ಮೈಸೂರು: ತಮ್ಮ ಜನಪರ ಕೆಲಸಗಳ ಮೂಲಕ ಜನಮಾನಸದಲ್ಲಿ ಚಿರಸ್ಥಾಯಿ ಆದವರು ಮೈಸೂರು ಅರಸ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್. ಅವರ ಬದುಕು–ಸಾಧನೆ ಇದೀಗ ರಂಗರೂಪವಾಗಿ ಹೊರಬರುತ್ತಿದೆ.

ನಗರದ ನಾಲ್ವಡಿ ಸೋಷಿಯಲ್, ಕಲ್ಚರಲ್ ಮತ್ತು ಎಜ್ಯುಕೇಷನಲ್ ಟ್ರಸ್ಟ್ ಕೆಲವು ವರ್ಷಗಳಿಂದ ನಾಲ್ವಡಿ ಅವರ ಸಾಧನೆಗಳ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಇದೀಗ ಅವರ ಇತಿಹಾಸವನ್ನು ರಂಗಕ್ಕೆ ತರುತ್ತಿದೆ.

‘ಆಳಿದ ಮಾಸ್ವಾಮಿಗಳು’ ಹೆಸರಿನ ಈ ನಾಟಕವು ಒಂದೂಮುಕ್ಕಾಲು ಗಂಟೆ ಅವಧಿಯದ್ದಾಗಿದ್ದು, ಸಂಗೀತ ಪ್ರಧಾನವಾಗಿದೆ. ಬರೋಬ್ಬರಿ 70ಕ್ಕೂ ಹೆಚ್ಚು ಕಲಾವಿದರು ಬಣ್ಣ ಹಚ್ಚುತ್ತಿದ್ದಾರೆ. ದಸರಾ ಮೆರವಣಿಗೆ, ಕನ್ನಂಬಾಡಿ ಕಟ್ಟೆ ನಿರ್ಮಾಣ, ನಾಲ್ವಡಿ ಅವರ ಅಧಿಕಾರ ಸ್ವೀಕಾರ, ಮೀಸಲಾತಿ ಘೋಷಣೆಯಂತಹ ಐತಿಹಾಸಿಕ ದೃಶ್ಯಗಳು ರಂಗದ ಮೇಲೆ ಬರಲಿವೆ.

‘ನಾಲ್ವಡಿ ಅವರ ಸಾಧನೆಗಳನ್ನು ಓದುವುದೇ ಒಂದು ರೋಮಾಂಚನ. ಅದು ರಂಗದ ಮೇಲೆ ಬಂದರಂತೂ ಇನ್ನೂ ಅದ್ಭುತ. ಅಷ್ಟೇ ಶ್ರಮಪಟ್ಟು ಈ ನಾಟಕ ಕಟ್ಟುತ್ತಿದ್ದೇವೆ. ಮೈಸೂರಿನ ಹವ್ಯಾಸಿ ರಂಗಭೂಮಿಯ ಇತಿಹಾಸದಲ್ಲಿಯೇ ಇದೊಂದು ದೊಡ್ಡ ಮತ್ತು ವಿಶಿಷ್ಟ ಪ್ರಯೋಗ’ ಎನ್ನುತ್ತಾರೆ ನಾಟಕದ ವಿನ್ಯಾಸ ಮತ್ತು ನಿರ್ದೇಶನ ಮಾಡುತ್ತಿರುವ ದಿನೇಶ್ ಚಮ್ಮಾಳಿಗೆ.

‘ಮೈಸೂರು ಭಾಗದ ಜನರು ಬೆಳಗೆದ್ದು ಮೊದಲು ನೆನೆಯಬೇಕಾದದ್ದು ನಾಲ್ವಡಿ ಅವರನ್ನು. ಕನ್ನಂಬಾಡಿ ಕಟ್ಟೆಗೆ ನಿಜವಾಗಿ ಬುನಾದಿ ಹಾಕಿದವರು ಅವರೇ. ಇತಿಹಾಸ ಮರೆಮಾಚಿದ ಹಲವು ಸಂಗತಿಗಳು ಈ ನಾಟಕದ ಮೂಲಕ ಅನಾವರಣಗೊಳ್ಳಲಿವೆ’ ಎನ್ನುತ್ತಾರೆ ಅವರು.

ತಿಂಗಳ ಶ್ರಮ: ನಾಟಕಕ್ಕೆ ಪೂರ್ವಭಾವಿಯಾಗಿ ಕಳೆದೊಂದು ತಿಂಗಳಿಂದ ‘ಅನಿಕೇತನ’ ಹೆಸರಿನ ಶಿಬಿರ ನಡೆಯುತ್ತಿದೆ. ಶಿಬಿರದಲ್ಲಿ 70ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದು, ಇವರಲ್ಲಿ ಬಹುತೇಕರು ಇದೇ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿದ್ದಾರೆ.

ಶಿಬಿರಾರ್ಥಿಗಳಿಗೆ ಮೈಸೂರು ಇತಿಹಾಸ ಮತ್ತು ಪರಂಪರೆಯ ನೈಜ ದರ್ಶನವಾಗಲಿ ಎನ್ನುವ ಕಾರಣಕ್ಕೆ ಒಂದಿಡೀ ದಿನ ಮೈಸೂರು ಅರಮನೆಯ ಆವರಣ, ಅಲ್ಲಿನ ಸಿಂಹಾಸನ, ಕತ್ತಿ–ಗುರಾಣಿ, ರಾಜರು–ಸೈನಿಕ ಪೋಷಾಕು ಗಳನ್ನು ತೋರಿಸಲಾಗಿದೆ. ನಂತರದಲ್ಲಿ ಜಗನ್ಮೋಹನ ಅರಮನೆಗೂ ಭೇಟಿ ನೀಡಿ ಅಲ್ಲಿನ ವಸ್ತು ಸಂಗ್ರಹಾಲಯವನ್ನೂ ವೀಕ್ಷಿಸಿದ್ದಾರೆ. ನಂತರವಷ್ಟೇ ನಾಟಕದ ಅಭ್ಯಾಸ ಆರಂಭಗೊಂಡಿದೆ.

ನಿತ್ಯ ಹತ್ತಕ್ಕೂ ಹೆಚ್ಚು ಕಲಾವಿದರು ನೀನಾಸಂ ಮಧುಸೂದನ್ ನೇತೃತ್ವದಲ್ಲಿ ನಾಟಕಕ್ಕೆ ಬೇಕಾದ ಪರಿಕರಗಳ ತಯಾರಿಯಲ್ಲಿ ತೊಡಗಿದ್ದಾರೆ. ಮೈಸೂರು ಅರಮನೆಯಲ್ಲಿ ಬಳಸುತ್ತಿದ್ದ ಪರಿಕರಗಳು, ಲಾಂಛನ, ಆಯುಧಗಳ ಮಾದರಿಯಲ್ಲೇ ಎಲ್ಲವನ್ನೂ ಸಿದ್ಧಪಡಿಸಲಾಗುತ್ತಿದೆ. ನೂರಕ್ಕೂ ಹೆಚ್ಚು ಮಣಿಸರಗಳನ್ನು ಶಿಬಿರಾರ್ಥಿಗಳೇ ಸಿದ್ಧಪಡಿಸಿದ್ದಾರೆ.

ರಂಗಭೂಮಿ ಜೊತೆಗೆ ಕಿರುತೆರೆ ಯಲ್ಲೂ ಅನುಭವವಿರುವ ರವಿಕಿರಣ್ ಬಳ್ಳಗೆರೆ ಈ ನಾಟಕ ಬರೆದಿದ್ದು, ಗೋವಿಂದಸ್ವಾಮಿ ಗುಂಡಾಪುರ, ಹನಸೋಗೆ ಸೋಮಶೇಖರ್ ಹಾಗೂ ಸೋಸಲೆ ಗಂಗಾಧರ್ ಗೀತೆಗಳನ್ನು ರಚಿಸಿ ರಾಗ ಸಂಯೋಜಿಸಿದ್ದಾರೆ. ಕೃಷ್ಣಕುಮಾರ್ ನಾರ್ಣಕಜೆ ಬೆಳಕಿನ ಸಂಯೋಜನೆ ಮಾಡಿದ್ದು, ಕೃಷ್ಣ ಚೈತನ್ಯ ಹಾಗೂ ಸುನಿಲ್ ನಾಯಕ್ ಸಂಗೀತದ ಸಾಂಗತ್ಯ ಒದಗಿಸಿದ್ದಾರೆ.

ಜೂನ್ 2ರಂದು ಸಂಜೆ 6.30ಕ್ಕೆ ಕಲಾಮಂದಿರ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ನಾಟಕದ ಮೊದಲ ಪ್ರಯೋಗವಿದೆ. ಜೂನ್ 4ರಂದು ಕಲಾಮಂದಿರದಲ್ಲಿ ನಡೆಯಲಿರುವ ನಾಲ್ವಡಿ ಅವರ ಜಯಂತಿ ಕಾರ್ಯಕ್ರಮದಲ್ಲಿಯೂ ನಾಟಕ ಪ್ರದರ್ಶನಗೊಳ್ಳಲಿದೆ.

ಮೈಸೂರು ರಂಗಭೂಮಿ ಇತಿಹಾಸದಲ್ಲೇ ‘ಆಳಿದ ಮಾಸ್ವಾಮಿಗಳು’ ವಿಶಿಷ್ಟ ಪ್ರಯೋಗ. ನಾಲ್ವಡಿ ಬದುಕಿನ ಹಲವು ಸಂಗತಿಗಳನ್ನು ಅನಾವರಣಗೊಳಿಸಲಿದೆ
ದಿನೇಶ್ ಚಮ್ಮಾಳಿಗೆ ನಾಟಕದ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.