ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಮಾಧಾನದ ಪೋಸ್ಟ್‌ ಹಾಕಿ ಅಳಿಸಿ ಹಾಕಿದ ಪ್ರತಾಪ ಸಿಂಹ

ರಘುಪತಿ ಭಟ್‌ ಉಚ್ಚಾಟಿಸಿದ್ದು ದುರದೃಷ್ಟಕರ ಎಂದಿದ್ದ ಸಂಸದ
Published 3 ಜೂನ್ 2024, 23:55 IST
Last Updated 3 ಜೂನ್ 2024, 23:55 IST
ಅಕ್ಷರ ಗಾತ್ರ

ಮೈಸೂರು: ಬಿಜೆಪಿ ಸಂಸದ ಪ್ರತಾಪ ಸಿಂಹ ಅವರು ಪಕ್ಷದ ವರಿಷ್ಠರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್‌’ ಮತ್ತು ಫೇಸ್‌ಬುಕ್‌ನಲ್ಲಿ ಸೋಮವಾರ ಬೆಳಿಗ್ಗೆ ಪೋಸ್ಟ್ ಹಾಕಿದ್ದ ಅವರು, ‘ಉಡುಪಿಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಮವಸ್ತ್ರ ಸಂಹಿತೆಯನ್ನು ಮುರಿದು ಬುರ್ಖಾ ಧರಿಸಿ ಕ್ಲಾಸಿಗೆ ಬಂದ ಜಿಹಾದಿ ಮನಸ್ಥಿತಿಯ ವಿರುದ್ಧ ಹೋರಾಡಿದ ರಘುಪತಿ ಭಟ್ಟರಿಗೆ ಎಂಎಲ್ಎ ಟಿಕೆಟ್ಟೂ ಸಿಗಲಿಲ್ಲ, ಎಂಎಲ್‌ಸಿ ಟಿಕೆಟ್ಟನ್ನೂ ಕೊಡಲಿಲ್ಲ. ಸಾಲದೆಂಬಂತೆ ಪಕ್ಷದಿಂದಲೂ ಉಚ್ಚಾಟನೆಗೆ ಒಳಗಾಗಿ ಬುರ್ಖಾ ಸ್ಟೂಡೆಂಟ್ ಆಲಿಯಾ ಅಸ್ಸಾದಿಯಿಂದ ಗೇಲಿಗೆ ಒಳಗಾಗುವ ಪರಿಸ್ಥಿತಿ ಹಿಂದುತ್ವವಾದಿಗಳಿಗೆ ಬಂದಿದ್ದು ದುರದೃಷ್ಟಕರ’ ಎಂದು ಹೇಳಿದ್ದರು.

ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದನ್ನು ಗಮನಿಸಿದ ಪಕ್ಷದ ಹಿರಿಯರು ಅವರನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಹೀಗಾಗಿ, ಆ ಪೋಸ್ಟ್‌ ಅನ್ನು ಡಿಲೀಟ್ ಮಾಡಿದ್ದಾರೆ.

ವಿಧಾನಪರಿಷತ್‌ ನೈರುತ್ಯ ಪದವೀಧರರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ರಘುಪತಿ ಭಟ್ ಅವರಿಗೆ ಪಕ್ಷ ಟಿಕೆಟ್‌ ನಿರಾಕರಿಸಿತ್ತು. ಹೀಗಾಗಿ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅವರಿಗೆ ಪಕ್ಷದಿಂದ ಮೊದಲಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ಬಳಿಕ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಅವರನ್ನು ಪಕ್ಷದಿಂದ ಉಚ್ಚಾಟಿಸಿದ ಬಗ್ಗೆ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದ ಹಿಜಾಬ್ ವಿವಾದ ಪ್ರಕರಣದ ಸಂತ್ರಸ್ತೆ ಆಲಿಯಾ ಅಸ್ಸಾದಿ ಗೇಲಿ ಮಾಡಿದ್ದರು. ‘ಹಿಜಾಬ್‌ ಧರಿಸಿದ ಏಕಮಾತ್ರ ಕಾರಣಕ್ಕೆ ವಾರ್ಷಿಕ ಪರೀಕ್ಷೆಗೆ ಇನ್ನೇನು 60 ದಿನಗಳಿರುವಾಗ ನನ್ನನ್ನು ಕಾಲೇಜಿನಿಂದ ಹೊರದಬ್ಬಿ ನಿಮ್ಮ ಪಕ್ಷಕ್ಕೆ ದೊಡ್ಡ ಸಾಧನೆ ಮಾಡಿ ತೋರಿಸಿದರಲ್ಲವೇ? ಆದರೆ, ಇಂದು ಅದೇ ಪಕ್ಷ ನಿಮ್ಮನ್ನು ಹೊರದಬ್ಬುವ ಆ ಕ್ಷಣವನ್ನು ನಾನು ನನ್ನ ಉಡುಪಿಯಲ್ಲೇ ನೋಡುವಂತಾಯಿತು...’ ಎಂದು ಪೋಸ್ಟ್ ಹಾಕಿದ್ದರು. ಇದೆಲ್ಲವನ್ನೂ ಪ್ರಸ್ತಾಪಿಸಿ ಪ್ರತಾಪ ಪ್ರತಿಕ್ರಿಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT