ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ರೈಲು ನಿಲ್ದಾಣಕ್ಕೆ 3ನೇ ಪ್ರವೇಶ ದ್ವಾರ

₹ 200 ಕೋಟಿ ಅಂದಾಜು ವೆಚ್ಚ l 10ನೇ ಚಾಮರಾಜ ಒಡೆಯರ್‌ ಪ್ರತಿಮೆ ಸ್ಥಾಪನೆ
Published 28 ಜೂನ್ 2023, 19:05 IST
Last Updated 28 ಜೂನ್ 2023, 19:05 IST
ಅಕ್ಷರ ಗಾತ್ರ

ಮೈಸೂರು: ‘ನಗರದ ಕೇಂದ್ರ ರೈಲು ನಿಲ್ದಾಣದಲ್ಲಿ ₹ 200 ಕೋಟಿ ಅಂದಾಜು ವೆಚ್ಚದಲ್ಲಿ 3ನೇ ಪ್ರವೇಶದ್ವಾರ ನಿರ್ಮಿಸಲು ಯೋಜಿಸಲಾಗಿದೆ’ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.

ಇಲ್ಲಿನ ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ಕಚೇರಿಯಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆ ನಂತರ ಮಾತನಾಡಿದ ಅವರು, ‘ಬೆಂಗಳೂರಿನ ಯಶವಂತಪುರ ಹಾಗೂ ಬೈಯ‍ಪ್ಪನಹಳ್ಳಿ ಮಾದರಿಯಲ್ಲಿ ಪ್ರವೇಶದ ವ್ಯವಸ್ಥೆ ಇರಲಿದೆ. ಮೈಸೂರಿನಲ್ಲಿ ರೈಲ್ವೆ ಜಾಲಕ್ಕೆ ಅಡಿಗಲ್ಲು ಹಾಕಿದ ಚಾಮರಾಜ ಒಡೆಯರ್‌ ಅವರ ಪ್ರತಿಮೆ ಸ್ಥಾಪಿಸಲಾಗುವುದು. ನಿಲ್ದಾಣಕ್ಕೂ ಅವರ ಹೆಸರನ್ನೇ ಇಡಲಾಗುವುದು’ ಎಂದರು.

‘ವಿಮಾನ ನಿಲ್ದಾಣದ ಟರ್ಮಿನಲ್‌ ಮಾದರಿಯಲ್ಲಿ ಶಾಪಿಂಗ್‌ ಮಾಲ್‌, ಕೆಫೆಟೇರಿಯಾ ಹಾಗೂ 60 ಕೊಠಡಿಗಳ ಹೋಟೆಲ್‌ ನಿರ್ಮಿಸಲಾಗುವುದು’ ಎಂದು ತಿಳಿಸಿದರು.

‘ರೈಲ್ವೆ ಸಿಬ್ಬಂದಿ ವಸತಿ ಗೃಹಗಳನ್ನು ತೆರವುಗೊಳಿಸಿ ಮೈಸೂರಿನಲ್ಲಿ 3 ರನ್ನಿಂಗ್‌, 4 ಸ್ಟೇಬಲ್‌, 4 ಪಿಟ್‌ ಲೇನ್‌ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ₹ 483 ಕೋಟಿ ವೆಚ್ಚದಲ್ಲಿ ನಾಗನಹಳ್ಳಿ ಟರ್ಮಿನಲ್‌, ₹ 346 ಕೋಟಿ ಮೈಸೂರು ರೈಲು ನಿಲ್ದಾಣದ ವಿಸ್ತರಣೆಗೆ ಟೆಂಡರ್‌ ಆಗಿದೆ. ಮೂರು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಮಾಹಿತಿ ನೀಡಿದರು.

‘ನವೀಕರಣಗೊಂಡ ಅಶೋಕಪುರಂ ರೈಲು ನಿಲ್ದಾಣವನ್ನು ಆಗಸ್ಟ್ 15ರಂದು ಲೋಕಾರ್ಪಣೆ ಮಾಡಲಾಗುವುದು. ಕಾವೇರಿ, ವಿಶ್ವಮಾನವ, ಚೆನ್ನೈ ಎಕ್ಸ್‌ಪ್ರೆಸ್‌ ರೈಲುಗಳ ಸೇವೆಯೂ ವಿಸ್ತರಣೆಯಾಗಲಿದೆ’ ಎಂದು ಮಾಹಿತಿ ನೀಡಿದರು.

‘ಚೆನ್ನೈ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ಗೆ ನಂದಿ ಎಕ್ಸ್‌ಪ್ರೆಸ್‌ ಹೆಸರಿಡಲು ಪ್ರಸ್ತಾವ ಸಲ್ಲಿಸಲಾಗುವುದು. ಮುಂಬೈ–ಬೆಂಗಳೂರು ಉದ್ಯಾನ್‌ ಎಕ್ಸ್‌ಪ್ರೆಸ್‌ ರೈಲನ್ನು ಮೈಸೂರಿಗೆ ವಿಸ್ತರಿಸಲು ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗುವುದು. ಮೈಸೂರು– ವಾರಣಸಿ ಸೂಪರ್ ಫಾಸ್ಟ್ ರೈಲು ವಾರದಲ್ಲಿ ನಾಲ್ಕು ದಿನ ಬಳಕೆಯಾಗದೇ ಇರುತ್ತದೆ. ಅದನ್ನು ರಾಮೇಶ್ವರಕ್ಕೆ ಸೇವೆ ನೀಡಲು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದರು.

3 ಮೆಮು ರೈಲು: ‘ಹೊಸದಾಗಿ 3 ಮೆಮು ರೈಲುಗಳನ್ನು ತರಲು ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಚಾಮರಾಜನಗರ ರೈಲು ನಿಲ್ದಾಣದಲ್ಲಿ ಮೂಲಸೌಕರ್ಯ ಹೆಚ್ಚಿಸಲು ಕ್ರಮ ವಹಿಸಲಾಗುವುದು. ರೈಲು ವಿಳಂಬವನ್ನು ತಪ್ಪಿಸುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ವಿಭಾಗೀಯ ವ್ಯವಸ್ಥಾಪಕಿ ಶಿಲ್ಪಿ ಅಗರವಾಲ್‌, ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕರಾದ ಇ.ವಿಜಯಾ, ವಿನಾಯಕ್‌ ನಾಯಕ್‌ ಇದ್ದರು.

‘ಕುಶಾಲನಗರ ರೈಲು: ಸೆಪ್ಟೆಂಬರ್‌ಗೆ ಡಿಪಿಆರ್‌ ಸಲ್ಲಿಕೆ’

‘ಬೆಳಗೊಳ–ಕುಶಾಲನಗರ 87 ಕಿ.ಮೀ ರೈಲು ಮಾರ್ಗ ₹ 1854.62 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದ್ದು 1359 ಎಕರೆ ಭೂಮಿ ಖರೀದಿ ಮಾಡಲಾಗುತ್ತಿದೆ’ ಎಂದು ಪ್ರತಾಪ ಸಿಂಹ ಮಾಹಿತಿ ನೀಡಿದರು. ‘ಮಾರ್ಗದಲ್ಲಿ ಇಲವಾಲ ಬಿಳಿಕೆರೆ ಉದ್ಬೂರು ಹುಣಸೂರು ಸತ್ಯಗೊಳ ಪಿರಿಯಾಪಟ್ಟಣ ದೊಡ್ಡಹೊನ್ನೂರು ಕುಶಾಲನಗರದಲ್ಲಿ ನಿಲ್ದಾಣವಿರಲಿದೆ. ಸಮೀಕ್ಷೆ ನಡೆಯುತ್ತಿದ್ದು ವಿಸ್ತೃತ ಯೋಜನಾ ವರದಿಯು (ಡಿಪಿಆರ್) ಸೆಪ್ಟೆಂಬರ್‌ 2023ಕ್ಕೆ ರೈಲ್ವೆ ಮಂಡಳಿಗೆ ಸಲ್ಲಿಕೆಯಾಗಲಿದೆ’ ಎಂದರು.

‘ಮಾರ್ಗ ಬದಲಿಸಲು ನಿರ್ಧಾರ’

‘ಮೈಸೂರು–ಚಾಮರಾಜನಗರ ರೈಲು ಮಾರ್ಗ ವಿದ್ಯುದ್ದೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ವಿಮಾನ ನಿಲ್ದಾಣದ 1.5 ಕಿ.ಮೀ ಮಾತ್ರ ವಿಮಾನಗಳ ಸಿಗ್ನಲ್‌ಗೆ ತೊಂದರೆ ಆಗುವುದರಿಂದ ಅನುಮತಿ ಸಿಗದೆ ಪೂರ್ಣಗೊಂಡಿಲ್ಲ. ಪ್ರತ್ಯೇಕ ಮಾರ್ಗ ಬದಲಿಸಲು ಚಿಂತಿಸಲಾಗಿದೆ’ ಎಂದು ಸಂಸದರು ಹೇಳಿದರು. ‘ಕುಕ್ಕರಹಳ್ಳಿ ಕೆರೆ ಹಾಗೂ ಕ್ರಾಫರ್ಡ್‌ ಹಾಲ್‌ ಬಳಿ ರೈಲ್ವೆ ಅಂಡರ್‌ ಪಾಸ್‌ ಅಥವಾ ಮೇಲ್ಸೇತುವೆ ಮಾಡಲಾಗುವುದು. ಕೆಆರ್‌ಎಸ್‌ ರಸ್ತೆ– ರಿಂಗ್‌ ರಸ್ತೆಯ ಅಂಡರ್‌ಪಾಸ್‌ ಕಾಮಗಾರಿಯನ್ನೂ ಆರಂಭಿಸಲಾಗುವುದು’ ಎಂದರು. ‘ರಿಂಗ್‌ ರಸ್ತೆಗೆ ವಿದ್ಯುತ್‌ ದೀಪ ಅಳವಡಿಸಲು ₹ 6 ಕೋಟಿ ವೆಚ್ಚದಲ್ಲಿ ಕೇಬಲ್‌ ಲೇನ್‌ ಅಳವಡಿಸಲಾಗಿದೆ. ₹ 6 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿಲ್ಲ. ಹೀಗಾಗಿ ಕತ್ತಲಲ್ಲೇ ಇರುವಂತಾಗಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT