ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟರು, ಕ್ರಿಮಿನಲ್‌ಗಳ ಕೈಯಲ್ಲಿ ಅಧಿಕಾರ

ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಮಹೇಶ್‌ಚಂದ್ರಗುರು ಕಳವಳ
Last Updated 18 ಮೇ 2019, 20:10 IST
ಅಕ್ಷರ ಗಾತ್ರ

ಮೈಸೂರು: ಈ ದೇಶದ ಆಡಳಿತ ಭ್ರಷ್ಟರು, ಕೋಮುವಾದಿಗಳ ಕೈಯಲ್ಲಿದ್ದು ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಿದೆ ಎಂದು ಮೈಸೂರು ವಿ.ವಿ. ನಿವೃತ್ತ ಪ್ರಾಧ್ಯಾಪಕ ಬಿ.ಪಿ.ಮಹೇಶ್‌ಚಂದ್ರಗುರು ಕಳವಳ ವ್ಯಕ್ತಪಡಿಸಿದರು.

ಭಾರತ್‌ ಮೂಲನಿವಾಸಿ ಫೌಂಡೇಷನ್‌ ವತಿಯಿಂದ ಶನಿವಾರ ಆಯೋಜಿಸಿದ್ದ ಬುದ್ಧ ಪೂರ್ಣಿಮೆ ಮಹೋತ್ಸವ ಕಾರ್ಯಕ್ರಮದಲ್ಲಿ ‘ಬುದ್ಧ ದರ್ಶನ’ ವಿಷಯದಲ್ಲಿ ಅವರು ಉಪನ್ಯಾಸ ನೀಡಿದರು.

ಬುದ್ಧಿಹೀನ ಮತ್ತು ಮಾನವೀಯತೆ ಇಲ್ಲದ ಮನೆಹಾಳು ಆಗಿರುವವರು ನಾಯಕರಾಗಿ ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಾ ಇದ್ದಾರೆ. ದೇಶದ ಭವಿಷ್ಯದ ಬಗ್ಗೆ ಚಿಂತಿಸದ, ಯಾವುದೇ ದೂರದೃಷ್ಟಿತ್ವ ಇಲ್ಲದ ನಾಯಕರು ನಮ್ಮನ್ನು ಆಳುತ್ತಿರುವುದು ದೊಡ್ಡ ದುರಂತ ಎಂದರು.

ಪ್ರಜಾಪ್ರಭುತ್ವವನ್ನು ಜಗತ್ತಿಗೆ ಮೊದಲಿಗೆ ಹೇಳಿಕೊಟ್ಟದ್ದು ಬುದ್ಧ. ಆ ಬಳಿಕ ಬಸವೇಶ್ವರ ಮತ್ತು ಅಂಬೇಡ್ಕರ್‌ ಅವರು ಮಾನವತೆಯ ಸಂದೇಶ ಸಾರಿದರು. ಆದರೆ ಇಂದು ನಮ್ಮ ದೇಶದಲ್ಲಿ ರಾಜ್ಯಧರ್ಮ ಇಲ್ಲ. ತೋಳು ಬಲ, ಹಣ ಬಲ ರಾರಾಜಿಸುತ್ತಿದೆ ಎಂದು ಹೇಳಿದರು.

ಹಿಂದೂ ಧರ್ಮವನ್ನು ಹೊರತುಪಡಿಸಿ ಇತರ ಎಲ್ಲ ಧರ್ಮಗಳು ಸಮಾನತೆಯ ಸಂದೇಶವನ್ನು ಸಾರಿವೆ. ಹಿಂದೂ ಧರ್ಮದಲ್ಲಿರುವ ಅಸಮಾನತೆ ಹೋಗಲಾಡಿಸಲು ಅಂಬೇಡ್ಕರ್‌ ಪ್ರಯತ್ನಿದರಾದರೂ, ಯಶಸ್ಸು ದೊರೆಯಲಿಲ್ಲ. ಧರ್ಮ ಇರುವುದು ದಮನಗೊಳಿಸಲು ಅಲ್ಲ. ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಧರ್ಮದ ಉದ್ದೇಶವಾಗಿರಬೇಕು ಎಂದು ತಿಳಿಸಿದರು.

ಶಿವಯೋಗೀಶ್ವರ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಸರ್ಕಾರವು ಶಂಕರಾಚಾರ್ಯ ಜಯಂತಿ ಒಳಗೊಂಡಂತೆ ಯಾವ್ಯಾವುದೋ ಜಯಂತಿ ಆಚರಿಸುತ್ತದೆ. ಆದರೆ ಬುದ್ಧ ಜಯಂತಿ ಆಚರಿಸಲು ಮುಂದಾಗಿಲ್ಲ. ಮುಂದಿನ ಬಾರಿ ಸರ್ಕಾರದ ವತಿಯಿಂದ ಬುದ್ಧ ಜಯಂತಿ ಆಚರಿಸುವಂತೆ ಒತ್ತಡ ಹೇರಬೇಕು. ಬುದ್ಧ ಜಯಂತಿ ಮನುಕುಲಕ್ಕೆ ಮಾದರಿಯಾದ ಜಯಂತಿ ಎಂದು ಹೇಳಿದರು.

ಬುದ್ಧನ ಕಡೆ ಮುಖ ಮಾಡದವರಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಅಂಬೇಡ್ಕರ್‌ ಹೇಳಿದ್ದಾರೆ. ಆದ್ದರಿಂದ ಬುದ್ಧನ ಕಡೆ ನೋಡದವರಿಗೆ ಅಂಬೇಡ್ಕರ್‌ ಅವರ ಸವಲತ್ತುಗಳನ್ನು ಪಡೆಯುವ ಅರ್ಹತೆಯಿಲ್ಲ ಎಂದರು.

ಧಮ್ಮ ಸೇವಾರತ್ನ ಪ್ರಶಸ್ತಿ: ಕಾರ್ಯಕ್ರಮದಲ್ಲಿ 10 ಮಂದಿಗೆ ಧಮ್ಮ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆರ್‌.ಮಹದೇವಪ್ಪ (ಧಮ್ಮ ಪ್ರಸಾರ), ಎಸ್‌.ಪುಟ್ಟಸ್ವಾಮಿ (ಧಮ್ಮ ಪೋಷಕ), ಲಕ್ಷ್ಮಿರಾಮ್ (ಧಮ್ಮ ಸಂಗೀತ), ಗಿರೀಶ್‌ ಮಾಚಳ್ಳಿ (ಧಮ್ಮ ರಂಗಕಲೆ), ಪುಟ್ಟಸ್ವಾಮಿ (ಧಮ್ಮ ಪ್ರಸಾರ), ಡಾ.ಜಗನ್ನಾಥ್‌ (ವೈದ್ಯಕೀಯ ಸೇವೆ), ಡಾ.ರಾಜನಂದಮೂರ್ತಿ, ಎ.ಡಿ.ಮಂಚಯ್ಯ, ಕೆ.ಶ್ರೀನಿವಾಸ್ (ಧಮ್ಮಚಾರಿ) ಮತ್ತು ನಂಜುಂಡಸ್ವಾಮಿ (ಧಮ್ಮ ಪೋಷಕರು) ಅವರು ಪ್ರಶಸ್ತಿ ಪಡೆದರು.

ಮೇದಿನಿ ಮಹಾಬೋಧಿ ಮಿಷನ್‌ನ ಧರ್ಮಗುರು ಬುದ್ಧ ಪ್ರಕಾಶ ಭಂತೇಜಿ ಸಾನ್ನಿಧ್ಯ ವಹಿಸಿದ್ದರು. ರಮ್ಮನಹಳ್ಳಿಯ ಬಸವ ಧ್ಯಾನಕೇಂದ್ರದ ಬವಸಲಿಂಗ ಮೂರ್ತಿ ಶರಣರು, ಚಿತ್ರದುರ್ಗ ಛಲವಾದಿ ಜಗದ್ಗುರು ಪೀಠದ ಬಸವನಾಗಿದೇವ ಶರಣರು, ಮುಡುಕುತೊರೆ ಉರಿಲಿಂಗ ಪೆದ್ದಿ ಶಾಖಾಮಠದ ಸಿದ್ದರಾಮೇಶ್ವರ ಸ್ವಾಮೀಜಿ, ಚಿಂತಕ ಡಾ.ಕೃಷ್ಣಮೂರ್ತಿ ಚಮರಂ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT