ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೇನೆಯ ಆಡಳಿತಾತ್ಮಕ ವಿಷಯದಲ್ಲಿ ಮಧ್ಯಪ್ರವೇಶಿಸಲಾಗದು: ಸುಪ್ರೀಂ ಕೋರ್ಟ್

ತುಕಡಿ ನೇತೃತ್ವ ನೀಡದ್ದನ್ನು ಪ್ರಶ್ನಿಸಿ ಮಹಿಳಾ ಕರ್ನಲ್ ಅರ್ಜಿ
Published : 22 ಸೆಪ್ಟೆಂಬರ್ 2023, 16:31 IST
Last Updated : 22 ಸೆಪ್ಟೆಂಬರ್ 2023, 16:31 IST
ಫಾಲೋ ಮಾಡಿ
Comments

ನವದೆಹಲಿ: ‘ಭಾರತೀಯ ಸೇನೆಯ ಆಡಳಿತಾತ್ಮಕ ವಿಷಯಗಳ ಮೇಲ್ವಿಚಾರಣೆಯನ್ನು ಸುಪ್ರೀಂಕೋರ್ಟ್‌ ನಿಭಾಯಿಸುವುದಿಲ್ಲ. ಕಾನೂನಾತ್ಮಕ ಅಂಶಗಳನ್ನು ಒಳಗೊಂಡ ವಿಷಯಗಳಿದ್ದಲ್ಲಿ ಮಾತ್ರ ಮಧ್ಯಪ್ರವೇಶಿಸಲಿದೆ‘ ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ಹೇಳಿದೆ.

ಸಾಮಾನ್ಯವಾಗಿ ಮೇಜರ್‌ ನೇತೃತ್ವ ವಹಿಸಬಹುದಾದ ಯೋಧರ ತುಕಡಿಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ತಮಗೆ ನೀಡಲಾಗಿದೆ ಎಂದು ದೂರಿ ಮಹಿಳಾ ಕರ್ನಲ್‌ ಒಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ ಈ ಮಾತು ಹೇಳಿದೆ.

ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್‌ ಮಿಶ್ರಾ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.

ಕೇಂದ್ರದ ಪರ ಹಾಜರಿದ್ದ ಅಟಾರ್ನಿ ಜನರಲ್ ಆರ್‌.ವೆಂಕಟರಮಣಿ, ‘ಈ ಪ್ರಕರಣ ಹಲವಾರು ಸಂಗತಿಗಳನ್ನು ಒಳಗೊಂಡಿದೆ. ಹೀಗಾಗಿ ಇದನ್ನು ಸಶಸ್ತ್ರ ಪಡೆಗಳ ನ್ಯಾಯಮಂಡಳಿಗೆ(ಎಎಫ್‌ಟಿ) ವರ್ಗಾಯಿಸಬೇಕು’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲೆ ಮೀನಾಕ್ಷಿ ಅರೋರಾ, ‘ಮಹಿಳೆಯರು 2020ರಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಯಾವುದೇ ಒಬ್ಬ ಮಹಿಳಾ ಅಧಿಕಾರಿಗೆ ಈ ವರೆಗೆ ಬಡ್ತಿ ನೀಡಲಾಗಿಲ್ಲ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

‘ಪ್ರಸ್ತುತ ಪ್ರಕರಣದಲ್ಲಿ, ಮಹಿಳಾ ಅಧಿಕಾರಿಯನ್ನು ಪೂರ್ಣಾವಧಿಗೆ ನೇಮಕ ಮಾಡಲಾಗಿದೆ. ಅವರು ಕರ್ನಲ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಇದು ಅವರಿಗೆ ಮಾಡಲಾದ ಭಾರಿ ಅವಮಾನ‘ ಎಂದೂ ಅರೋರಾ ಹೇಳಿದರು.

‘ಸಾಮಾನ್ಯವಾಗಿ, ನಿರ್ದಿಷ್ಟ ಸಂಖ್ಯೆಯ ಜೂನಿಯರ್‌ ಕಮಿಷನ್ಡ್ ಆಫೀಸರ್ಸ್ (ಜೆಸಿಒ) ಇರುವ ತುಕಡಿಯನ್ನು ಮುನ್ನಡೆಸುವ ಹುದ್ದೆಯಲ್ಲಿ ಕರ್ನಲ್‌ ಇರುತ್ತಾರೆ. ಇತರ ಅಧಿಕಾರಿಗಳು ಅವರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಾರೆ‘ ಎಂದೂ ತಿಳಿಸಿದರು.

‘ಸಂಬಂಧಪಟ್ಟ ಪ್ರಾಧಿಕಾರಗಳು ಇಂತಹ ವಿಷಯಗಳನ್ನು ಪರಿಶೀಲಿಸಬೇಕು’ ಎಂದು ವೆಂಕಟರಮಣಿ ಅವರನ್ನು ಉದ್ದೇಶಿಸಿ ಹೇಳಿದ ನ್ಯಾಯಪೀಠವು, ಪ್ರತಿಕ್ರಿಯೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶನ ನೀಡಿತು.

ಅಲ್ಲದೇ, ತಮ್ಮ ದೂರುಗಳನ್ನು ಒಳಗೊಂಡ ಮನವಿಯನ್ನು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಸೆಪ್ಟೆಂಬರ್‌ 27ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT