ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು-ಕುಶಾಲನಗರ ಹೆದ್ದಾರಿ: ಭೂಸ್ವಾಧೀನ ಪೂರ್ಣಗೊಳಿಸಲು ಸೂಚನೆ

Published 28 ನವೆಂಬರ್ 2023, 16:51 IST
Last Updated 28 ನವೆಂಬರ್ 2023, 16:51 IST
ಅಕ್ಷರ ಗಾತ್ರ

ಮೈಸೂರು: ಮೈಸೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ 275ಗೆ ಅಗತ್ಯವಾದ ಭೂಸ್ವಾಧೀನ ಪ್ರಕ್ರಿಯೆಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭಿಸಬೇಕು ಎಂದು ಸಂಸದ ಪ್ರತಾಪ ಸಿಂಹ ಅಧಿಕಾರಿಗಳಿಗೆ ಸೂಚಿಸಿದರು.

ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿ 275 ಕಾಮಗಾರಿಗೆ ಸಂಬಂಧಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ವಿವಿಧ ಅಧಿಕಾರಿಗಳೊಂದಿಗಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಮೈಸೂರು, ಹುಣಸೂರು, ಪಿರಿಯಾಪಟ್ಟಣ ತಾಲ್ಲೂಕುಗಳನ್ನು ಒಳಗೊಂಡು ಜಿಲ್ಲೆಯಲ್ಲಿ ಒಟ್ಟು 75.9 ಕಿ.ಮೀ. ಉದ್ದಕ್ಕೆ ಈ ಹೆದ್ದಾರಿ ಹಾದುಹೋಗಲಿದೆ. ಒಟ್ಟು 49 ಹಳ್ಳಿಗಳಲ್ಲಿನ 418.8 ಹೆಕ್ಟೇರ್‌ ಭೂಮಿಯನ್ನು ಇದಕ್ಕಾಗಿ ವಶಕ್ಕೆ ಪಡೆಯಲಾಗುತ್ತಿದೆ. ಒಟ್ಟು ₹389.2 ಕೋಟಿ ಭೂಪರಿಹಾರ ಅಂದಾಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮೈಸೂರು ತಾಲ್ಲೂಕಿನಲ್ಲಿ 10 ಹೆಕ್ಟೇರ್, ಹುಣಸೂರಿನಲ್ಲಿ 55 ಹೆಕ್ಟೇರ್, ಪಿರಿಯಾಪಟ್ಟಣದಲ್ಲಿ 34 ಹೆಕ್ಟೇರ್ ಭೂಮಿಯ ಸ್ವಾಧೀನ ಬಾಕಿ ಉಳಿದಿದ್ದು, ಇದನ್ನು ತ್ವರಿತವಾಗಿ ಇತ್ಯರ್ಥಗೊಳಿಸಬೇಕು ಎಂದು ಸೂಚಿಸಿದರು.

ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಎಚ್.ಎನ್. ಶಿವೇಗೌಡ ಮಾತನಾಡಿ ಹುಣಸೂರಿನ ಅಗ್ರಹಾರ, ಕೆಂಪನಹಳ್ಳಿ, ವಡ್ಡರಹಳ್ಳಿ, ನಾಗನಹಳ್ಳಿ, ಕೃಷ್ಣಪುರ ಸೇರಿ ಐದು ಗ್ರಾಮಗಳಲ್ಲಿ ಒಟ್ಟು 34.8 ಹೆಕ್ಟೇರ್ ಪ್ರದೇಶಕ್ಕೆ ಹೆಚ್ಚು ಪರಿಹಾರ ಧನ ಘೋಷಣೆ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರತಾಪ್ ಸಿಂಹ ಪ್ರತಿಕ್ರಿಯಿಸಿ ‘ಗುಂಗ್ರಾಲ್‌ಛತ್ರದಲ್ಲಿ ರಿಯಲ್ ಎಸ್ಟೇಟ್ ಚಟುವಟಿಕೆ ಇದೆ ಎಂದು ಅಲ್ಲಿ ಹೆಚ್ಚು ಹಣ ನೀಡಿ, ಪಕ್ಕದ ದಡದಕಲ್ಲಹಳ್ಳಿ ಕಡಿಮೆ ಹಣ ನಿಗದಿಗೊಳಿಸಲಾಗಿದೆ. ಈ ರೀತಿ ತಾರತಮ್ಯ ಮಾಡುವುದರಿಂದ ಗ್ರಾಮಸ್ಥರಿಂದ ವಿರೋಧ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಒಟ್ಟು ಯೋಜನೆಗೆ ಸಂಬಂಧಿಸಿದಂತೆ 91.74 ಹೆಕ್ಟೇರ್ ಭೂಮಿಗೆ ದಾಖಲೆ ಸಲ್ಲಿಕೆಯಾಗಿಲ್ಲ. 20.59 ಹೆಕ್ಟೇರ್‌ಗೆ ಸಂಬಂಧಿಸಿದ ದಾಖಲೆಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ. ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ 10 ಹಳ್ಳಿಯ 87.98 ಹೆಕ್ಟೇರ್ ಭೂಮಿಗೆ ಸಂಬಂಧಿಸಿದ ಪ್ರಕರಣ ಬಾಕಿ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕೆರೆಗಳನ್ನು ಗುರುತಿಸಲು ಸೂಚನೆ

ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಮಾತನಾಡಿ ಮೈಸೂರು ಜಿಲ್ಲೆಯಲ್ಲಿ ಈ ಹೆದ್ದಾರಿಯ ಆಸುಪಾಸು 5ರಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಬತ್ತಿದ ಕೆರೆಗಳು ಇದ್ದಲ್ಲಿ ಅಲ್ಲಿನ ಹೂಳನ್ನು ಹೆದ್ದಾರಿ ಕಾಮಗಾರಿಗೆ ಬಳಸಿಕೊಳ್ಳಬಹುದಾಗಿದೆ. ಇದರಿಂದ ಕೆರೆಯ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಲಿದ್ದು ಇನ್ನಿತರೆ ನವೀಕರಣ ಕಾಮಗಾರಿಗಳನ್ನು ಹೆದ್ದಾರಿ ಪ್ರಾಧಿಕಾರವೇ ಮಾಡಿಕೊಡಲಿದೆ. ಕಂದಾಯ ಇಲಾಖೆ ಅಧಿಕಾರಿಗಳು ಅಂತಹ ಕೆರೆಗಳನ್ನು ಗುರುತಿಸಿ ಮಾಹಿತಿ ನೀಡಿ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT