ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ‘ಪಂಚರತ್ನ’ ಯಾತ್ರೆ ಸಮಾರೋಪ ಇಂದು

ಎಚ್‌.ಡಿ.ದೇವೇಗೌಡ ರೋಡ್‌ ಶೋ: 10 ಲಕ್ಷ ಜನರು ಭಾಗಿ
Last Updated 26 ಮಾರ್ಚ್ 2023, 6:17 IST
ಅಕ್ಷರ ಗಾತ್ರ

ಮೈಸೂರು: ಜೆಡಿಎಸ್‌ನ ಪಂಚರತ್ನ ರಥಯಾತ್ರೆಯ ಸಮಾರೋಪವು ಮಾರ್ಚ್ 26ರ ಭಾನುವಾರ ನಗರದ ಉತ್ತನಹಳ್ಳಿ ರಿಂಗ್‌ ರಸ್ತೆಯ ಜ್ವಾಲಾಮುಖಿ ತ್ರಿಪುರ ದೇಗುಲದ ಮೈದಾನದಲ್ಲಿ ನಡೆಯಲಿದ್ದು, ಶನಿವಾರ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಪರಿಶೀಲನೆ ನಡೆಸಿದರು.

ನಂತರ ಸುದ್ದಿಗಾರರದೊಂದಿಗೆ ಮಾತನಾಡಿ, ‘ಪಕ್ಷದ ಐತಿಹಾಸಿಕ ಸಮಾವೇಶವಾಗಿದ್ದು, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಮಣಿಪಾಲ ಆಸ್ಪತ್ರೆಯ ರಿಂಗ್‌ ರಸ್ತೆಯಿಂದ ಸಮಾವೇಶ ಸ್ಥಳದವರೆಗೆ ರೋಡ್ ಶೋ ನಡೆಸಲಿದ್ದಾರೆ. 10 ಲಕ್ಷ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ’ ಎಂದರು.

‘ಚುನಾವಣಾ ತಯಾರಿಯಷ್ಟೇ ಅಲ್ಲದೇ ಕಾರ್ಯಕರ್ತರ ಪ್ರಚಾರ ಸಭೆಯಾಗಲಿದೆ. 123 ಕ್ಷೇತ್ರ ಗೆದ್ದು, ಬಹುಮತದೊಂದಿಗೆ ಸರ್ಕಾರ ರಚಿಸಲು ಚಾಮುಂಡೇಶ್ವರಿಯ ಆಶೀರ್ವಾದವಿದೆ. ದೇವೇಗೌಡರು ಹಲವು ತಿಂಗಳ ಬಳಿಕ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಸಮಾರೋಪದ ಬಳಿಕ ಪಕ್ಷದ ಅಭ್ಯರ್ಥಿಗಳ ಪಟ್ಟಿ ನಿರ್ಧಾರವಾಗಲಿದೆ’ ಎಂದರು.

‘‍ಯಾವುದೇ ಲೋಪ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಮೈಸೂರಿನಲ್ಲಿ ನಡೆಯುವ ಜೆಡಿಎಸ್ ಹಬ್ಬಕ್ಕೆ ಸ್ಪಂದನೆ ವ್ಯಕ್ತವಾಗಿದೆ. ರಾಜ್ಯದ ಉದ್ದಗಲಕ್ಕೂ ಕಳೆದ ನವೆಂಬರ್‌ನಿಂದ ರಥಯಾತ್ರೆ ಮಾಡಿದ್ದೇನೆ. ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಈ ಸಮಾರೋಪ ಅಷ್ಟೇ ಯಶಸ್ವಿಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಶಾಸಕ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಎಲ್ಲ ಸಿದ್ಧತೆ ನಡೆಸಲಾಗಿದ್ದು, ಸಮಾರೋಪದ ಮೂಲಕ ಜೆಡಿಎಸ್ ಶಕ್ತಿ ಪ್ರದರ್ಶನವಾಗಲಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ ಪಕ್ಷ ಹೆಜ್ಜೆ ಇರಿಸಿದೆ’ ಎಂದರು.

ಸಂಜೆ 4ಕ್ಕೆ ಕಾರ್ಯಕ್ರಮ: ಸಮಾರೋಪವು ಸಂಜೆ 4ಕ್ಕೆ ನಡೆಯಲಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಪಕ್ಷದ ಎಲ್ಲ ಶಾಸಕರು, ಎಲ್ಲ ಅಭ್ಯರ್ಥಿಗಳು ಭಾಗಿಯಾಗಲಿದ್ದಾರೆ. 10 ಲಕ್ಷ ಅಭಿಮಾನಿಗಳಿಗೂ ವಿಶಾಲ ಮೈದಾನದಲ್ಲಿ ಕೂರಲು ಆಸನದ ವ್ಯವಸ್ಥೆ, ಭೋಜನ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಝಗಮಗಿಸುವ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, 100x50 ಅಡಿಯ ವಿಶಾಲ ವೇದಿಕೆ ನಿರ್ಮಾಣವಾಗಿದೆ. ಮೈದಾನದ ಯಾವುದೇ ಭಾಗದಿಂದಲೂ ಕಾರ್ಯಕ್ರಮ ನೋಡಲು ಸಾಧ್ಯವಾಗುವಂತೆ ಬೃಹತ್ ಎಲ್‌ಇಡಿ ಪರದೆಯನ್ನು ಅಳವಡಿಸಲಾಗಿದೆ. ವೇದಿಕೆ ಹಿನ್ನೆಲೆಯಲ್ಲಿ ಡಿಜಿಟಲ್ ಪರದೆಯಿದ್ದು, ಪಂಚರತ್ನ ಕಾರ್ಯಕ್ರಮಗಳ ಮಾಹಿತಿ ದರ್ಶನವಾಗಲಿದೆ. ಮೈದಾನದ ಎಲ್ಲೆಡೆ ಕಟೌಟ್‌ ಹಾಗೂ ಬ್ಯಾನರ್‌ ಅಳವಡಿಸಲಾಗಿದೆ. ರಿಂಗ್‌ ರಸ್ತೆಯ ಅಕ್ಕಪಕ್ಕದಲ್ಲೂ ಸ್ವಾಗತ ಫಲಕಗಳ ಸಾಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT