ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಇತಿಹಾಸ ಹೇಳುತಿದೆ ‘ನಾಲಾ ಬಾಗಿಲು’

Published 20 ಡಿಸೆಂಬರ್ 2023, 6:31 IST
Last Updated 20 ಡಿಸೆಂಬರ್ 2023, 6:31 IST
ಅಕ್ಷರ ಗಾತ್ರ

ಮೈಸೂರು: ‘ಕನ್ನಂಬಾಡಿ ಅಣೆಕಟ್ಟೆ ನನಗಿಂತ ಕಿರಿಯಳು. ಅವಳಷ್ಟು ಗಾತ್ರದಲ್ಲಿ ದೊಡ್ಡವಳಲ್ಲ ನಾನು. ಆದರೆ, ಅವಳಿಗಿಂತಲೂ ಮೊದಲು ಮೈಸೂರಿಗೆ ಕುಡಿಯುವ ನೀರು ಕೊಟ್ಟಿದ್ದೇನೆ. ಈಗ ಮೈಸೂರಿನಲ್ಲಿ ಆಟವಾಡುತ್ತಿರುವ ಮಕ್ಕಳಿಗೆ ನಾನು ಯಾರೆಂಬುದು ಗೊತ್ತಿಲ್ಲ. ನನ್ನ ಮೇಲೆ ಕಾಳಜಿಯಿಟ್ಟಿದ್ದ ಅವರ ತಾತ–ಅಜ್ಜಿಯರೆಲ್ಲ ಅಳಿದು ಹೋಗಿದ್ದಾರೆ. ಅವರ ದಾರಿಯಲ್ಲಿ ನಾನೂ ಹೊರಟಿದ್ದೇನೆ...’

ತಾಲ್ಲೂಕಿನ ಸಾಹುಕಾರ್‌ಹುಂಡಿ ಗ್ರಾಮ ವ್ಯಾಪ್ತಿಯಲ್ಲಿ ವಿಸ್ತಾರವಾಗಿ ಹರಡಿರುವ ಮಾದಗಳ್ಳಿ ದೊಡ್ಡಕೆರೆಯಲ್ಲಿ ಪೂರ್ಣಯ್ಯ ನಾಲೆಯ ಸ್ಲ್ಯೂಸ್‌ ಗೇಟ್‌ಗಳು (ತೂಬು) ‘ಅಣೆಕಟ್ಟೆ’ಯ ಗತಕಾಲದ ಕಥೆಯನ್ನು ಹೇಳುತ್ತಿವೆ.

ಕ್ರಿ.ಶ.1878–79ರ ಅವಧಿಯಲ್ಲಿ ಪೂರ್ಣಯ್ಯ ನಾಲೆಗೆ ನಿರ್ಮಿಸಲಾದ ಈ ಕೆರೆಯ ಗೇಟ್‌ಗಳು ನಗರದ ಪಾರಂಪರಿಕ ಕೊಂಡಿಯಾಗಿವೆ. 30 ಅಡಿ ಅಗಲ, 20 ಅಡಿ ಎತ್ತರದ ನಾಲೆಯ ಕ್ರಸ್ಟ್‌ ಗೇಟ್‌ಗಳಲ್ಲಿ ಒಂದು ಈಗಲೂ ಸುಸ್ಥಿತಿಯಲ್ಲಿದೆ. ಮತ್ತೊಂದು ಮುರಿದು ಹೋಗಿದೆ. ಸುರ್ಕಿಗಾರೆಯಲ್ಲಿ ನಿರ್ಮಿಸಲಾದ ಅಣೆಕಟ್ಟು, ಕಬ್ಬಿಣ ಹಾಗೂ ಮರದ ಹಲಗೆಗಳಿಂದ ನಿರ್ಮಿಸಲಾದ ಈ ಗೇಟ್‌ ಅನ್ನು ನಮ್ಮ ಪಾರಂಪರಿಕ ತಾಣವಾಗಿ ರಕ್ಷಿಸಬೇಕಿದೆ.

ಕಟ್ಟೆಯ ಮೇಲೆ ಗಿಡಗಳು ಬೆಳೆದಿದ್ದರೂ ಬಿರುಕು ಮೂಡದಷ್ಟು ಸದೃಢವಾಗಿದ್ದು, ಆಧುನಿಕ ಕಾಲದ ಕಟ್ಟಡದ ರಚನೆಗಳನ್ನು ಅಣಕಿಸುತ್ತದೆ. ಬಳಸಿರುವ ಮರಗಳು ಮಳೆ, ಬಿಸಿಲಿಗೆ ಸವೆದಿದ್ದರೂ ಗೆದ್ದಲು ಹಿಡಿದಿಲ್ಲ. ಕಬ್ಬಿಣವು ತುಕ್ಕು ಹಿಡಿದಿಲ್ಲ. ಕಿರು ಅಣೆಕಟ್ಟೆಯ ಮಧ್ಯೆ ಒಂದು ಅಡಿಯಷ್ಟು ತಿರುಗಾಡಲು ಜಾಗವೂ ಇದೆ. ಕಟ್ಟೆಯ ಸೇತುವೆಯು ಗಟ್ಟಿಯಾಗಿರುವುದು ಆಗಿನ ಕಾಲದ ತಾಂತ್ರಿಕತೆಗೆ ಹಿಡಿದ ಕನ್ನಡಿ. 

ಮಾದಗಳ್ಳಿ ಕೆರೆಯಲ್ಲಿ ಕುಕ್ಕರಹಳ್ಳಿ ಕೆರೆಗಿಂತಲೂ ಜೀವವುಕ್ಕಿಸುವ ಸಸ್ಯರಾಶಿ, ನಡುಗಡ್ಡೆ, ಬಿದಿರಿನ ಮೆಳೆಗಳು, ಸ್ವಚ್ಛ ನೀರು ಒಂದೆಡೆ ಕಣ್ಣು ಕೋರೈಸಿದರೆ, ಮತ್ತೊಂದೆಡೆ ಮೈಸೂರಿನ ಇತಿಹಾಸದ ಮೈಲಿಗಲ್ಲಿನಂತೆ ಕಟ್ಟೆಯು ಕಾಣುತ್ತದೆ. ವೇದಾವತಿಗೆ ನಿರ್ಮಿಸಲಾದ ಮಾರಿಕಣಿವೆ ಜಲಾಶಯಕ್ಕಿಂತಲೂ ಈ ಮಾದಗಳ್ಳಿ ಕೆರೆಯ ಪೂರ್ಣಯ್ಯ ನಾಲೆ ತೂಬಿನ ಬಾಗಿಲು 20 ವರ್ಷ ಹಳೆಯದು. ಕೆರೆ ಹಲವು ಶತಮಾನದಷ್ಟು ಹಳೆಯದೆಂದು ಇಲ್ಲಿನ ಇನ್ನೊಂದು ಭಾಗದಲ್ಲಿರುವ ಕೋಡಿಕಟ್ಟೆಯೂ ಹೇಳುತ್ತದೆ.

ಹುಯಿಲಾಳು ಕೆರೆಯಿಂದ ಬರುವ ಪೂರ್ಣಯ್ಯ ನಾಲೆ ಮಾದಗಳ್ಳಿ ಕೆರೆ ಕೋಡಿ ಕಟ್ಟೆಯ ಜಾಗದಲ್ಲಿ ಸೇರುತ್ತದೆ. ಈಗಲೂ ನೀರು ಹರಿದು ಬರುತ್ತದೆ ಎನ್ನುತ್ತಾರೆ ಸ್ಥಳೀಯರು.

‘ವರ್ಷದ ಹಿಂದೆಯೂ ಚೆನ್ನಾಗಿತ್ತು’

‘ಹುಯಿಲಾಳಿನ ದೊಡ್ಡೇಗೌಡನ ಕಟ್ಟೆಯಿಂದ ಆರಂಭವಾಗುವ ನಾಲೆಗೆ ಮಾದಗಳ್ಳಿ ಕೆರೆಯಲ್ಲಿ ತೂಬುಗಟ್ಟೆಯಿದೆ. ಕಂಚು ಕಬ್ಬಿಣ ಬಳಸಲಾಗಿದೆ. ಹಿತ್ತಾಳೆ ಬಳೆಯನ್ನೆಲ್ಲ ಯಾರೋ ಕದ್ದೊಯ್ದಿದ್ದಾರೆ. ವರ್ಷದ ಹಿಂದಿನವರೆಗೂ ಕಟ್ಟೆಯ ಎರಡೂ ಗೇಟ್‌ಗಳು ಚೆನ್ನಾಗಿದ್ದವು’ ಎಂದು ಸಾಹುಕಾರಹುಂಡಿಯ ರೈತ ಪುಟ್ಟರಾಜನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕುಕ್ಕರಹಳ್ಳಿವರೆಗೂ ನಾಲೆ ಏರಿ ಮೇಲೆ ಹೋಗುತ್ತಿದ್ದೆವು. ಕಾಲುವೆ ಮೇಲೆಯೇ ದನ–ಕುರಿ ಮೇಯಿಸುತ್ತಿದ್ದವು. ಈಗ ರೂಪಾನಗರ ಮರಟಿಕ್ಯಾತನಹಳ್ಳಿ ದಾಸನಕೊಪ್ಪಲು ಎಲ್ಲ ಕಡೆ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಬೋಗಾದಿ ಗಂಗೋತ್ರಿಯಲ್ಲಿ ನಾಲೆ ಕಾಣುವುದೇ ಇಲ್ಲ. ಸರ್ಕಾರಿ ಜಾಗವನ್ನು ಉಳಿಸಿಕೊಳ್ಳಬೇಕು. ಮಳೆಯಾದರೆ ಕೋಡಿ ಬಂದು ನೀರೆಲ್ಲ ಜಮೀನುಗಳಿಗೆ ನುಗ್ಗುತ್ತದೆ’ ಎಂದರು.

ಮಾದಗಳ್ಳಿ ಕೆರೆಯಲ್ಲಿರುವ ಒಂದೂವರೆ ಶತಮಾನದಷ್ಟು ಹಳೆಯದಾದ ಪೂರ್ಣಯ್ಯ ನಾಲೆಯ ತೂಬುಗಟ್ಟೆಯನ್ನು ಪಾರಂಪರಿಕ ತಾಣವಾಗಿ ಉಳಿಸಿಕೊಳ್ಳಬೇಕು
ಯು.ಎನ್‌.ರವಿಕುಮಾರ್‌, ಪರಿಸರ ತಜ್ಞ
ಪೂರ್ಣಯ್ಯ ನಾಲೆಯ ಅಣೆಕಟ್ಟೆ
ಪೂರ್ಣಯ್ಯ ನಾಲೆಯ ಅಣೆಕಟ್ಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT