ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

26ರಂದು ಕಾಂಗ್ರೆಸ್‌ಗೆ ಶಿಕ್ಷೆ ಕೊಡಿ: ಮೈಸೂರಲ್ಲಿ ಮೋದಿ

ಮೈಸೂರಿನಲ್ಲಿ ಪ್ರಧಾನಿ ಚುನಾವಣೆ ರಣಕಹಳೆ; ರಾಜ್ಯದ ಜನರಿಗೆ ಕರೆ
ಕೆ. ನರಸಿಂಹಮೂರ್ತಿ
Published 14 ಏಪ್ರಿಲ್ 2024, 20:31 IST
Last Updated 14 ಏಪ್ರಿಲ್ 2024, 20:31 IST
ಅಕ್ಷರ ಗಾತ್ರ

ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ಗಟ್ಟಿ ಬಾಂಧವ್ಯವನ್ನು ಪ್ರತಿಪಾದಿಸಿದ ಪ್ರಧಾನಿ ನರೇಂದ್ರ ಮೋದಿ, ‘ದೇಶ ಒಡೆಯುವ ದುರುದ್ದೇಶದಿಂದ ತುಕ್ಡೆ ಗ್ಯಾಂಗ್‌ನೊಂದಿಗೆ ಅಲೆದಾಡುತ್ತಿರುವ ಕಾಂಗ್ರೆಸ್‌ಗೆ ಏಪ್ರಿಲ್ 26ರಂದು ಶಿಕ್ಷೆ ಕೊಡಿ’ ಎನ್ನುವ ಮೂಲಕ ರಾಜ್ಯದಲ್ಲಿ ಲೋಕಸಭೆ ಚುನಾವಣಾ ಪ್ರಚಾರಕ್ಕೆ ಚಾಲನೆ ಕೊಟ್ಟರು.  ‘ರಾಜ್ಯದ ಮನೆ ಮನೆಗೂ ಹೋಗಿ ನನ್ನ ಬಗ್ಗೆ ಹೇಳಿ’ ಎಂಬ ಮನವಿಯನ್ನೂ ಮಾಡಿದರು.

ಮೈತ್ರಿ ಪಕ್ಷಗಳು ಏರ್ಪಡಿಸಿದ್ದ ‘ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶ’ದಲ್ಲಿ ಬಿರುಬಿಸಿಲನ್ನೂ ಲೆಕ್ಕಿಸದೆ ಪಾಲ್ಗೊಂಡಿದ್ದ ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು, ಭಾಷಣದ ನಡುವೆಯೇ, ‘ಮತ್ತೊಮ್ಮೆ ಮೋದಿ ಸರ್ಕಾರ’ ಎಂದು ಪದೇ ಪದೇ ಘೋಷಣೆ ಕೂಗಿ ಪ್ರಧಾನಿಗೆ ಬೆಂಬಲ ಸೂಚಿಸಿದರು. 28 ನಿಮಿಷಗಳ ತಮ್ಮ ಭಾಷಣದುದ್ದಕ್ಕೂ ಪ್ರಧಾನಿಯು ಹತ್ತು ವರ್ಷಗಳ ತಮ್ಮ ಸರ್ಕಾರದ ಸಾಧನೆಯನ್ನು ಹೇಳುತ್ತಲೇ, ಕಾಂಗ್ರೆಸ್‌ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ತವರಿನಲ್ಲೇ ಸಮಾವೇಶ ನಡೆದರೂ, ಎಲ್ಲಿಯೂ ಅವರ ಹೆಸರನ್ನು ಉಲ್ಲೇಖಿಸಲಿಲ್ಲ.

‘ಕೇಂದ್ರ ಸರ್ಕಾರದ ಯೋಜನೆಗಳಿಂದ ರಾಜ್ಯದ ಜನರಿಗೆ ಹಲವು ಅನುಕೂಲಗಳಾಗಿವೆ’ ಎಂದು ಹೇಳುತ್ತಲೇ, ‘ರಾಜ್ಯದ ಕಾಂಗ್ರೆಸ್‌ ಸರ್ಕಾರದ ಖಜಾನೆ ಖಾಲಿಯಾಗಿದೆ. ‌ಪಂಪ್‌ಸೆಟ್‌ ಸ್ಟಾರ್ಟ್‌ ಮಾಡಲು ಕೂಡ ರೈತರಿಗೆ ವಿದ್ಯುತ್‌ ಕೊಡುತ್ತಿಲ್ಲ. ಐಟಿ ಹಬ್‌ ಎಂದೇ ಖ್ಯಾತವಾದ ಬೆಂಗಳೂರು ನೀರಿನ ಅಭಾವದಲ್ಲಿ ನರಳುತ್ತಿದೆ. ಅಭಿವೃದ್ಧಿ ಯೋಜನೆಗಳು ಕುಂಟುತ್ತಿವೆ. ರಾಜ್ಯದ ನೂರಾರು ಕೋಟಿ ಕಪ್ಪು ಹಣವನ್ನು ಇಡೀ ದೇಶಕ್ಕೆ ಹಂಚಲಾಗುತ್ತಿದೆ’ ಎಂದು ಆರೋಪಿಸಿದರು.

‘ಈ ಚುನಾವಣೆಯು ಕೇವಲ ಐದು ವರ್ಷದ್ದಲ್ಲ. 2047ರ ಹೊತ್ತಿನ ವಿಕಸಿತ ಭಾರತದ ಭವಿಷ್ಯವನ್ನು ನಿರ್ಧರಿಸುವಂಥದ್ದು. ಅದಕ್ಕಾಗಿ ಪ್ರತಿ ಕ್ಷಣವನ್ನೂ ಮೀಸಲಿಟ್ಟಿದ್ದೇನೆ. 2047ರವರೆಗೂ ದೇಶ ಮತ್ತು ಜನರಿಗಾಗಿ 24X7 ಕೆಲಸ ಮಾಡುತ್ತೇನೆ’ ಎಂದಾಗ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ತಮ್ಮ ಪಕ್ಕದಲ್ಲಿ ಕುಳಿತಿದ್ದ ಪ್ರಧಾನಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೆಸರು ಹೇಳದೆಯೇ, ರಾಜ್ಯದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

‘91ನೇ ವಯಸ್ಸಿನಲ್ಲಿ ದೇವೇಗೌಡರು ಬಿಜೆಪಿ ಜೊತೆ ಹೋಗುವುದು ಎಂತಹಾ ದುರ್ದೈವವೆಂದು ಕೆಲವರು ಹೇಳಿದ್ದಾರೆ. ತಲೆಯಲ್ಲಿ ಬುದ್ಧಿ ಇಲ್ಲದೆಯೇ ಕುಮಾರಸ್ವಾಮಿಯನ್ನು ಮೋದಿ ಜೊತೆ ಹೋಗೆಂದು ಹೇಳಿಲ್ಲ. ರಾಜ್ಯವನ್ನು ಸೂರೆ ಮಾಡುತ್ತಿರುವುದನ್ನು ತಪ್ಪಿಸಲು ಹೋಗೆಂದೆ’ ಎಂದು ಬಿಜೆಪಿ ಜೊತೆಗಿನ ಮೈತ್ರಿಯನ್ನು ಬಲವಾಗಿ ಸಮರ್ಥಿಸಿಕೊಂಡರು.

ಈ ಸನ್ನಿವೇಶಕ್ಕೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ, ಮೈತ್ರಿ ಅಭ್ಯರ್ಥಿಗಳಾದ ಮೈಸೂರಿನ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಮಂಡ್ಯದ ಎಚ್‌.ಡಿ.ಕುಮಾರಸ್ವಾಮಿ, ಹಾಸನದ ಪ್ರಜ್ವಲ್‌ ರೇವಣ್ಣ, ಚಾಮರಾಜನಗರದ ಎಸ್‌.ಬಾಲರಾಜು ಅಲ್ಲದೆ  ಬಿಜೆಪಿಯ ಸಂಸದರು, ಶಾಸಕರು, ಮಾಜಿ ಸಂಸದರು, ಶಾಸಕರು ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯರೆಲ್ಲರೂ ಸಾಕ್ಷಿಯಾದರು. ಸಭೆಯ ಕೊನೆಗೆ ಎಲ್ಲರೂ ಪರಸ್ಪರ ಕೈಹಿಡಿದೆತ್ತಿ ಒಗ್ಗಟ್ಟು ಪ್ರದರ್ಶಿಸಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಬಿಜೆಪಿ–ಜೆಡಿಎಸ್‌ ಏರ್ಪಡಿಸಿದ್ದ ‘ವಿಜಯ ಸಂಕಲ್ಪ ಸಮಾವೇಶ’ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆರ್‌.ಅಶೋಕ್‌ ಎಸ್‌.ಬಾಲರಾಜ್‌ ಬಿ.ಎಸ್‌.ಯಡಿಯೂರಪ್ಪ ಎಚ್‌.ಡಿ.ಕುಮಾರಸ್ವಾಮಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಎಚ್‌.ಡಿ.ದೇವೇಗೌಡ ಪ್ರಜ್ವಲ್‌ ರೇವಣ್ಣ ಒಗ್ಗಟ್ಟು ಪ್ರದರ್ಶಿಸಿದರು.
–ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಬಿಜೆಪಿ–ಜೆಡಿಎಸ್‌ ಏರ್ಪಡಿಸಿದ್ದ ‘ವಿಜಯ ಸಂಕಲ್ಪ ಸಮಾವೇಶ’ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆರ್‌.ಅಶೋಕ್‌ ಎಸ್‌.ಬಾಲರಾಜ್‌ ಬಿ.ಎಸ್‌.ಯಡಿಯೂರಪ್ಪ ಎಚ್‌.ಡಿ.ಕುಮಾರಸ್ವಾಮಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಎಚ್‌.ಡಿ.ದೇವೇಗೌಡ ಪ್ರಜ್ವಲ್‌ ರೇವಣ್ಣ ಒಗ್ಗಟ್ಟು ಪ್ರದರ್ಶಿಸಿದರು. –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಬಿಜೆಪಿ–ಜೆಡಿಎಸ್‌ ಏರ್ಪಡಿಸಿದ್ದ ‘ವಿಜಯ ಸಂಕಲ್ಪ ಸಮಾವೇಶ’ದಲ್ಲಿ ಪಾಲ್ಗೊಂಡ ಕಾರ್ಯಕರ್ತರು ಪ್ರಧಾನಿ ಮೋದಿ ಅವರಿಗೆ ಜೈಕಾರ ಕೂಗಿದರು.
ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಬಿಜೆಪಿ–ಜೆಡಿಎಸ್‌ ಏರ್ಪಡಿಸಿದ್ದ ‘ವಿಜಯ ಸಂಕಲ್ಪ ಸಮಾವೇಶ’ದಲ್ಲಿ ಪಾಲ್ಗೊಂಡ ಕಾರ್ಯಕರ್ತರು ಪ್ರಧಾನಿ ಮೋದಿ ಅವರಿಗೆ ಜೈಕಾರ ಕೂಗಿದರು. ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಬಿಜೆಪಿ–ಜೆಡಿಎಸ್‌ ಏರ್ಪಡಿಸಿದ್ದ ‘ವಿಜಯ ಸಂಕಲ್ಪ ಸಮಾವೇಶ’ದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು
ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಬಿಜೆಪಿ–ಜೆಡಿಎಸ್‌ ಏರ್ಪಡಿಸಿದ್ದ ‘ವಿಜಯ ಸಂಕಲ್ಪ ಸಮಾವೇಶ’ದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

‘ಭಾರತಮಾತೆಗೆ ಜೈ ಎನ್ನದ ಕಾಂಗ್ರೆಸ್‌ ಆಯ್ಕೆ ಮಾಡ್ತೀರಾ?’

ಮೈಸೂರು: ‘ಭಾರತ ಮಾತೆಗೆ ಜೈಕಾರ ಕೂಗಲು ಕೂಡ ಕಾಂಗ್ರೆಸ್‌ ಪಕ್ಷದಲ್ಲಿ ಅನುಮತಿ ಪಡೆಯಬೇಕಾದ ಪರಿಸ್ಥಿತಿ ಇದೆ. ಇಂಥ ಪಕ್ಷವನ್ನು ‌ಆಯ್ಕೆ ಮಾಡುತ್ತೀರಾ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದರು. ‘ಕಾಂಗ್ರೆಸ್‌ ಮೊದಲು ವಂದೇ ಮಾತರಂ ಗೀತೆಗೆ ವಿರೋಧ ವ್ಯಕ್ತಪಡಿಸಿತ್ತು. ಈಗ ಅಲ್ಲಿ ಭಾರತ ಮಾತೆಗೆ ಜೈಕಾರ ಹಾಕಲೂ ಕಷ್ಟವಿದೆ. ಇದು ಕಾಂಗ್ರೆಸ್‌ ಪತನದ ಪರಾಕಾಷ್ಠೆ’ ಎಂದು ಬಣ್ಣಿಸಿದರು. ‘ಇಡೀ ವಿಶ್ವದಲ್ಲಿ ದೇಶದ ಘನತೆ ಹೆಚ್ಚಿದೆ. ಆದರೆ ಕಾಂಗ್ರೆಸ್‌ ನಾಯಕರು ವಿದೇಶಗಳಿಗೆ ಹೋದಾಗ ಅದನ್ನು ಕುಗ್ಗಿಸುವ ಅವಕಾಶಗಳನ್ನು ಹುಡುಕುತ್ತಿರುತ್ತಾರೆ. ನಮ್ಮ ಸೇನೆ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ಗೆ ಸಾಕ್ಷಿ ಕೇಳುತ್ತಾರೆ. ರಾಜ್ಯದಲ್ಲಿ ತುಷ್ಟೀಕರಣದ ಆಟ ನಡೆಯುತ್ತಿದೆ’ ಎಂದು ದೂರಿದರು. ‘ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ಬಾರದೆ ಕಾಂಗ್ರೆಸ್‌ನವರು ಬಹಿಷ್ಕರಿಸಿದರು. ಮಂದಿರಕ್ಕಾಗಿ ಇಡೀ ದೇಶವೇ ಒಂದಾದರೂ ನಮ್ಮ ಶ್ರದ್ಧೆಯನ್ನು ಅವಮಾನಿಸಿದರು. ಆದರೆ ಈ ಮೋದಿಗೆ ನಿಮ್ಮ ಆಶೀರ್ವಾದವಿರುವವರೆಗೂ ಕಾಂಗ್ರೆಸ್‌ನ ದ್ವೇಷದ ಶಕ್ತಿಗೆ ಗೆಲುವು ಸಿಗುವುದಿಲ್ಲ. ಇದು ಮೋದಿ ಗ್ಯಾರಂಟಿ. ನಿಮ್ಮ ಒಂದು ಮತ ನನ್ನ ಗ್ಯಾರಂಟಿ ಶಕ್ತಿಯನ್ನು ಹೆಚ್ಚಿಸುತ್ತದೆ’ ಎಂದರು. ‘ಹತ್ತು ವರ್ಷಗಳ ಹಿಂದಿನ ಭಾರತವನ್ನು ನೆನೆದರೆ ಈಗ ನಾವು ಬಹಳ ಮುಂದೆ ಬಂದಿದ್ದೇವೆ. ಭವಿಷ್ಯದಲ್ಲಿ ಮಹಾನ್‌ ಬದಲಾವಣೆಗಳಾಗಲಿವೆ. ತಂತ್ರಜ್ಞಾನಗಳಿಗಾಗಿ ಬೇರೆ ದೇಶಗಳ ಕಡೆ ನೋಡುತ್ತಿದ್ದ ಭಾರತ ಚಂದ್ರಯಾನ ನಡೆಸಿದೆ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮಾದರಿಯಾಗಲಿದೆ. ಪ್ರವಾಸೋದ್ಯಮ ಮತ್ತು ಉದ್ಯೋಗ ಕ್ಷೇತ್ರದಲ್ಲಿ ರಾಜ್ಯದಲ್ಲಿ ಹೊಸ ಕಾಲ ಬರಲಿದೆ’ ಎಂದರು. ‘ಮೋದಿ ಗ್ಯಾರಂಟಿಯಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಮೈಸೂರು ಹಂಪಿ ಬಾದಾಮಿಯಂಥ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸಲಾಗುವುದು’ ಎಂದರು.

‘ಆ ಇಬ್ಬರಿಗೂ ನಮೋ ನಮಃ’

ಮೈಸೂರು: ‘₹ 2 ಸಾವಿರ ಕೊಡುತ್ತೇವೆಂದು ಇಬ್ಬರು ಮಹಾನುಭಾವರು 136 ಸ್ಥಾನ ಗೆದ್ದರು. ಈಗ ರಾಜ್ಯ ಹೇಗೆ ನಡೆಯುತ್ತಿದೆ ಎಂಬುದು ಗೊತ್ತಿದೆ. ಆ ಇಬ್ಬರಿಗೂ ನಮೋ ನಮಃ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು. ‘ಮಧ್ಯಪ್ರದೇಶ ರಾಜಸ್ಥಾನ ಛತ್ತೀಸ್‌ಗಢದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಆ ಮಹನೀಯರು ರಾಜ್ಯದ ಸಂಪತ್ತನ್ನು ಬೆಂಗಳೂರಿನ ಬಿಡಿಎ ಪಾಲಿಕೆ ನೀರಾವರಿ ಹಣವನ್ನು ಬಾಚಿ ಬಾಚಿ ನೀಡಿದ್ದಾರೆ’ ಎಂದು ಬಾಚಿಕೊಳ್ಳುವ ರೀತಿಯಲ್ಲಿ ಅಭಿನಯಿಸಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಹೆಸರು ಪ್ರಸ್ತಾಪಿಸದೇ ಹರಿಹಾಯ್ದರು. ‘ಕೇವಲ 6 ಕೋಟಿ ಜನತೆಯ ಮುಖ್ಯಮಂತ್ರಿ 150 ಕೋಟಿ ಜನತೆಯ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ನಮಗೆ ಸಿಕ್ಕಿರುವುದು ಕೇವಲ 3 ಕ್ಷೇತ್ರವಲ್ಲ. ಎನ್‌ಡಿಎ ಗೆಲ್ಲುವ 400 ಕ್ಷೇತ್ರಗಳಲ್ಲಿ 24 ಕ್ಷೇತ್ರವು ರಾಜ್ಯದ್ದಾಗಿರಬೇಕು. ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಬೇಕು. ಯಡಿಯೂರಪ್ಪನವರೇ ಇಳಿ ವಯಸ್ಸಿನಲ್ಲಿ ತುಮಕೂರು ರಾಯಚೂರು ವಿಜಯಪುರ ಸೇರಿದಂತೆ ಎಲ್ಲಿಗೆ ಕರೆದರೂ ಬರುತ್ತೇನೆ. ನಮ್ಮ ಜವಾಬ್ದಾರಿಯ ಕೆಲಸವನ್ನು ಮಾಡೋಣ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT