್‌ ನಡೆಯುತ್ತಿದ್ದು, ಜನಪ್ರತಿನಿಧಿಗಳನ್ನು ಕಂಡುಕೊಳ್ಳುವುದು ಇಂದಿಗೂ ಸಾಧ್ಯವಾಗಿಲ್ಲ. ಪರಿಣಾಮ, ಯೋಜನೆಗಳ ನಿಯಮಿತ ಪ್ರಗತಿ ಪರಿಶೀಲನೆ, ಮೇಲ್ವಿಚಾರಣೆ, ಸಭೆಗಳು ಹಾಗೂ ಆಡಳಿತಾತ್ಮಕ ಪ್ರಗತಿಯ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ ಎನ್ನುವುದು ಸಾರ್ವಜನಿಕರ ದೂರಾಗಿದೆ. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಂತೂ ದೀರ್ಘ ಕಾಲದಿಂದ ಅಧಿಕಾರಿಗಳೇ ಆಡಳಿತ ನಡೆಸುತ್ತಿದ್ದಾರೆ!

ಜಿಲ್ಲಾ ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳ ಅಧಿಕಾರದ ಅವಧಿ 2021ರಲ್ಲೇ ಮುಕ್ತಾಯವಾಗಿದೆ. 65 ವಾರ್ಡ್‌ಗಳನ್ನು ಹೊಂದಿರುವ ಮೈಸೂರು ಮಹಾನಗರ ಪಾಲಿಕೆಯ ಚುನಾಯಿತ ಆಡಳಿತ ಮಂಡಳಿಯ ಅಧಿಕಾರದ ಅವಧಿ ಹೋದ ವರ್ಷದ ನ.16ರಂದು ಕೊನೆಗೊಂಡಿದೆ. ಅಲ್ಲಿಂದ ಈವರೆಗೂ ಈ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿಲ್ಲ. ಯಾವಾಗ ನಡೆಸಲಾಗುತ್ತದೆ ಎಂಬ ಸ್ಪಷ್ಟತೆಯೂ ಅಧಿಕಾರಿಗಳ ಮಟ್ಟದಲ್ಲಿ ಇಲ್ಲ. ಈ ಮಧ್ಯೆ, ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿರುವ ಆಕಾಂಕ್ಷಿಗಳ ಕಾಯುವಿಕೆಯೂ ಮುಂದುವರಿದಿದೆ.

ಹೊಸ ಸರ್ಕಾರ ಬಂದರೂ: ಈ ಅವಧಿಯಲ್ಲಿ ರಾಜ್ಯದಲ್ಲಿ ಹೊಸದಾಗಿ ಕಾಂಗ್ರೆಸ್‌ ಸರ್ಕಾರ ರಚನೆಗೊಂಡಿತು. ‘ನಾವು ಎಲ್ಲ ಚುನಾವಣೆಗಳನ್ನೂ ಸಕಾಲಕ್ಕೆ ನಡೆಸುತ್ತೇವೆ’ ಎಂದು ಹೊಸ ಸರ್ಕಾರದವರೂ ಹೇಳಿದ್ದರು. ಆದರೆ, ಈ ನಿಟ್ಟಿನಲ್ಲಿ ಬೆಳವಣಿಗೆಗಳು ನಡೆದಿಲ್ಲ.

‘ಪಾಲಿಕೆ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದೇವೆ. ಯಾವುದೇ ಕಾರಣಕ್ಕೂ ವಿಳಂಬ ಮಾಡುವುದಿಲ್ಲ. ಈಗಾಗಲೇ ಸಿದ್ಧತೆ ನಡೆಸುತ್ತಿದ್ದೇವೆ’ ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್ ಹೇಳಿದ್ದರು. ‘ಮೈಸೂರು ಮಹಾನಗರ ಪಾಲಿಕೆ ಸದಸ್ಯರ ಚುನಾವಣೆಗೆ ಈಗಾಗಲೇ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಮೀಸಲಾತಿ ವಿಚಾರದಲ್ಲಿ ಸ್ವಲ್ಪ ಗೊಂದಲವಿತ್ತು. ಇದನ್ನು ಬಗೆಹರಿಸಲಾಗುತ್ತಿದೆ. ಸಕಾಲಕ್ಕೆ ಚುನಾವಣೆ ನಡೆಸುತ್ತೇವೆ. ಬಿಜೆಪಿಯವರಂತೆ ಚುನಾವಣೆಗೆ ಹೆದರಿ ಹಿಂದೆ ಸರಿಯುವುದಿಲ್ಲ’ ಎಂದು ಹೋದ ವರ್ಷದ ಸೆಪ್ಟೆಂಬರ್‌ನಲ್ಲೇ ಹೇಳಿಕೆ ನೀಡಿದ್ದರು.

ನಗರಪಾಲಿಕೆ ಸದಸ್ಯರ ಅಧಿಕಾರದ ಅವಧಿ ಮುಗಿದು ಐದೂವರೆ ತಿಂಗಳು ಕಳೆದಿದೆ. ಈ ನಡುವೆ, ಲೋಕಸಭಾ ಚುನಾವಣೆ ಘೋಷಣೆಯಾದ್ದರಿಂದ ಎಲ್ಲರೂ ಅತ್ತ ಗಮನಕೊಟ್ಟಿದ್ದರಿಂದ ನಗರ ಸ್ಥಳೀಯ ಹಾಗೂ ಪಂಚಾಯತ್‌ರಾಜ್‌ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ತಲೆಕಡಿಸಿಕೊಂಡಿಲ್ಲ. ಲೋಕಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಕೊನೆಗೊಳ್ಳಲು ಜೂನ್‌ 5ರವರೆಗೂ ಅವಕಾಶವಿದೆ.

ಪ್ರತಿನಿಧಿಗಳಿಲ್ಲದೆ ತೊಂದರೆ: ಜನರು ಈ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಂಡುಬರುವ ಅಥವಾ ಎದುರಾಗುವ ಸಮಸ್ಯೆಗಳನ್ನು ಹೇಳಿಕೊಳ್ಳಲು, ಕುಂದುಕೊರತೆಗಳನ್ನು ನಿವಾರಿಸಿಕೊಳ್ಳಲು ತಮ್ಮ ಪ್ರತಿನಿಧಿಗಳಿಲ್ಲದೇ ಪರದಾಡುವಂತಾಗಿದೆ. ಎಲ್ಲದಕ್ಕೂ ಅಧಿಕಾರಿಗಳ ಬಳಿಗೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ. ಕೆಲವು ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸದಿರುವುದರಿಂದ ಸಮಸ್ಯೆಗಳು ಪರಿಹಾರ ಕಾಣದೇ ಹಾಗೆಯೇ ಉಳಿಯುತ್ತಿವೆ ಎಂಬ ಅಸಮಾಧಾನದ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.

‘ಜನಪ್ರತಿನಿಧಿಗಳು ಇಲ್ಲದಿರುವುದರಿಂದ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ವಹಣೆ ಕಾರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಜನರಿಂದ ತೆರಿಗೆ ಸಂಗ್ರಹಿಸುವ ಕಾರ್ಯವೂ ಸಮರ್ಪಕವಾಗಿ ನಡೆಯುತ್ತಿಲ್ಲ. ಸಾರ್ವಜನಿಕರ ಕೆಲಸದ ಮೇಲೆ ನಿಗಾ ವಹಿಸುವುದು ಅಧಿಕಾರಿಗಳಿಂದ ಸಾಧ್ಯವಾಗುತ್ತಿಲ್ಲ’ ಎಂಬ ದೂರು ಪಾಲಿಕೆ ಸದಸ್ಯರು ಹಾಗೂ ಮಾಜಿ ಮೇಯರ್‌ಗಳದಾಗಿದೆ.

ಇನ್ನೂ ಹಲವು ತಿಂಗಳು!: ‘ಇನ್ನೂ ಹಲವು ತಿಂಗಳುಗಳು ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಬಳಿಕವಷ್ಟೆ ಚುನಾವಣೆಗೆ ಸಂಬಂಧಿಸಿದ ಪ್ರಕ್ರಿಯೆಗಳು ಆರಂಭಗೊಳ್ಳಬಹುದು. ಎಲ್ಲವೂ ಸರ್ಕಾರದ ನಿರ್ಧಾರದ ಮೇಲೆ ಅವಲಂಬಿತವಾಗಿವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

‘ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಸಂಬಂಧ ನಮಗೆ ಯಾವುದೇ ಸೂಚನೆ ಇಲ್ಲ. ವಾರ್ಡ್‌ವಾರು ಮೀಸಲಾತಿ ಪ್ರಕ್ರಿಯೆಯೂ ಆಗಬೇಕಾಗಿದೆ. ಲೋಕಸಭೆ ಚುನಾವಣೆ ಮಾದರಿ ನೀತಿಸಂಹಿತೆ ಮುಗಿದ ಬಳಿಕ ಸರ್ಕಾರ ಏನು ನಿರ್ಧಾರ ಮಾಡುತ್ತದೆಯೋ ನೋಡಬೇಕು. ಸರ್ಕಾರದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರಪಾಲಿಕೆ ಆಯುಕ್ತೆ ಎನ್.ಎನ್. ಮಧು ‘ಪ್ರಜಾವಾಣಿ’ಗೆ ತಿಳಿಸಿದರು.

ಸಿದ್ಧತೆ ಆರಂಭಿಸಿದ ಎಎಪಿ

ಚುನಾವಣೆ ಘೋಷಣೆಗೂ ಮುನ್ನವೇ ಆಮ್‌ ಆದ್ಮಿ ಪಾರ್ಟಿ (ಎಎಪಿ) ಸಿದ್ಧತೆ ಆರಂಭಿಸಿದೆ. ಅಭ್ಯರ್ಥಿಗಳ ಆಯ್ಕೆಗೆ ಪ್ರಕ್ರಿಯೆ ನಡೆಸುತ್ತಿದೆ. ‘ಪ್ರತಿ ಬುಧವಾರ ಸಂಜೆ 5.30ಯಿಂದ 7ರವರೆಗೆ ಟಿಕೆಟ್ ಆಕಾಂಕ್ಷಿಗಳ ಸಭೆ ನಡೆಸುತ್ತಿದ್ದೇವೆ. ಬಹಳಷ್ಟು ಮಂದಿ ಹೊಸ ಆಕಾಂಕ್ಷಿಗಳಾಗಿದ್ದಾರೆ. ಅವರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಹೋದ ವಾರ ನಡೆದ ಸಭೆಗೆ 25 ಮಂದಿ ಬಂದಿದ್ದರು. ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲೂ ಸ್ಪರ್ಧಿಸುವ ಉದ್ದೇಶವಿದ್ದು ಬಹಳಷ್ಟು ಮುಂಚಿತವಾಗಿಯೇ ಪ್ರಯತ್ನ ಆರಂಭಿಸಿದ್ದೇವೆ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಲ್. ರಂಗಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT