ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಆರ್‌ಎಸ್ ಬಳಿ ಪ್ರಾಯೋಗಿಕ ಸ್ಫೋಟ ಬೇಡ: ರೈತ ಸಂಘ

ಅಣೆಕಟ್ಟು, ಜನರ ಹಿತಕ್ಕೆ ವಿರುದ್ಧ ನಡೆದರೆ ಹೋರಾಟ– ರೈತ ಸಂಘ ಎಚ್ಚರಿಕೆ
Published 1 ಜುಲೈ 2024, 16:33 IST
Last Updated 1 ಜುಲೈ 2024, 16:33 IST
ಅಕ್ಷರ ಗಾತ್ರ

ಮೈಸೂರು: ‘ರಾಜ್ಯ ರೈತ ಸಂಘದ ಸತತ ಹೋರಾಟದಿಂದ ಕೆಆರ್‌ಎಸ್ ಅಣೆಕಟ್ಟು ಸುತ್ತಮುತ್ತ ಗಣಿಗಾರಿಕೆ ನಿಷೇಧಿಸಲಾಗಿದೆ. ಈಗ ನ್ಯಾಯಾಲಯ ಆದೇಶಿಸಿದೆ ಎಂಬ ಕಾರಣ ನೀಡಿ ಇಲ್ಲಿ ಗಣಿಗಾರಿಕೆ ಉದ್ದೇಶಕ್ಕಾಗಿ ಪ್ರಾಯೋಗಿಕ ಸ್ಫೋಟ ನಡೆಸಲು ಅಧಿಕಾರಿ ವರ್ಗ ಸಿದ್ಧತೆ ನಡೆಸಿದ್ದು, ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗಣಿಗಾರಿಕೆಗೆ ಲೈಸೆನ್ಸ್‌ ಪಡೆದವರು, ಡ್ಯಾಂ ಸುತ್ತಲೂ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿರುವುದು ವಿರೋಧಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಗಣಿಗಾರಿಕೆ ಬೇಕು, ಬೇಡ ಎಂಬುದಕ್ಕೆ ವೈಜ್ಞಾನಿಕ ಕಾರಣ ಅಗತ್ಯವಿದ್ದು, ಪ್ರಾಯೋಗಿಕ ಸ್ಫೋಟ ನಡೆಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಇಲ್ಲಿ, ತಮಗೆ ಬೇಕಾದಂತೆ ವರದಿ ಪಡೆದು ಗಣಿಗಾರಿಕೆಗೆ ಅವಕಾಶ ದೊರಕಿಸುವ ಹುನ್ನಾರದ ಶಂಕೆಯೂ ಕಾಡುತ್ತಿದೆ’ ಎಂದರು.

‘ಸ್ಫೋಟದಿಂದ ಉಂಟಾಗುವ ಕಂಪನ ಮುಂದೆಂದಾದರೂ ಡ್ಯಾಂಗೆ ಅಪಾಯ ತರಬಹುದು. ಇಂತಹ ಪ್ರಯತ್ನಗಳು ಆತಂಕಕಾರಿ. ಅಣೆಕಟ್ಟು ಸುರಕ್ಷತೆ ಕಾಯ್ದೆ–2021ಯನ್ನೂ ಉಲ್ಲಂಘಿಸುತ್ತದೆ. ಹೈಕೋರ್ಟ್ ಸಹ ಗಣಿಗಾರಿಕೆಗಿಂತ ಜಲಾಶಯ ಮುಖ್ಯ ಎಂದು ಹೇಳಿದೆ. ಆದರೆ, ಅಲ್ಲಿ ಸರ್ಕಾರದಿಂದ ಸಮರ್ಥವಾಗಿ ವಾದ ಮಂಡನೆಯಾಗಿಲ್ಲ. ಜನರ ಅಭಿಪ್ರಾಯವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಕೆಲಸ  ಸರ್ಕಾರ ಮಾಡಬೇಕು. ಗಣಿಗಾರಿಕೆ ಅವಕಾಶ ನೀಡಬಾರದು. ಈ ಬಗ್ಗೆ ಹೋರಾಟ ರೂಪಿಸಲು ಜುಲೈ 2ರಂದು ಬೆಳಿಗ್ಗೆ 11ಕ್ಕೆ ಕೆಆರ್‌ಎಸ್‌ ಎಂಜಿನಿಯರ್‌ ಕಚೇರಿಯಲ್ಲಿ ಸಭೆ ಆಯೋಜಿಸಿದ್ದೇವೆ’ ಎಂದು ತಿಳಿಸಿದರು.

‘ಸರ್ಕಾರ ಜನವಿರೋಧಿ ನೀತಿ ವಿರುದ್ಧ ಚಳವಳಿ ಗಟ್ಟಿಗೊಳಿಸಲು ಜುಲೈ 10ರಂದು ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಕರೆದಿರುವ ಸಭೆಯಲ್ಲಿ ಭಾಗವಹಿಸುತ್ತಿದ್ದೇನೆ. ಇನ್ನು, ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲ್ಲೂಕಿನಲ್ಲಿ ಜುಲೈ 21ರಂದು 45ನೇ ಹುತಾತ್ಮ ದಿನಾಚರಣೆ ನಡೆಯಲಿದ್ದು, ರೈತ ಸಂಘಟನೆ ಬಲಗೊಳಿಸಲು ‘ಮನೆಗೊಬ್ಬ ಸದಸ್ಯ, ಊರಿಗೊಬ್ಬ ಕಾರ್ಯಕರ್ತ’ ಎಂಬ ಅಭಿಯಾನ ಆರಂಭಿಸಲಾಗುವುದು. ಮುಂದಿನ 2 ವರ್ಷದಲ್ಲಿ ಸುಮಾರು 2 ಕೋಟಿ ಸದಸ್ಯರನ್ನು ಹೊಂದುವ ಗುರಿ ಇದೆ’ ಎಂದರು.

ಸಂಘದ ಹೊಸಕೋಟೆ ಬಸವರಾಜು, ಹೊಸೂರು ಕುಮಾರ್, ನಾಗನಹಳ್ಳಿ ವಿಜೇಂದ್ರ, ಪ್ರಸನ್ನ ಎನ್.ಗೌಡ, ಮಂಟಕಳ್ಳಿ ಮಹೇಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT