ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ‘ಸಿರಿಧಾನ್ಯ’ ಹಬ್ಬದ ಸಂಭ್ರಮ, ವಾಕಥಾನ್!

ಕೃಷಿ ಇಲಾಖೆಯಿಂದ ಮೇಳ l ರೈತ ಜಾತ್ರೆ, ಆಹಾರೋತ್ಪನ್ನಗಳ ಆಕರ್ಷಣೆ
Published 28 ಡಿಸೆಂಬರ್ 2023, 16:22 IST
Last Updated 28 ಡಿಸೆಂಬರ್ 2023, 16:22 IST
ಅಕ್ಷರ ಗಾತ್ರ

ಮೈಸೂರು: ಸಿರಿಧಾನ್ಯ ಕೃಷಿಗೆ ಪ್ರೋತ್ಸಾಹ ಹಾಗೂ ಆಹಾರ ಅರಿವು ಮೂಡಿಸಲು ಕೃಷಿ ಇಲಾಖೆಯು ಗುರುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಸಿರಿಧಾನ್ಯ ಹಬ್ಬ ಹಾಗೂ ವಾಕಥಾನ್ ಕೃಷಿಕರು, ವಿದ್ಯಾರ್ಥಿಗಳು, ಗ್ರಾಹಕರ ಗಮನ ಸೆಳೆಯಿತು. ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷಕ್ಕೆ ವಿದಾಯ ಹೇಳಲಾಯಿತು.

ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಎದುರು ‘ಸಿರಿಧಾನ್ಯ ನಡಿಗೆ’ಗೆ ‌ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ವಿಧಾನ ಪರಿಷತ್ ಸದಸ್ಯ ಸಿ.ಎನ್‌.ಮಂಜೇಗೌಡ ಬಾವುಟ ಬೀಸಿ ಚಾಲನೆ ನೀಡಿದರು. ಹೆಜ್ಜೆ ಹಾಕಿದ ರೈತರು, ವಿದ್ಯಾರ್ಥಿಗಳು ನಾಗರಿಕರು ‘ಸಮೃದ್ಧ ಸಿರಿಧಾನ್ಯ’ ಹಾಗೂ ಪೌಷ್ಟಿಕ ಆಹಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.

ನಂತರ ದಸರಾ ವಸ್ತುಪ್ರದರ್ಶನ ಆವರಣದ ಕಾಳಿಂಗರಾವ್ ಸಭಾಂಗಣದಲ್ಲಿ ಆಯೋಜಿಸಿದ್ದ ಮೇಳದಲ್ಲಿ ಪಾಲ್ಗೊಂಡವರು ರಾಗಿ, ಸಜ್ಜೆ, ಜೋಳ ನವಣೆ, ಸಾಮೆ ಸೇರಿದಂತೆ ಸಿರಿಧಾನ್ಯಗಳಿಂದ ಮಾಡಿದ ಉತ್ಪನ್ನಗಳನ್ನು ಕೊಂಡರು. ಜೊತೆಯಲ್ಲಿ ಸಿರಿಧಾನ್ಯ ಕೃಷಿಯಲ್ಲಿ ಬದುಕು ರೂಪಿಸಿಕೊಂಡ ‘ಸಹಜ ಕೃಷಿಕ’ರ ಮಾತುಗಳು ಎಲ್ಲರನ್ನು ಸೆಳೆದವು.  

500ಕ್ಕೂ ಹೆಚ್ಚು ಕೃಷಿಕರು ಸಿರಿಧಾನ್ಯ ಬೆಳೆಯುವ ಸುಧಾರಿತ ಕ್ರಮ, ಸಂಸ್ಕರಣೆ, ಆಹಾರೋತ್ಪನ್ನಗಳ ಬಗ್ಗೆ ತಜ್ಞರಿಂದ ಮಾಹಿತಿ ಪಡೆದರು. ಸಿರಿಧಾನ್ಯಗಳಿಂದ ಮಾಡಿದ ಉತ್ಪನ್ನಗಳ 20 ಮಾರಾಟ ಮಳಿಗೆಗಳು ಆಹಾರೋದ್ಯಮಿಗಳ ಸಾಧನೆಯನ್ನು ಬಿಂಬಿಸಿದವು. 

49 ತಳಿಯ ಸಿರಿಧಾನ್ಯ ಬೀಜಗಳು, ರಾಸಾಯನಿಕ ಮುಕ್ತ ಬೆಲ್ಲ, ಬಾಳೆ ನಾರಿನ ಉತ್ಪನ್ನಗಳು, ರಾಗಿ ಅಂಬಲಿ, ಸಜ್ಜೆ ಗಂಜಿ ಮತ್ತು ಸಿರಿಧಾನ್ಯ ಪುಡಿಗಳನ್ನು ವಸ್ತುಪ್ರದರ್ಶನಕ್ಕೆ ಬಂದವರು ಕೊಂಡರು. ಮೇಳದ ಭರಾಟೆ ರಾತ್ರಿವರೆಗೂ ಜೋರಿತ್ತು. 

ಕೃಷಿ ಮಾಹಿತಿ: ಕೇಂದ್ರ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯೂ ಇದ್ದದ್ದು ವಿಶೇಷ. ಜೋಳ, ರಾಗಿ, ನವಣೆ ಸೇರಿದಂತೆ ಸಿರಿಧಾನ್ಯಗಳನ್ನು ಬೆಳೆಯುವ ವಿಧಾನ, ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಳಕೆ ಬಗ್ಗೆ ರೈತರು ಮಾಹಿತಿ ಸಂಗ್ರಹಿಸಿದರು.

ಸಿರಿಧಾನ್ಯಗಳ ಶುಭಾಶಯ ಪತ್ರ: ಹೊಸ ವರ್ಷ, ಜನ್ಮದಿನದಲ್ಲಿ ಶುಭಾಶಯ ಕಾರ್ಡ್‌ ಅನ್ನು ‘ದೇಸಿ ಸೀಡ್ ಪ್ರೊಡ್ಯೂಸರ್ ಕಂಪನಿ’ ತಯಾರಿಸಿತ್ತು. ಸಿರಿಧಾನ್ಯಗಳ ಚಿತ್ರವಿರುವ ಆಕರ್ಷಣೆಯ ಗ್ರೀಟಿಂಗ್‌ಗಳು ಗಮನ ಸೆಳೆದವು. 

ಪಂಚಕವ್ಯ, ತುಳಸಿ, ಅಲೋವೆರಾ, ನೀಮು, ಗುಲಾಬು, ರಕ್ತ ಚಂದನ ಸೋಪುಗಳಿದ್ದವು. ದೇಹದ ಕೊಬ್ಬು ಮತ್ತು ತೂಕ ಕಡಿಮೆ ಮಾಡುವ ಅಗಸೆ ಬೀಜಗಳ ಸ್ಥೂಲಕಾಯರು ಕುತೂಹಲ ತಳೆದು ಕೊಂಡರು. ಮಲೆನಾಡಿನ ಜೇನು ತುಪ್ಪ, ಹಪ್ಪಳ, ಸಂಡಿಗೆಗಳು, ಮೊಳಕೆ ಕಾಳು ಹಪ್ಪಳ, ರಾಗಿ ಹಪ್ಪಳ, ಹಲಸಿನ ಕಾಯಿ ಚಿಪ್ಸ್ ಅನ್ನೂ ಖರೀದಿಸಿದರು.

20ಕ್ಕೂ ಹೆಚ್ಚು ಮಳಿಗೆಗಳು ಸಿರಿಧಾನ್ಯ ಖರೀದಿಸಿದ ಗ್ರಾಹಕರು ವಾಕಥಾನ್‌ ಮೂಲಕ ಜಾಗೃತಿ

‘ಸರ್ಕಾರ ಎಂದಿಗೂ ರೈತಪರ’

ಸಿರಿಧಾನ್ಯ ಹಬ್ಬಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ.ಮಹದೇವಪ್ಪ ‘ರೈತರು ಕೃಷಿ ತಂತ್ರಜ್ಞಾನಗಳನ್ನು ಬೇಸಾಯದಲ್ಲಿ ಅಳವಡಿಸಿಕೊಳ್ಳಬೇಕು. ಸಾವಯವ ಕೃಷಿ ಸಿರಿಧಾನ್ಯ ಕೃಷಿ ಮಾಡುವುದಷ್ಟೇ ಅಲ್ಲ ಆಹಾರೋದ್ಯಮಿಗಳಾಗಬೇಕು’ ಎಂದು ಸಲಹೆ ನೀಡಿದರು.   ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಎಂದಿಗೂ ರೈತ ಪರ. ರೈತ ಹೋರಾಟದ ಮೂಲಕ ರಾಜಕೀಯ ಜೀವನ ಆರಂಭಿಸಿದವರಿಗೆ ಕಷ್ಟಗಳು ಗೊತ್ತಿವೆ’ ಎಂದರು.  ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ‘ಸಚಿವ ಶಿವಾನಂದ ಪಾಟೀಲ ರೈತರನ್ನು ಅವಮಾನಿಸಿ ಹೇಳಿಕೆ ನೀಡಿದ್ದಾರೆ. ಅವರಿಗೆ ಬುದ್ಧಿ ಹೇಳಬೇಕು. ಯಾವುದೇ ಸರ್ಕಾರದ ಎದುರು ರೈತರು ಭಿಕ್ಷೆ ಬೇಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.  ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ‘ರೈತರ ಕುಟುಂಬಗಳ ವಾರ್ಷಿಕ ಆದಾಯ ಬಡತನ ರೇಖೆಗಿಂತಲೂ ಕಡಿಮೆ. ಕನಿಷ್ಠ ಆದಾಯ ಖಾತ್ರಿ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.   ಸಿಎಫ್‌ಟಿಆರ್‌ಐ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣ ಸಿಂಗ್ ಕೃಷಿಕ ಸಮಾಜದ ಅಧ್ಯಕ್ಷ ಕಲಳ್ಳಿ ಶಿವಕುಮಾರ್‌ ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾ ಸಾಗರ್‌ ರಾಮೇಗೌಡ ಮುಖಂಡರಾದ ಬನ್ನೂರು ನಾರಾಯಣ ಎ.ಜೆ.ಕಾಳೇಗೌಡ  ಸುನೀತಾ ವೀರಪ್ಪಗೌಡ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಬಿ.ಎಸ್‌.ಚಂದ್ರಶೇಖರ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT