ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್‌ ಚುನಾವಣೆ ಮೇಲೆ ಪೆನ್‌ಡ್ರೈವ್‌ ಪ್ರಕರಣ ಪರಿಣಾಮ ಬೀರದು–ಸಿಎಂ ಸಿದ್ದರಾಮಯ್ಯ

Published 14 ಮೇ 2024, 8:06 IST
Last Updated 14 ಮೇ 2024, 8:06 IST
ಅಕ್ಷರ ಗಾತ್ರ

ಮೈಸೂರು: ‘ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ವಿಧಾನಪರಿಷತ್ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಜೆಡಿಎಸ್– ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್‌ಗೆ ಯಾವ ತೊಂದರೆಯೂ ಆಗುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ವಿಧಾನಪರಿಷತ್‌ ಚುನಾವಣೆಯಲ್ಲೂ ಕಾಂಗ್ರೆಸ್‌ ಪರವಾದ ವಾತಾವರಣವಿದೆ. ಈ ಬಾರಿ ಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಹೀಗಾಗಿಯೇ 6 ತಿಂಗಳ ಮುಂಚೆಯೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೆವು. ಮತದಾರರನ್ನು ಭೇಟಿಯಾಗಲು ಅವರಿಗೆ ಸಾಕಷ್ಟು ಸಮಯ ಸಿಕ್ಕಿದೆ’ ಎಂದರು.

‘ಪೆನ್‌ಡ್ರೈವ್‌ ಪ್ರಕರಣಕ್ಕೂ ಈ ಚುನಾವಣೆಗೂ ಸಂಬಂಧವಿಲ್ಲ. ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರು ಪ್ರಬುದ್ಧರು. ಯಾರು ಸರಿ, ಯಾರು ಸರಿ ಇಲ್ಲ ಎನ್ನುವುದನ್ನು ನಿರ್ಧರಿಸುತ್ತಾರೆ. 10 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ವೈಫಲ್ಯಗಳೇನು, ನಮ್ಮ ಸರ್ಕಾರದ ಸಾಧನೆ ಏನು ಎಂಬುದನ್ನು ತುಲನೆ ಮಾಡುವ ಶಕ್ತಿ ಅವರಿಗಿದೆ’ ಎಂದು ಹೇಳಿದರು.

‘ಲೋಕಸಭಾ ಚುನಾವಣೆಯಲ್ಲಿ ಬೇರೆ ರಾಜ್ಯಕ್ಕೆ ಪ್ರಚಾರಕ್ಕೆ ಹೋಗುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ವೈಯಕ್ತಿಕವಾಗಿ ನನಗೆ ಇಷ್ಟವಿಲ್ಲ. ಸ್ಟಾರ್ ಪ್ರಚಾರಕ ಆಗಿರುವುದರಿಂದ ಕರೆದಿದ್ದಾರೆ. ನಾನು ಸಾಮಾನ್ಯವಾಗಿ ಪ್ರಚಾರಕ್ಕೆಂದು ಬೇರೆ ರಾಜ್ಯಗಳಿಗೆ ಹೆಚ್ಚಾಗಿ ಹೋಗುವುದಿಲ್ಲ. ಇಲ್ಲಿಯೇ ಬೇರೆ ಕೆಲಸಗಳಿವೆ, ನೋಡೋಣ’ ಎಂದು ಪ್ರತಿಕ್ರಿಯಿಸಿದರು.

‘ಸರ್ಕಾರದ ಭ್ರಷ್ಟಾಚಾರದ ಬಗ್ಗೆ ನನ್ನ ಬಳಿ ಪೆನ್‌ಡ್ರೈವ್ ಇದೆ’ ಎಂಬ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕುಮಾರಸ್ವಾಮಿಯದ್ದು ಯಾವಾಗಲೂ ಹಿಟ್ ಅಂಡ್ ರನ್ ಕೇಸ್. ಅವರ ಬಗ್ಗೆ ಮಾತನಾಡುವುದಿಲ್ಲ’ ಎಂದರು.

‘ನಮ್ಮಲ್ಲಿ ಯಾವುದೇ ಜಗಳವಿಲ್ಲ. ಒಳಗೂ ಇಲ್ಲ; ಹೊರಗೂ ಇಲ್ಲ. ಜಗಳ ಇದ್ದರೆ ತಾನೆ ಸರ್ಕಾರ ಬೀಳುವುದು. ನಮ್ಮಲ್ಲಿ ಜಗಳವಿದ್ದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿತ್ತಾ?’ ಎಂದು ಕೇಳಿದರು.

ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ, ಮಧು ಬಂಗಾರಪ್ಪ,ಆ ಕೆ.ವೆಂಕಟೇಶ್, ಎನ್.ಚಲುವರಾಯಸ್ವಾಮಿ, ಶಾಸಕರಾದ ಡಿ.ರವಿಶಂಕರ್, ಕೆ.ಎಂ. ಶಿವಲಿಂಗೇಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್‌, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಪಕ್ಷದ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್‌ ಪಾಲ್ಗೊಂಡಿದ್ದರು.

ಬದಲಾದ ಪ್ರವಾಸ ಕಾರ್ಯಕ್ರಮ:‌

ಮುಖ್ಯಮಂತ್ರಿ ಪ್ರವಾಸ ಕಾರ್ಯಕ್ರಮ ದಿಢೀರ್‌ ಬದಲಾಗಿದೆ. ದಕ್ಷಿಣ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ನಾಮಪತ್ರ ಸಲ್ಲಿಕೆ ‍ಪ್ರಕ್ರಿಯೆಯಲ್ಲಿ ಮತ್ತು ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವ ಮುಖ್ಯಮಂತ್ರಿ ಬಳಿಕ ನಗರದಲ್ಲೇ ವಾಸ್ತವ್ಯ ಹೂಡಲಿದ್ದಾರೆ ಹಾಗೂ ಬುಧವಾರ (ಮೇ 15) ಕೂಡ ಸ್ಥಳೀಯ ಕಾರ್ಯಕ್ರಮಗಳಲ್ಲಿ ಎಂದು ತಿಳಿಸಲಾಗಿತ್ತು.

ಪರಿಷ್ಕೃತ ಪ್ರವಾಸ ಕಾರ್ಯಕ್ರಮದ ಪ್ರಕಾರ, ಇಂದೇ (ಸಂಜೆ 4ಕ್ಕೆ) ಬೆಂಗಳೂರಿಗೆ ಅವರು ವಾಪಸಾಗಲಿದ್ದಾರೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT