ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಫ್ಟ್‌ವೇರ್‌ ಟೆಕ್‌ ಪಾರ್ಕ್‌ ಹೊಸ ಕಟ್ಟಡ ಸಿದ್ಧ

ದಸರಾ ವೇಳೆಗೆ ಉದ್ಘಾಟನೆ: ಸಂಸದ ಪ್ರತಾಪ ಸಿಂಹ
Published 9 ಸೆಪ್ಟೆಂಬರ್ 2023, 5:12 IST
Last Updated 9 ಸೆಪ್ಟೆಂಬರ್ 2023, 5:12 IST
ಅಕ್ಷರ ಗಾತ್ರ

ಮೈಸೂರು: ‘ಹೊರವಲಯದ ಹೆಬ್ಬಾಳದಲ್ಲಿ ಇನ್ಫೊಸಿಸ್‌ ಬಳಿ ₹ 27.64 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಎಸ್‌ಟಿಪಿಐ (ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್‌ ಆಫ್ ಇಂಡಿಯಾ) ಕೇಂದ್ರದ ನೂತನ ಕಟ್ಟಡದ ಉದ್ಘಾಟನೆಯನ್ನು ದಸರಾ ವೇಳೆಗೆ ಉದ್ಘಾಟಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ’ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.

ಕಟ್ಟಡವನ್ನು ಶುಕ್ರವಾರ ವೀಕ್ಷಿಸಿದ ನಂತರ ಅವರು ಮಾತನಾಡಿದರು.

‘ಎಸ್‌ಟಿಪಿಐ ಕೇಂದ್ರದ ಆವರಣವು 2.36 ಎಕರೆ ವಿಸ್ತಾರವಾಗಿದ್ದು, ಕಟ್ಟಡವು 40 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದೆ. ನವೋದ್ಯಮಗಳಿಗೆ ಮೂಲಸೌಕರ್ಯ ನೀಡುವ ಜೊತೆಗೆ ಉದ್ಯಮದ ಬೆಳವಣಿಗೆಗೆ ಸರ್ಕಾರದಿಂದ ಸಹಾಯ, ಸಲಹೆ ಹಾಗೂ ಪೂರಕ ವಾತಾವರಣವನ್ನು ಕಲ್ಪಿಸಲಿದೆ’ ಎಂದು ಹೇಳಿದರು.

‘ದತ್ತಾಂಶ ಕೇಂದ್ರ, ತಂತ್ರಜ್ಞಾನ, ಇಂಟರ್‌ನೆಟ್‌ ಸೇರಿದಂತೆ ಹಲವು ಸೌಲಭ್ಯಗಳು ಕಡಿಮೆ ದರದಲ್ಲಿ ಕೇಂದ್ರದಲ್ಲಿ ಲಭ್ಯವಾಗಲಿದೆ. ಅಲ್ಲದೆ, ಸಾಫ್ಟ್‌ವೇರ್‌ ರಫ್ತನ್ನು ಹೆಚ್ಚಿಸಲಿದೆ. ನವೋದ್ಯಮಗಳನ್ನು ಪ್ರೋತ್ಸಾಹಿಸಲು ‘ಕಾವುಗೂಡು’ ಕೇಂದ್ರ (ಇನ್‌ಕ್ಯುಬೇಷನ್‌ ಸೆಂಟರ್) ಕೂಡ ಇಲ್ಲಿರಲಿದೆ. 100 ಸೀಟುಗಳ ಸಭಾಂಗಣ, ಕಾನ್ಫರೆನ್ಸ್ ರೂಂ, ಡಿಸ್ಕಷನ್ ರೂಂ ಮೊದಲಾದ ವ್ಯವಸ್ಥೆಯನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದರು.

ಎಸ್‌ಟಿಪಿಐ ಹೆಚ್ಚುವರಿ ನಿರ್ದೇಶಕ ಜಯಪ್ರಕಾಶ್, ಲೋಕೋಪಯೋಗಿ ಇಲಾಖೆಯ ಸೂಪರಿಂಟೆಂಡೆಂಟ್ ಎಂಜಿನಿಯರ್‌ ಶ್ರೀನಿವಾಸ್ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಸೌರಭ್ ಯಾದವ್ ಹಾಗೂ ಮಲ್ಲಿಕಾರ್ಜುನ್ ಇದ್ದರು.

ಇದಕ್ಕೂ ಮುನ್ನ ಸಂಸದರು, ರಾಷ್ಟ್ರೀಯ ಹೆದ್ದಾರಿ 275ರ ಮೈಸೂರು- ಹುಣಸೂರು ಮುಖ್ಯ ರಸ್ತೆಯಲ್ಲಿ ಹಿನಕಲ್‌ನಿಂದ ಸೇಂಟ್‌ ಜೋಸೆಫ್ ಶಾಲೆವರೆಗೆ ಪ್ರಗತಿಯಲ್ಲಿರುವ ವಿಸ್ತರಣೆ ಕಾಮಗಾರಿಯನ್ನು ಬೆಳವಾಡಿ ವೃತ್ತದ ಬಳಿ ವೀಕ್ಷಿಸಿದರು.

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಅನುದಾನದಲ್ಲಿ ನಗರದ ಇಟ್ಟಿಗೆಗೂಡಿನ ಚಾಮರಾಜೇಂದ್ರ ಮೃಗಾಲಯದ ಎದುರಿನ ಹಾಪ್‌ಕಾಮ್ಸ್ ಪಕ್ಕದ ಉದ್ಯಾನದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಶಾಸಕ ಟಿ.ಎಸ್. ಶ್ರೀವತ್ಸ, ಮೇಯರ್‌ ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT