ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಸುತ್ತೂರು ಜಾತ್ರೆಗೆ ಅದ್ದೂರಿ ಚಾಲನೆ

Published 6 ಫೆಬ್ರುವರಿ 2024, 14:27 IST
Last Updated 6 ಫೆಬ್ರುವರಿ 2024, 14:27 IST
ಅಕ್ಷರ ಗಾತ್ರ

ಮೈಸೂರು: ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಮಂಗಳವಾರ ಅದ್ದೂರಿಯಾಗಿ‌ ಆರಂಭವಾಯಿತು. ರೈತರು, ಭಕ್ತರು ಅರಿವುನ ಜಾತ್ರೆಗೆ ಹರಿದು ಬಂದರು.

ಕೃಷಿಮೇಳ, ವಿಜ್ಞಾನ ವಸ್ತುಪ್ರದರ್ಶನ, ಕೃಷಿ ಬ್ರಹ್ಮಾಂಡ, ಆರೋಗ್ಯ ತಪಾಸಣಾ ಶಿಬಿರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರೆ, ಸಾಂಸ್ಕೃತಿಕ ಮೇಳವನ್ನು ಮಧು ಬಂಗಾರಪ್ಪ ಉದ್ಘಾಟಿಸಿದರು.

ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವ ಮೂರ್ತಿಯನ್ನು ಜಾನಪದ ಕಲಾತಂಡಗಳೊಂದಿಗೆ ಸುತ್ತೂರು ಮಠದಿಂದ ಬೆಳಿಗ್ಗೆ ಕರೆತರಲಾಯಿತು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಶಿವಯೋಗಿಗಳ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.

ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಎ.ಎಸ್.ಪಚ್ಚಪೂರೆ ಮಾತನಾಡಿ, 'ಜಾತ್ರೆಗಳು ಭಾರತೀಯ ಸಂಸ್ಕೃತಿಯು ಅನಾವರಣಗೊಳ್ಳುವ ವೇದಿಕೆಗಳು. ಪ್ರತಿ ವರ್ಷ ಎಲ್ಲೆಡೆ ಜಾತ್ರೆಗಳು ನಡೆಯುತ್ತವೆ. ಅವುಗಳಿಂದ ಜನಸಾಮಾನ್ಯರಲ್ಲಿ ಶಾಂತಿ ನೆಮ್ಮದಿ ಸಿಗುತ್ತದೆ' ಎಂದರು.‌

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯಕ್, 'ಜಾತ್ರೆಗಳು‌ ಜನರಿಗೆ ಮಾರ್ಗದರ್ಶನ ನೀಡುವ ಉತ್ಸವಗಳಾಗಿವೆ. ಕೃಷಿ, ಜಾನಪದ, ಸಾಂಸ್ಕೃತಿಕ‌ ಕಲೆಗಳ ಸಂಗಮವಿದು. ಸುತ್ತೂರು ಜಾತ್ರೆ ಕೇವಲ ಆಟಿಕೆ ಕೊಳ್ಳುವ ಜಾತ್ರೆಯಲ್ಲ. ಜ್ಞಾನ ದಾಸೋಹ ನೀಡುವ ಅರಿವಿನ, ತಿಳಿವಿನ ಜಾತ್ರೆಯಾಗಿದೆ. ಕೃಷಿ ಮೇಳ, ವಸ್ತುಪ್ರದರ್ಶನಗಳನ್ನು ಬೇರೆಲ್ಲೂ‌ ನೋಡಲಾಗದು' ಎಂದು‌ ನುಡಿದರು.

ಇತಿಹಾಸ ತಜ್ಞೆ ವಸುಂಧರಾ ಫಿಲಿಯೋಜಾ, 'ಕನ್ನಡ ನಾಡಿನ ಸಂಸ್ಕೃತಿ‌ ಉಳಿಸಿಕೊಳ್ಳಬೇಕು. ನಮ್ಮ ಭಾಷೆ ಪ್ರಭಾವ ತೆಲುಗು, ತಮಿಳು ಸೇರಿದಂತೆ ದ್ರಾವಿಡ ಭಾಷೆಗಳಲ್ಲದೇ ಕಾಂಬೋಡಿಯಾ ಲಿಪಿ ಮೇಲೂ ಇದೆ' ಎಂದು ಹೇಳಿದರು.

'ವಿಜಯನಗರ‌ ಸಾಮ್ರಾಜ್ಯದ ಮೂಲ ಹೆಸರು ಕರ್ನಾಟಕ ಸಾಮ್ರಾಜ್ಯವಾಗಿದೆ. ಇದು ಕೃಷ್ಣೆಯಿಂದ ಕನ್ಯಾಕುಮಾರಿವರೆಗೂ‌ ಹಬ್ಬಿತ್ತು. ನಮ್ಮ ಭಾಷೆ ಹಿರಿಮೆ ಎಲ್ಲ ನುಡಿಗಳಿಗೂ‌ ಚಾಚಿತ್ತು. ತಮಿಳರೂ ಶಾಸ್ತ್ರೀಯ ಸಂಗೀತಕ್ಕೆ ಕರ್ನಾಟಕ ಸಂಗೀತವೆಂದು ಹೆಸರಿಟ್ಟಿದ್ದಾರೆ. ಕರ್ನಾಟಕ ಸಾಮ್ರಾಜ್ಯವನ್ನು ಕನ್ನಡ ದೇಶವೆಂತಲೂ ಕರೆಯುತ್ತಿದ್ದರು. ನಾಡಿನ ಕೀರ್ತಿಯನ್ನು ಹೆಚ್ಚಿಸಬೇಕು' ಎಂದರು.

ಸಂಸ್ಕೃತ ವಿದ್ವಾಂಸ ಪೆರ್ರಿ ಸೆಲ್ವಿನ್ ಫಿಲಿಯೊಜಾ, 'ಸಂಸ್ಕೃತ, ಶೈವಾಗಮನ ಕಲಿಯಲು 1955ರಲ್ಲಿ ಫ್ರಾನ್ಸ್ ನ ಪ್ಯಾರೀಸ್ ನಿಂದ ಭಾರತಕ್ಕೆ ಬಂದೆ. ದೇಶದ ಶ್ರೇಷ್ಠ ಸಂಸ್ಕೃತಿ ಪರಿಚಯವಾಯಿತು. ಫ್ರಾನ್ಸ್ ನಿಂದ ಕಳೆದ 200 ವರ್ಷದಿಂದ ನೂರಾರು ವಿದ್ವಾಂಸರು ಅಧ್ಯಯನ ನಡೆಸಿದ್ದಾರೆ. ಸಂಸ್ಕೃತ ಮೀಮಾಂಸೆ, ವ್ಯಾಕರಣ, ಶಾಸ್ತ್ರ, ವೇದಾಂತ, ನ್ಯಾಯ ಕಲಿತಿರುವೆ' ಎಂದರು.

'ಜ್ಞಾನದ ಸಮುದ್ರದಲ್ಲಿ ಎಲ್ಲರೂ ಸಮಾನರು. ಸಾಗರಕ್ಕೆ‌ ಕೊನೆಯಿಲ್ಲ. ಎಲ್ಲರೂ ನುಡಿಸಂಸ್ಕೃತಿ, ಹಿರಿಯರು ನೀಡಿರುವ ಅರಿವನ್ನು ಪಡೆದುಕೊಳ್ಳಬೇಕು' ಎಂದು ಸಲಹೆ ನೀಡಿದರು.

ಕನ್ಹೇರಿ ಸಿದ್ಧಗಿರಿ ಸಂಸ್ಥಾನ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ‌ ಮಾತನಾಡಿ, 'ದೇವಾಲಯ, ಮಂದಿರ, ಶ್ರದ್ಧಾಕೇಂದ್ರಗಳು ದೇಶದ ಜನರನ್ನು ಒಗ್ಗೂಡಿಸಿವೆ. ಬ್ರಿಟಿಷರು ಸೇರಿದಂತೆ ವಿದೇಶಿಯರು ಹಲವು ಬಾರಿ ಒಡೆಯಲು ಯತ್ನಿಸಿದರೂ ಅದು ಸದೃಢವಾಗಿರಲು ಶ್ರದ್ಧಾಕೇಂದ್ರಗಳೇ ಕಾರಣ' ಎಂದು ಅಭಿಪ್ರಾಯಪಟ್ಟರು.

'ನಾಡನ್ನು ಒಗ್ಗೂಡಿಸಲು ಜಾತ್ರಾ ಮಹೋತ್ಸವಗಳು ಅಗತ್ಯವಾಗಿವೆ. ದೇವಾಲಯಗಳು, ಹಬ್ಬ- ಜಾತ್ರೆಗಳ‌ ಆಚರಣೆ ಬಗ್ಗೆ ಕೆಲ ವಿದ್ವಾಂಸರು ಹಗುರವಾಗಿ ಮಾತನಾಡುತ್ತಾರೆ‌.‌ ಆದರೆ,

ಧಾರ್ಮಿಕ‌ ಕೇಂದ್ರಗಳಿಂದ ದೇಶ ಗಟ್ಟಿಯಾಗಿದೆ' ಎಂದರು.‌

ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ, ಕವಿ‌ ಕೆ.ಸಿ.ಶಿವಪ್ಪ, ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ‌ ನಿರ್ದೇಶಕ ಸಿ.ಜಿ.ಬೆಟ್ ಸೂರಮಠ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಶಾಸಕ ಆರ್.ಗಣೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT