ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ: ಆನೆ ಗಣತಿಗೆ ಸಕಲ ಸಿದ್ಧತೆ; 300 ಸಿಬ್ಬಂದಿ ಭಾಗಿ

Published 20 ಮೇ 2024, 7:05 IST
Last Updated 20 ಮೇ 2024, 7:05 IST
ಅಕ್ಷರ ಗಾತ್ರ

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಮೇ 23 ರಿಂದ 25 ರವರಗೆ ರಾಷ್ಟ್ರೀಯ ಆನೆ ಗಣತಿ ಕಾರ್ಯಕ್ಕೆ ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.

ದಕ್ಷಿಣ ಭಾರತದ ತಮಿಳುನಾಡು, ಕೇರಳ ಮತ್ತು ರಾಜ್ಯದ ನಾಗರಹೊಳೆ, ಬಂಡಿಪುರ, ಭದ್ರಾ ಅರಣ್ಯದಲ್ಲಿ ಏಕಕಾಲದಲ್ಲಿ ಆನೆ ಗಣತಿ ನಡೆಯಲಿದೆ. ನಾಗರಹೊಳೆಯ 868 ಚದರ ಕಿ.ಮಿ. ವ್ಯಾಪ್ತಿಯ 8 ವಲಯದಲ್ಲಿ ಇಲಾಖೆ ಸಿಬ್ಬಂದಿಯನ್ನು ಕೇಂದ್ರ ಅರಣ್ಯ ಇಲಾಖೆ ಸೂಚನೆ (ಮಾನದಂಡ) ಅನ್ವಯ ಗಣತಿ ಕಾರ್ಯಕ್ಕೆ ನಿಯೋಜಿಸಿದೆ.

ರಾಜ್ಯದಲ್ಲಿ 2010ರಲ್ಲಿ 5,740 ಆನೆಗಳಿದ್ದವು, 2012ರಲ್ಲಿ ಅವುಗಳ ಸಂಖ್ಯೆ 6,072ಕ್ಕೆ ಹೆಚ್ಚಾಯಿತು. 2017ರಲ್ಲಿ 6,049ಕ್ಕೆ ಕುಸಿಯಿತು. 2023ರಲ್ಲಿ 6,395ಕ್ಕೆ ಹೆಚ್ಚಿತು. ರಾಜ್ಯದಲ್ಲಿ 346 ಆನೆಗಳು ಹೆಚ್ಚಾಗಿವೆ.

ಸಿಬ್ಬಂದಿ ನಿಯೋಜನೆ: ‘ವಾರ್ಷಿಕ ಆನೆ ಗಣತಿಗೆ 300ಕ್ಕೂ ಹೆಚ್ಚು ಸಿಬ್ಬಂದಿಗೆ ಸಮಗ್ರ ತರಬೇತಿ ನೀಡಿದ್ದು, ಇವರು ನಾಗರಹೊಳೆ, ಕೊಡಗು ಜಿಲ್ಲೆಯ ಪೊನ್ನಂಪೇಟೆ ಮತ್ತು ವೀರಾಜಪೇಟೆ ಅರಣ್ಯಕ್ಕೆ ಹೊಂದಿಕೊಂಡಿರುವ ಕಾಫಿ ತೋಟದಲ್ಲೂ ಗಣತಿ ನಡೆಸಲಿದೆ’ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ್ ತಿಳಿಸಿದರು.

ತಂಡದಲ್ಲಿ 4 ರಿಂದ 5 ಸಿಬ್ಬಂದಿ ನಿಯೋಜಿಸಿ ಮೂರು ಹಂತದಲ್ಲಿ ಗಣತಿ ನಡೆಸಲಿದ್ದು, ಮೊದಲ ದಿನ ಬ್ಲಾಕ್ ಕೌಂಟಿಂಗ್ ಮಾದರಿಯಲ್ಲಿ ನಡೆಯಲಿದೆ. ಈ ಗಣತಿಯಲ್ಲಿ ಸಿಬ್ಬಂದಿ 5 ಕಿ.ಮಿ. ಕಾಲ್ನಡಿಗೆಯಲ್ಲಿ ತೆರಳಿ ಕಣ್ಣಿಗೆ ಕಾಣಿಸುವ ಆನೆಗಳನ್ನು ಗುರುತಿಸಿ ಇಲಾಖೆ ನಿಗದಿಗೊಳಿಸಿದ ದಾಖಲೆಯಲ್ಲಿ ಸಮಗ್ರ ಮಾಹಿತಿ ದಾಖಲಿಸುವರು. ಎರಡನೇ ದಿನ ‘ಟ್ರಾನ್ಸಾಕ್ಟ್ ಲೈನ್’ ಗಣತಿ ನಡೆಯಲಿದ್ದು, ಇದರಲ್ಲಿ ಪ್ರತಿ ತಂಡಗಳು 2 ಕಿ.ಮಿ. ವ್ಯಾಪ್ತಿಯಲ್ಲಿ ಆನೆ ಕಾರಿಡಾರ್‌ನಲ್ಲಿ ತೆರಳಿ ಆನೆ ಹೆಜ್ಜೆ ಮತ್ತು ಲದ್ದಿಗಳ ಮಾದರಿ ಸಂಗ್ರಹಿಸಿ ದಾಖಲಿಸುವುದು. ಮೂರನೇ ದಿನದಂದು ಅರಣ್ಯದೊಳಗಿನ ಕೆರೆ ಕಟ್ಟೆಗಳಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಕುಳಿತು ಆನೆಗಳ ಸಂಖ್ಯೆ ದಾಖಲಿಸುವ ಮೂಲಕ ಗಣತಿ ಕಾರ್ಯ ಅಂತ್ಯವಾಗಲಿದೆ’ ಎಂದರು.

ಗಣತಿ ಉಪಯೋಗ: ‘ಆನೆ, ಹುಲಿಗಳ ಸಂತತಿ ಸಂಖ್ಯೆ ತಿಳಿಯುವುದರಿಂದ ಮಾನವ ಮತ್ತು ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಬೇಕಾದ ಯೋಜನೆ ರೂಪಿಸಲು ನೆರವಾಗುತ್ತದೆ. ಸಾಂದ್ರತೆ ಹೆಚ್ಚು ಅಥವಾ ಕಡಿಮೆ ತಿಳಿಯುವುದರಿಂದ ಅರಣ್ಯ ಪ್ರದೇಶದ ಅಭಿವೃದ್ಧಿಗೆ ಸಹಕಾರಿ ಆಗಲಿದೆ’ ಎಂದರು.

ನಾಗರಹೊಳೆ ಅರಣ್ಯದಲ್ಲಿ ಕಂಡು ಬಂದ ಆನೆಗಳ ಹಿಂಡು (ಸಂಗ್ರಹ ಚಿತ್ರ)
ನಾಗರಹೊಳೆ ಅರಣ್ಯದಲ್ಲಿ ಕಂಡು ಬಂದ ಆನೆಗಳ ಹಿಂಡು (ಸಂಗ್ರಹ ಚಿತ್ರ)
ನಾಗರಹೊಳೆ ಅರಣ್ಯದಲ್ಲಿ ಕಳೆದ ಸಾಲಿನಲ್ಲಿ ನಡೆದ ಗಣತಿ ಕಾರ್ಯಕ್ರದಲ್ಲಿ ಇಲಾಖೆ ಸಿಬ್ಬಂದಿ ತೊಡಗಿರುವುದು
ನಾಗರಹೊಳೆ ಅರಣ್ಯದಲ್ಲಿ ಕಳೆದ ಸಾಲಿನಲ್ಲಿ ನಡೆದ ಗಣತಿ ಕಾರ್ಯಕ್ರದಲ್ಲಿ ಇಲಾಖೆ ಸಿಬ್ಬಂದಿ ತೊಡಗಿರುವುದು
300ಕ್ಕೂ ಹೆಚ್ಚು ಸಿಬ್ಬಂದಿಗೆ ತರಬೇತಿ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಗಣತಿಕಾರ್ಯ
ದೇಶದಲ್ಲಿ ಕಳೆದ ಸಾಲಿನಲ್ಲಿ ನಡೆದ ಆನೆ ಗಣತಿಯಲ್ಲಿ ಕರ್ನಾಟಕ ಅತಿ ಹೆಚ್ಚು ಆನೆ ಸಂತತಿ ಹೊಂದಿದ ರಾಜ್ಯವಾಗಿದ್ದು. ನಾಗರಹೊಳೆಯಲ್ಲಿ ಅತಿ ಹೆಚ್ಚು ಆನೆ ಇರುವುದು (813) ದಾಖಲಾಗಿದೆ
ಹರ್ಷಕುಮಾರ್ ಚಿಕ್ಕನರಗುಂದ ನಾಗರಹೊಳೆ ಹುಲಿ ಯೋಜನಾ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT