ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

SSLC Exam Tips | ಎಸ್ಸೆಸ್ಸೆಲ್ಸಿ ಪರೀಕ್ಷೆ: ಭಯ ಬಿಡಿ, ಖುಷಿಯಿಂದ ಬನ್ನಿ

‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್‌’ ಆಯೋಜಿಸಿದ್ದ ಫೋನ್‌ಇನ್ ಕಾರ್ಯಕ್ರಮದಲ್ಲಿ ಡಿಡಿಪಿಐ ಪಾಂಡು ಸಲಹೆ
Published 22 ಮಾರ್ಚ್ 2024, 5:21 IST
Last Updated 22 ಮಾರ್ಚ್ 2024, 5:21 IST
ಅಕ್ಷರ ಗಾತ್ರ

ಮೈಸೂರು: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಫೋನ್‌ಇನ್‌ ಕಾರ್ಯಕ್ರಮವು, ವಿದ್ಯಾರ್ಥಿ ಜೀವನದ ಪ್ರಮುಖ ಹಂತವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧವಾಗುತ್ತಿರುವವರಿಗೆ ಧೈರ್ಯ ತುಂಬುವಲ್ಲಿ ಯಶಸ್ವಿಯಾಯಿತು.

ಒಂದು ತಾಸಿಗೂ ಹೆಚ್ಚು ಸಮಯ ನಡೆದ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧೆಡೆಯಿಂದ ವಿದ್ಯಾರ್ಥಿಗಳು ಹಾಗೂ ಕೆಲವು ಪೋಷಕರೂ ಕರೆ ಮಾಡಿದ್ದರು. ಪರೀಕ್ಷೆ ಕುರಿತಾದ ಗೊಂದಲಗಳನ್ನು ಪರಿಹರಿಸಿಕೊಂಡರು.

ಪರೀಕ್ಷೆಯ ವಿಧಾನ ಹೇಗಿರುತ್ತದೆ, ಪೂರ್ವ ಸಿದ್ಧತೆ ಹೇಗಿರಬೇಕು, ಭಯ ನಿವಾರಣೆಗೆ ವಿದ್ಯಾರ್ಥಿಗಳು ಏನು ಮಾಡಬೇಕು, ಹೆಚ್ಚು ಅಂಕ ಗಳಿಕೆಗೆ ಅನುಸರಿಸಬೇಕಾದ ಕೌಶಲಗಳೇನು, ಫಲಿತಾಂಶ ಸುಧಾರಣೆಗೆ ಇಲಾಖೆಯಿಂದ ಕೈಗೊಂಡಿರುವ ಕ್ರಮಗಳೇನು, ಈ ಬಾರಿ ವಿಶೇಷಗಳೇನು ಎಂಬಿತ್ಯಾದಿ ವಿಷಯಗಳ ಕುರಿತು ವಿದ್ಯಾರ್ಥಿಗಳಿಂದ ಕರೆಗಳು ಬಂದವು. ಅವುಗಳಿಗೆ ‘ಕಿವಿ’ಯಾದ ಡಿಡಿಪಿಐ ಎಚ್‌.ಕೆ. ಪಾಂಡು, ಶಿಕ್ಷಣಾಧಿಕಾರಿ ನಿರೂಪ್‌ ವೆಸ್ಲಿ ಮಾರ್ಗದರ್ಶನ ಮಾಡಿದರು. ಆಪ್ತವಾಗಿ ಉತ್ತರ ನೀಡಿ, ಮುಖ್ಯ ಪರೀಕ್ಷೆಗೆ ‘ಶುಭಾಶಯ’ವನ್ನೂ ಕೋರಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ನಂಜನಗೂಡು ತಾಲ್ಲೂಕು ಹೆಮ್ಮರಗಾಲ ಕೆಪಿಎಸ್‌ನ ಎಸ್. ಮಹೇಶ್ (ಕನ್ನಡ), ಇಲವಾಲ ಕೆಪಿಎಸ್‌ನ ಮರಿಯಾ ಸುಮಂಗಲಾ (ಇಂಗ್ಲಿಷ್), ಒಂಟಿಕೊಪ್ಪಲು ಸರ್ಕಾರಿ ಶಾಲೆಯ ವಿಜಿ ಎಸ್. (ಹಿಂದಿ), ಕುವೆಂಪುನಗರ ಕೆಪಿಎಸ್‌ನ ಸುದೀಶ್ (ಗಣಿತ), ದೇವಲಾಪುರ ಸರ್ಕಾರಿ ಪ್ರೌಢಶಾಲೆಯ ಬಸವರಾಜು (ವಿಜ್ಞಾನ) ಹಾಗೂ ಗಂಧನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮಂಜುನಾಥ್‌ (ಸಮಾಜ ವಿಜ್ಞಾನ) ಅನುಭವವನ್ನು ಧಾರೆ ಎರೆದರು. ಪರೀಕ್ಷೆಯಲ್ಲಿ ಯಶಸ್ವಿಯಾಗುವುದು ಹೇಗೆ ಎಂಬ ‘ಟಿಪ್ಸ್‌’ ನೀಡಿ ಬೆನ್ನು ತಟ್ಟಿದರು.

ಗೊಂದಲ, ಆತಂಕ ಬೇಡ: ‘ಯಾವುದೇ ಗೊಂದಲ ಅಥವಾ ಆತಂಕ ಇಟ್ಟುಕೊಳ್ಳದೇ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು. ಆಗ ಉತ್ತಮ ಅಂಕಗಳನ್ನು ಗಳಿಸುತ್ತೀರಿ. ಓದಿದೆಲ್ಲವೂ ಮತ್ತು ಪೂರ್ವ ಪರೀಕ್ಷೆಯಲ್ಲಿ ಬರೆದಿರುವುದೆಲ್ಲವೂ ಸ್ಮೃತಿಪಟಲದಲ್ಲಿ ಇರುತ್ತದೆ. ನಾವು ಖುಷಿಯಾಗಿದ್ದರೆ, ಪ್ರಶ್ನೆಗೆ ತಕ್ಕಂತೆ ಉತ್ತರಗಳು ಬರುತ್ತಾ ಹೋಗುತ್ತವೆ. ಭಯವನ್ನು ಪರೀಕ್ಷಾ ಕೇಂದ್ರಕ್ಕೆ ಒಯ್ಯಬಾರದು’ ಎಂದು ಡಿಡಿಪಿಐ ಪಾಂಡು ಧೈರ್ಯ ತುಂಬಿದರು.

‘ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿರುವ ಮುಖ್ಯ ಪರೀಕ್ಷೆಯಲ್ಲಿ ಇನ್ನೂ ಸುಧಾರಿಸುತ್ತೀರಿ, ಇದರಲ್ಲಿ ಅನುಮಾನವೇ ಬೇಡ. ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಿ’ ಎಂದು ಆತ್ಮವಿಶ್ವಾಸ ಮೂಡಿಸಿದರು.

ಸಣ್ಣ ದನಿಯಲ್ಲಿ ಮಾತನಾಡುತ್ತಿದ್ದ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದರು. ‘ಪೋಷಕರ ಪ್ರೀತಿಯನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆ ಎದುರಿಸಿದರೆ ಉತ್ತಮ ಅಂಕ ಗಳಿಸುತ್ತೀರಿ; ಡಿಸ್ಟಿಂಕ್ಷನ್‌ ಪಡೆಯುತ್ತೀರಿ’ ಎಂದು ವಿಶ್ವಾಸ ಮೂಡಿಸಿದರು.

‘ಗಣಿತದಲ್ಲಿ 9 ಪ್ರಮೇಯ ಚೆನ್ನಾಗಿ ಗೊತ್ತಿದ್ದರೆ ಒಳ್ಳೆಯ ಅಂಕ ಪಡೆಯಬಹುದು. ಯಾವುದೇ ವಿಷಯ ಇರಲಿ ಪಠ್ಯಪುಸ್ತಕವನ್ನು ಓದಬೇಕು. ಓದಿ ಮನನ ಮಾಡಿಕೊಳ್ಳಬೇಕು. ಬರೆದು ಅಭ್ಯಾಸ ಮಾಡಬೇಕು. ಮನೆಯಲ್ಲಿ ಇಷ್ಟವಾದ ಸ್ಥಳದಲ್ಲಿ ಓದಿಕೊಳ್ಳಬೇಕು. ಇಸವಿಗೆ ಸಂಬಂಧಿಸಿದ ಪ್ರಶ್ನೆಗಳು ಹೆಚ್ಚಿರುವುದಿಲ್ಲ. ಅದನ್ನೇ ಚಿಂತಿಸಬಾರದು’ ಎಂದು ಸಲಹೆ ನೀಡಿದರು.

ಸಮಯ ನಿರ್ವಹಣೆಗೆ ಆದ್ಯತೆ ಕೊಡಿ: ‘ಸಮಯ ನಿರ್ವಹಣೆಗೆ ಆದ್ಯತೆ ಕೊಡಬೇಕು. ಒಂದು ಅಂಕ ಪ್ರಶ್ನೆಗೆ ಒಂದೇ ನಿಮಿಷ, 2 ಅಂಕದ ಪ್ರಶ್ನೆಗೆ 3 ನಿಮಿಷ ಹಾಗೂ 4 ಅಂಕಗಳ ಪ್ರಶ್ನೆಗೆ 5 ನಿಮಿಷದಲ್ಲೇ ಉತ್ತರಿಸಬೇಕು. ಆಗ, ಎಲ್ಲ ಪ್ರಶ್ನೆಯನ್ನೂ ಅಟೆಂಡ್ ಮಾಡಬಹುದು. ಸಮಯ ಸಾಲಲಿಲ್ಲವೆಂಬ ಕೊರಗು ಇರುವುದಿಲ್ಲ’ ಎಂದು ತಿಳಿಸಿದರು.

‘ಬೋರ್ಡ್‌ ಎಕ್ಸಾಂ ಎನ್ನುವುದನ್ನು ಮನಸ್ಸಿನಿಂದ ತೆಗೆದು ಹಾಕಬೇಕು. ಭರವಸೆಯಿಂದ ಹೋಗಬೇಕು. ಮರೆತು ಬಿಡುತ್ತೇನೆ ಎಂಬುದನ್ನೂ ಬಿಡಬೇಕು. ಆಹಾರವನ್ನು ಹಿತಮಿತವಾಗಿ ಸೇವಿಸಬೇಕು. ಸಮಯವನ್ನು ಓದಿಗೆ ಮೀಸಲಿಡಬೇಕು. ಯಾವ ಬ್ಲೂಪ್ರಿಂಟ್ ಕೂಡ ಇರುವುದಿಲ್ಲ. ಪಠ್ಯಪುಸ್ತಕವೇ ಎಲ್ಲದಕ್ಕೂ ಮುಖ್ಯ. ಅದನ್ನು ಚೆನ್ನಾಗಿ ಓದಿಕೊಳ್ಳಬೇಕು. ಪ್ರಶ್ನೆಪತ್ರಿಕೆಯನ್ನು ಎಚ್ಚರಿಕೆಯಿಂದ ಓದಿಕೊಂಡು ಉತ್ತರಿಸಲು ಮುಂದಾಗಬೇಕು’ ಎಂದು ಕಿವಿಮಾತು ಹೇಳಿದರು.

ಪ್ರಶ್ನೆ ಕೇಳಿದವರು: ತೇಜಸ್ವಿನಿ, ಯಶಿಕಾ, ಸ್ಫೂರ್ತಿ, ಬಸವರಾಜ್‌, ನಂದಿನಿ, ಐಶ್ವರ್ಯಾ, ರಮ್ಯಾ, ನಿಧಿ, ಶಂಕರಪುರ ಸುರೇಶ್, ಶಂಕರ್, ರಾಘವೇಂದ್ರ, ದೀಪಿಕಾ ಎಂ, ಭಾಗ್ಯಾ, ರಚಿತಾ, ಸೌಜನ್ಯಾ, ರೇವಣಕುಮಾರ್‌ ಎಸ್, ಹಿತೇಶ್‌ ನಂದನ್ ಆರ್, ರಂಗನಾಥ್‌, ಉಮಾ, ಚರಣ್‌ರಾಜ್‌, ಸೌಜನ್ಯಾ ಕುಪ್ಯ, ಪುರುಷೋತ್ತಮ್, ಸಿದ್ದೇಶ್‌, ದೀಪಿಕಾ, ಎಸ್.ಪ್ರಕಾಶ್ ಗೆಜ್ಜಗಳ್ಳಿ, ಮೈತ್ರಿ, ಅಕ್ಷರ, ಅಂಬಿಕಾ, ರಕ್ಷಿತಾ ಮನುಗನಹಳ್ಳಿ, ಹರಿಣಿ, ರಕ್ಷಿತಾ, ಮೋನಿಷಾ, ದೀಕ್ಷಿತಾ, ಲೀಲಾವತಿ, ಚಂದನಾ, ಭವಾನಿ, ತೇಜಸ್ವಿ.

ಎಚ್.ಕೆ. ಪಾಂಡು
ಎಚ್.ಕೆ. ಪಾಂಡು

3 ಬಾರಿ ಪರೀಕ್ಷೆಗಿದೆ ಅವಕಾಶ!

ಈ ಬಾರಿ ಪೂರಕ ಪರೀಕ್ಷೆ ಪರಿಕಲ್ಪನೆ ಇಲ್ಲ. ಪರೀಕ್ಷೆ–1 2 ಹಾಗೂ 3 ಎಂದು ನಡೆಸಲಾಗುತ್ತಿದೆ. ಪರೀಕ್ಷೆ–1ರಲ್ಲಿ ಕಡಿಮೆ ಅಂಕ ಗಳಿಸಿದವರು ಆಸಕ್ತಿ ಇದ್ದರೆ ಮುಂದಿನ ಪರೀಕ್ಷೆ ತೆಗೆದುಕೊಳ್ಳಬಹುದು. ‘ಮತ್ತೆ ಪರೀಕ್ಷೆ ತೆಗೆದುಕೊಂಡಿದ್ದನ್ನು ಅಂಕಪಟ್ಟಿಯಲ್ಲಿ ಅದನ್ನು ಹೇಗೆ ನಮೂದಿಸಲಾಗುತ್ತದೆ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ತೊಂದರೆ ಆಗುತ್ತದೆಯೇ?’ ಎಂಬ ಪೋಷಕರು–ವಿದ್ಯಾರ್ಥಿಗಳ ಆತಂಕವನ್ನೂ ಪಾಂಡು ಹಾಗೂ ನಿರೂಪ್ ವೆಸ್ಲಿ ನಿವಾರಿಸಿದರು. ‘ಅಂಕಪಟ್ಟಿಯಲ್ಲಿ ಯಾವ ಪರೀಕ್ಷೆಯಲ್ಲಿ (1 2 3) ತೇರ್ಗಡೆಯಾದರು ಎಂಬುದನ್ನು ನಮೂದಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗೆ ಏನೂ ತೊಂದರೆಯಾಗದು. ಆಯ್ಕೆಯ ವಿಷಯದ ಪರೀಕ್ಷೆಯನ್ನು 2ನೇ ಹಂತದಲ್ಲಿ ಬರೆಯಬಹುದು. ಎಲ್ಲವನ್ನೂ ತೆಗೆದುಕೊಳ್ಳಬೇಕೆಂದೇನಿಲ್ಲ. ಜೂನ್‌ ವೇಳೆಗೆ ಎಲ್ಲ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಲಾಗುವುದು’ ಎಂದು ತಿಳಿಸಿದರು.

ಉತ್ತಮ ಅಂಕಕ್ಕೆ ಉಪಯುಕ್ತ ಸಲಹೆ

* ಒಂದು ವಿಷಯವನ್ನು ಒಮ್ಮೆಲೆ ಒಂದು ಗಂಟೆ ಕಾಲವಷ್ಟೇ ಓದಿ. ನಂತರದ 15 ನಿಮಿಷ ಕಣ್ಣು ಮುಚ್ಚಿ ಅದನ್ನು ಪುನರ್‌ಮನನ ಮಾಡಿಕೊಳ್ಳಿ. ಓದಿದ್ದರಲ್ಲಿ ಯಾವುದು ನೆನಪಾಗುತ್ತಿಲ್ಲವೋ ಅದನ್ನು ಮಾತ್ರ ಮತ್ತೆ ಓದಿ. ನಂತರ ವಿಷಯ ಬದಲಾಯಿಸಿ.

* ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವೇ ಮುಖ್ಯವಾದುದು. ಅದನ್ನು ಬಿಟ್ಟು ಬೇರೆ ಮೂಲದ ನೋಟ್ಸ್‌ಗಳನ್ನು ಕಡಿಮೆ ಮಾಡಿ. ಆಗ ಮಾತ್ರ 80ಕ್ಕೆ 80 ಅಂಕ ಪಡೆಯಲು ಸಾಧ್ಯ.

* ಪ್ರತಿದಿನ 6–7 ಗಂಟೆ ನಿದ್ರೆ ಮಾಡಿ. ಸಾತ್ವಿಕ ಆಹಾರ ತಾಜಾ ಹಣ್ಣು ಸೇವಿಸಿ.

* ಪರೀಕ್ಷೆ ಸಮಯದಲ್ಲಿ ಆರೋಗ್ಯ ಕೂಡ ಬಹಳ ಮುಖ್ಯ. ಆತ್ಮವಿಶ್ವಾಸದಿಂದಿರಿ. * ಏಪ್ರಿಲ್‌ 6ರವರೆಗೂ ಟಿ.ವಿ ಮೊಬೈಲ್‌ ಫೋನ್‌ನಿಂದ ದೂರವಿರಿ.

* ಪರೀಕ್ಷೆ ಬರೆಯುವಾಗ ಮೊದಲು ಪ್ರಶ್ನೆಯನ್ನು ಸರಿಯಾಗಿ ಓದಿ. ಗೊತ್ತಿರುವುದಕ್ಕೆ ಮೊದಲು ಉತ್ತರಿಸಿ. ಗೊತ್ತಿರದ ಪ್ರಶ್ನೆಗಳಿಗೆ ಸಮಯ ವ್ಯರ್ಥ ಮಾಡಬೇಡಿ.

–ಸಿ. ಮರಿಯಾ ಸುಮಂಗಲಾ ಇಂಗ್ಲಿಷ್‌ ಶಿಕ್ಷಕಿ ಕೆಪಿಎಸ್‌ ಇಲವಾಲ

ಸಂಪನ್ಮೂಲ ವ್ಯಕ್ತಿಗಳು ಹೆಸರು;ವಿಷಯ;ಸಂಪರ್ಕ ಸಂಖ್ಯೆ

ಎಸ್. ಮಹೇಶ್;ಕನ್ನಡ;9743316629

ಎಸ್.ಮಂಜುನಾಥ್;ಸಮಾಜವಿಜ್ಞಾನ;9538279818

ಎಂ.ಬಸವರಾಜು;ವಿಜ್ಞಾನ;8951056200

ಮರಿಯ ಸುಮಂಗಲಾ ಸಿ.;ಇಂಗ್ಲಿಷ್;9980611727

ಸುದೀಶ ಬಿ.ಸಿ.;ಗಣಿತ;9448473130

ವಿಜಿ ಎಸ್.;ಹಿಂದಿ;9448390830

(ಆಸಕ್ತ ವಿದ್ಯಾರ್ಥಿಗಳು ವಿಷಯಕ್ಕೆ ಸಂಬಂಧಿಸಿದ ಮಾಹಿತಿಗಾಗಿ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಮಾತ್ರ ಇವರನ್ನು ಸಂಪರ್ಕಿಸಬಹುದು)

ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳಾಪಟ್ಟಿ ದಿನಾಂಕ;ವಿಷಯ

ಮಾರ್ಚ್‌ 25;(ಪ್ರಥಮ ಭಾಷೆ) ಕನ್ನಡ ಇಂಗ್ಲಿಷ್‌ ತೆಲುಗು ಹಿಂದಿ ಮರಾಠಿ ತಮಿಳು ಉರ್ದು ಸಂಸ್ಕೃತ ಮಾರ್ಚ್‌ 27;ಸಮಾಜ ವಿಜ್ಞಾನ

ಮಾರ್ಚ್‌ 30;ವಿಜ್ಞಾನ ರಾಜ್ಯಶಾಸ್ತ್ರ ಹಿಂದೂಸ್ಥಾನಿ ಸಂಗೀತ ಕರ್ನಾಟಕ ಸಂಗೀತ

ಏ.2;ಗಣಿತ ಸಮಾಜ ಶಾಸ್ತ್ರ

ಏ.3;ಅರ್ಥಶಾಸ್ತ್ರ

ಏ.4;(ತೃತೀಯ ಭಾಷೆ) ಹಿಂದಿ ಕನ್ನಡ ಇಂಗ್ಲಿಷ್‌ ಅರೇಬಿಕ್‌ ಪರ್ಷಿಯನ್‌ ಉರ್ದು ಸಂಸ್ಕೃತ ತುಳು ಕೊಂಕಣಿ ಏ.6;(ದ್ವಿತೀಯ ಭಾಷೆ) ಇಂಗ್ಲಿಷ್‌ ಕನ್ನಡ

(ಸಮಯ: ಬೆಳಿಗ್ಗೆ 10.15ರಿಂದ)

ನೋಂದಾಯಿಸಿದ ವಿದ್ಯಾರ್ಥಿಗಳು 38563

ರೆಗ್ಯುಲರ್ 1770

ಖಾಸಗಿ ಪುನರಾವರ್ತಿತ 40333

ಒಟ್ಟು 132

ಜಿಲ್ಲೆಯ ಪರೀಕ್ಷಾ ಕೇಂದ್ರ 683 ಜಿಲ್ಲೆಯ ಒಟ್ಟು ಪ್ರೌಢಶಾಲೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT