ಮೈಸೂರು: ‘ರಾಜ್ಯ ಕಾಂಗ್ರೆಸ್ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ಇಲ್ಲಿನ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದರ್ಶನ ಪಡೆದ ನಂತರ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಈ ಸರ್ಕಾರದ ಹಗರಣಗಳನ್ನು ಮುಚ್ಚಿಕೊಳ್ಳಲು ರಾಜ್ಯದಲ್ಲಿ ಗಲಾಟೆ ಮಾಡಿಸಲಾಗುತ್ತಿದೆ’ ಎಂದು ದೂರಿದರು.
‘ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ. ಒಂದು ಸಮುದಾಯದ ಓಲೈಕೆಗಾಗಿ ಇನ್ನೊಂದು ಸಮುದಾಯವನ್ನು ಕೈ ಬಿಟ್ಟಿದ್ದಾರೆ. ರಾಜ್ಯ ಸರ್ಕಾರ ಯಾವ ರೀತಿ ನಡೆದುಕೊಳ್ಳುತ್ತಿದೆ ಎನ್ನುವುದು ಜನರಿಗೆ ತಿಳಿಯುತ್ತಿದೆ. ಈ ಸರ್ಕಾರ ಹಗರಣದಲ್ಲಿ ನಿರತವಾಗಿದೆ’ ಎಂದು ಕಿಡಿಕಾರಿದರು.
‘ರಾಜ್ಯದಲ್ಲಿ ಮೂರು ಉಪ ಚುನಾವಣೆಗಳು ನಡೆಯುತ್ತವೆ. ಸಂಡೂರು, ಶಿಗ್ಗಾವಿ ಹಾಗೂ ಚನ್ನಪಟ್ಟಣ ಜೊತೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಶೀಘ್ರದಲ್ಲೇ ಬರಲಿವೆ. ಅದಕ್ಕಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಚನ್ನಪಟ್ಟಣದಲ್ಲಿ ಬಿಜೆಪಿಯ ಸಿ.ಪಿ. ಯೋಗೇಶ್ವರ್ ಕೂಡ ಸಭೆಗಳನ್ನು ಮಾಡುತ್ತಿದ್ದಾರೆ. ನಾವೂ ನಮ್ಮ ಕಾರ್ಯಕರ್ತರ ಜೊತೆ ಸಭೆ ನಡೆಸುತ್ತಿದ್ದೇವೆ. ಅಲ್ಲಿ ಎನ್‌ಡಿಎ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ. ನಾನು ನಿಲ್ಲುತ್ತೇನೆಯೋ ಅಥವಾ ಬೇರೆ ಯಾರು ಸ್ಪರ್ಧಿಸುತ್ತಾರೆಯೋ ಎಂಬ ಪ್ರಶ್ನೆ ಇಲ್ಲ. ಇನ್ನೂ ಚುನಾವಣೆ ದಿನಾಂಕ ಪ್ರಕಟ ಆಗಿಲ್ಲ. ಕಾರ್ಯಕರ್ತರ ಭಾವನೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.