ಮೈಸೂರು: ‘ಮಹಿಷ ದಸರಾ ವಿರೋಧಿಸುವವರನ್ನು ನಾನು ಒಪ್ಪುವುದಿಲ್ಲ’ ಎಂದು ಕವಿ ಮೂಡ್ನಾಕೂಡು ಚಿನ್ನಸ್ವಾಮಿ ತಿಳಿಸಿದರು.
ದಸರಾ ಅಂಗವಾಗಿ ನಗರದ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಪ್ರಧಾನ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಮಹಿಷ ದಸರೆ ಆಚರಣೆಯನ್ನು ವಿರೋಧಿಸಬಾರದು. ಏಕೆಂದರೆ, ಇತಿಹಾಸವು ಯಾವ ದೇಶದಲ್ಲೇ ಆಗಲಿ ಇದಂಮಿತ್ತಂ ಅಂತ ಉಳಿದಿಲ್ಲ. ಒಂದು ಪಂಗಡದವರು ಹೇಳುವ ರಾಕ್ಷಸ ಕಲ್ಪನೆಯೇ ಸುಳ್ಳು. ಯಾರದ್ದೋ ಸ್ವಾರ್ಥಕ್ಕಾಗಿ ಎಲ್ಲ ದೇವತೆಗಳೂ ರಾಕ್ಷಸರನ್ನು ಸುಟ್ಟು ಕೊಂದಿದ್ದಾರೆ. ಮಹಿಷಾಸುರ ಒಬ್ಬರ ದೃಷ್ಟಿಯಲ್ಲಿ ಖಳನಾಯಕ. ಸಂಶೋಧನೆಯಿಂದ ತಿಳಿದುಬಂದಿರುವ ಪ್ರಕಾರ ಅವನೊಬ್ಬ ಬೌದ್ಧ ಬಿಕ್ಕು ಎನ್ನುವುದು ಇನ್ನೊಂದು ತಂಡದವರು ಹೇಳುವ ಮಾತು. ಅದನ್ನು ನಂಬುವವರನ್ನು ವಿರೋಧಿಸಬೇಕೇಕೆ?’ ಎಂದು ಕೇಳಿದರು.
‘ಸಮಾಜ ಇಂದು ಎರಡು ಪಂಥಗಳಾಗಿ ಹೋಳಾಗಿದೆ. ಮೇಲಾಟದಲ್ಲಿ ತೊಡಗಿರುವುದರಿಂದಾಗಿ ಸತತವಾದ ಸಂಘರ್ಷ ಏರ್ಪಡುತ್ತಿದೆ. ಎಲ್ಲರೂ ಮನುಷ್ಯ ಪರವಾಗಿ ಯೋಚಿಸಿದರೆ ಸಂಘರ್ಷವನ್ನು ತಗ್ಗಿಸಬಹುದಾಗಿದೆ. ಯಾರೂ ಸುರರಲ್ಲ; ಯಾರೂ ಅಸುರರಲ್ಲ. ಎಲ್ಲರಲ್ಲೂ ಮಾನವೀಯತೆ ಇದೆ. ಎಲ್ಲರಲ್ಲೂ ದ್ವೇಷದ ಕಿಡಿ ಇದೆ. ಅದನ್ನು ಪಳಗಿಸುವ ಕೆಲಸ ಮಾಡಬೇಕು. ದುಷ್ಟ ಎಂದು ಶಿಕ್ಷೆ ಕೊಡುವುದು ದೇವರ ಕೆಲಸವಲ್ಲ. ಕೊಲ್ಲುವವನು ದೇವರಲ್ಲ. ಪಳಗಿಸುವವನು ದೇವರು. ಎಲ್ಲವನ್ನೂ ಸೃಷ್ಟಿಸುವ ಸೃಷ್ಟಿಕರ್ತನಿಗೆ ಮನಸ್ಸು ಪಳಗಿಸುವ ಶಕ್ತಿ ಇರುವುದಿಲ್ಲವೇ? ಎಂದು ಕೇಳಿದರು.