ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಚ್ಛತೆಗೆ ಸಹಭಾಗಿತ್ವ ಅಗತ್ಯ: ಸಂಸದ ಯದುವೀರ್

ಮಹಾನಗರ ಪಾಲಿಕೆಯಿಂದ ಪೌರ ಕಾರ್ಮಿಕರ ದಿನಾಚರಣೆ
Published : 24 ಸೆಪ್ಟೆಂಬರ್ 2024, 4:16 IST
Last Updated : 24 ಸೆಪ್ಟೆಂಬರ್ 2024, 4:16 IST
ಫಾಲೋ ಮಾಡಿ
Comments

ಮೈಸೂರು: ಪೌರಕಾರ್ಮಿಕರ ಜೊತೆಗೆ ಸಾರ್ವಜನಿಕರ ಸಹಕಾರ ಇದ್ದಲ್ಲಿ ಮೈಸೂರು ಮತ್ತೊಮ್ಮೆ ಉತ್ತಮ ಸ್ವಚ್ಛ ನಗರಿ ಆಗಲಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

ನಗರದ ಕಲಾಮಂದಿರದಲ್ಲಿ ಮಹಾನಗರಪಾಲಿಕೆಯು ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಪೌರ ಕಾರ್ಮಿಕರಿಂದ ಮೈಸೂರಿಗೆ ಒಳ್ಳೆಯ ಹೆಸರು ಬಂದಿದೆ. ರಸ್ತೆ ದೊಡ್ಡದಿರಲಿ, ಚಿಕ್ಕದಿರಲಿ ಇಂದು ಎಲ್ಲೆಡೆ ಪ್ಲಾಸ್ಟಿಕ್ ಕಾಣಿಸುತ್ತಿದೆ. ರಸ್ತೆಯಲ್ಲಿ ಕಸ ಬಿಸಾಡುವುದು ತಪ್ಪಬೇಕು. ಆರೋಗ್ಯವಂತ, ನಾಗರಿಕ ಸಮಾಜ ಸೃಷ್ಟಿಗೆ ಎಲ್ಲರೂ ಶ್ರಮಿಸಬೇಕು’ ಎಂದು ಕಿವಿಮಾತು ಹೇಳಿದರು.

ಸ್ವಚ್ಛತೆ ಎಂಬುದು ಕೇವಲ ರ್‍ಯಾಂಕಿಂಗ್‌ಗೆ ಮಾತ್ರ ಸೀಮಿತವಾಗಬಾರದು. ಪ್ರತಿಯೊಂದು ಮನೆಯಲ್ಲೂ ಕಸ ವಿಲೇವಾರಿಗೆ ಜಾಗೃತಿ ಮೂಡಿಸಬೇಕು. ಮೈಸೂರು ಒಳಗೊಂಡಂತೆ ದೇಶ ಸ್ವಚ್ಛವಾಗಬೇಕು ಎಂದು ಆಶಿಸಿದರು.

ಶಾಸಕ ಟಿ.ಎಸ್. ಶ್ರೀವತ್ಸ ಅಧ್ಯಕ್ಷತೆ ವಹಿಸಿ ಮಾತನಾಡಿ ‘ ಮೈಸೂರು ಸ್ವಚ್ಛ ನಗರ ಪಟ್ಟ ಪಡೆಯುವಲ್ಲಿ ಪೌರಕಾರ್ಮಿಕರ ಸೇವೆ ಪ್ರಮುಖವಾಗಿದೆ. ಕಸ ಸಂಗ್ರಹಕ್ಕೆ ಪೂರಕವಾಗಿ ಮತ್ತಷ್ಟು ಪೌರಕರ್ಮಿಕರ ನೇಮಕಕ್ಕೆ ಸರ್ಕಾರ ನಿಯಮಗಳ ವಿನಾಯಿತಿ ನೀಡಬೇಕು’ ಎಂದು ಕೋರಿದರು.

‘ಸರ್ಕಾರ ಪೌರ ಕಾರ್ಮಿಕರಿಗಾಗಿ ಮನೆ ಕಟ್ಟಿಕೊಡುವ ಜೊತೆಗೆ ಅವುಗಳ ನಿರ್ವಹಣೆಗೆ ಅನುದಾನ ನೀಡಬೇಕು’ ಎಂದು ಆಗ್ರಹಿಸಿದರು.

ಪ್ರತಿ ವಾರ್ಡ್‌ಗೆ ಒಬ್ಬರಂತೆ ಉತ್ತಮ ಸೇವೆ ಸಲ್ಲಿಸಿದ 68 ಪೌರಕಾರ್ಮಿಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಹಾನಗರ ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಷರೀಫ್‌, ಪಾಲಿಕೆ ಅಧಿಕಾರಿಗಳಾದ ಡಾ.ವೆಂಕಟೇಶ್‌, ಹರ್ಷ, ನಂಜುಂಡಸ್ವಾಮಿ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಮಂಚಯ್ಯ ಇದ್ದರು.

ಅಂತ್ಯದಲ್ಲಿ ಉದ್ಘಾಟನೆ; ಜನಪ್ರತಿನಿಧಿಗಳು ಗೈರು

ಬೆಳಿಗ್ಗೆ 10ಕ್ಕೆ ಆರಂಭ ಆಗಬೇಕಿದ್ದ ಕಾರ್ಯಕ್ರಮಕ್ಕೆ ಎರಡು ಗಂಟೆ ತಡವಾಗಿ ಚಾಲನೆ ದೊರೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಬರುವಿಕೆಗಾಗಿ ಕಾದು ಅಧಿಕಾರಿಗಳು ಪೌರ ಕಾರ್ಮಿಕರು ಸುಸ್ತಾದರು. ಮೊದಲಿಗೆ ಕಾರ್ಮಿಕರನ್ನು ಸನ್ಮಾನಿಸಿ ನಂತರದಲ್ಲಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಯದುವೀರ್ ಹಾಗೂ ಶ್ರೀವತ್ಸ ಕಾರ್ಯಕ್ರಮದ ಕೊನೆಯಲ್ಲಿ ವೇದಿಕೆಗೆ ಬಂದರು. ಉಳಿದ ಜನಪ್ರತಿನಿಧಿಗಳು ಗೈರಾದರು. ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಇದೇ ಮೊದಲ ಬಾರಿಗೆ ನಗರಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 2400 ಪೌರಕಾರ್ಮಿಕರಿಗೆ ರಜೆ ಘೋಷಿಸಲಾಗಿತ್ತು. ಅವರಿಗಾಗಿ ಭೋಜನದ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT