ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಬರಲಿವೆ 29 ಹೊಸ ಪಬ್ಲಿಕ್‌ ಶಾಲೆ

Published 15 ಫೆಬ್ರುವರಿ 2024, 6:29 IST
Last Updated 15 ಫೆಬ್ರುವರಿ 2024, 6:29 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ ಸ್ಥಾಪನೆಯಾಗಿರುವ 12 ಕರ್ನಾಟಕ ಪಬ್ಲಿಕ್‌ ಶಾಲೆಗಳು (ಕೆಪಿಎಸ್‌) ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುವಲ್ಲಿ ಯಶಸ್ವಿ ಆಗಿದ್ದು, 2024–25ನೇ ಸಾಲಿನಲ್ಲಿ ಇಂತಹ ಬರೋಬ್ಬರಿ 29 ಹೊಸ ಶಾಲೆಗಳ ಸ್ಥಾಪನೆಗೆ ಶಾಲಾ ಶಿಕ್ಷಣ ಇಲಾಖೆಯು ಸಿದ್ಧತೆ ನಡೆಸಿದೆ.

ಈ ಸಂಬಂಧ ಈಗಾಗಲೇ ಇಲಾಖೆಗೆ ಪ್ರಸ್ತಾವ ಸಲ್ಲಿಕೆಯಾಗಿದೆ. ಅಷ್ಟೂ ಶಾಲೆಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದಲೇ ಅನುಮತಿ ದೊರೆಯುವ ಸಾಧ್ಯತೆ ಇದೆ. ಈಗ ಇರುವ ಆಯ್ದ ಶಾಲೆಗಳನ್ನೇ ಕೆಪಿಎಸ್ ಆಗಿ ಪರಿವರ್ತಿಸಲಾಗುತ್ತದೆ.

ಈ ಶಾಲೆಗಳಲ್ಲಿ ಎಲ್‌ಕೆಜಿ ಹಂತದಿಂದಲೇ ಕನ್ನಡ ಹಾಗೂ ಇಂಗ್ಲಿಷ್‌ ಮಾಧ್ಯಮ ಎರಡರಲ್ಲೂ ಕಲಿಕೆಗೆ ಅವಕಾಶ ಇರಲಿದೆ. ಸಾಮಾನ್ಯ ಶಾಲೆಗಳಿಗಿಂತ ಈ ಶಾಲೆಗಳು ಭಿನ್ನವಾಗಿ ಇರಲಿದ್ದು, ಪೂರ್ವ ಪ್ರಾಥಮಿಕ ಹಂತದಿಂದ ದ್ವಿತೀಯ ಪಿ.ಯು.ವರೆಗೆ ಒಂದೇ ಸೂರಿನಡಿ ಶಿಕ್ಷಣ ಸಿಗಲಿದೆ. ಇದಕ್ಕೆ ಅವಶ್ಯವಾದ ಹೆಚ್ಚುವರಿ ಶಿಕ್ಷಕರು ಹಾಗೂ ಮೂಲ ಸೌಕರ್ಯವನ್ನು ಸರ್ಕಾರವೇ ಒದಗಿಸಲಿದೆ.

ಉತ್ತಮ ಬೇಡಿಕೆ: ಜಿಲ್ಲೆಯಲ್ಲಿನ 12 ಕೆಪಿಎಸ್ ಶಾಲೆಗಳಲ್ಲೂ ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದು, ಮುಂಬರುವ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಈಗಾಗಲೇ ಎಲ್‌ಕೆಜಿಗೆ ಪ್ರವೇಶಾತಿ ಕೋರಿ ಪೋಷಕರು ಶಾಲೆಗಳಿಗೆ ಬರತೊಡಗಿದ್ದಾರೆ. ಅದರಲ್ಲೂ ಕೆಲವು ಶಾಲೆಗಳು ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿವೆ.

ಹುಣಸೂರು ತಾಲ್ಲೂಕಿನ ಗಾವಡಗೆರೆಯಲ್ಲಿನ ಕೆಪಿಎಸ್ ಶಾಲೆಯಲ್ಲಿ ಈ ವರ್ಷ 1,235 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, 6 ಎಕರೆಯಲ್ಲಿ ಇರುವ ಶಾಲೆಯು ಸುಸಜ್ಜಿತ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಸ್ಮಾರ್ಟ್‌ ಬೋರ್ಡ್‌ ಸಿಸಿ ಟಿವಿ ಕ್ಯಾಮೆರಾದಂತಹ ಸೌಲಭ್ಯಗಳನ್ನು ಹೊಂದಿದ್ದು, ಮಾದರಿಯಾಗಿ ಬೆಳೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಇಲ್ಲಿ ದಾಖಲಾತಿ ಹೆಚ್ಚುತ್ತಲೇ ಇದೆ.

ಸಿ.ಎಂ. ತವರಲ್ಲಿ ಉತ್ತಮ ಪ್ರತಿಕ್ರಿಯೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರೂರು ಸಿದ್ದರಾಮನಹುಂಡಿ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆಯು ಕಾರ್ಯ ನಿರ್ವಹಿಸುತ್ತಿದ್ದು, ಎಲ್‌ಕೆಜಿಯಿಂದ 10ನೇ ತರಗತಿವರೆಗೆ 850 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸ್ಮಾರ್ಟ್‌ ಕ್ಲಾಸ್‌ನಂತಹ ಹಲವು ಸೌಲಭ್ಯಗಳನ್ನು ಇದು ಒಳಗೊಂಡಿದೆ.

ಮೂಲ ಸೌಕರ್ಯ ಸರ್ಕಾರವೇ ಒದಗಿಸಲಿದೆ ಜಿಲ್ಲೆಯಲ್ಲಿವೆ 12 ಕೆಪಿಎಸ್ ಶಾಲೆ
ರಾಜ್ಯದಲ್ಲಿ 300 ಹೊಸ ಕೆಪಿಎಸ್‌ ಶಾಲೆಗಳನ್ನು ತೆರೆಯಲು ಸರ್ಕಾರ ಉದ್ದೇಶಿಸಿದ್ದು ಮೈಸೂರಿನಿಂದ 29 ಶಾಲೆಗಳಿಗೆ ಪ್ರಸ್ತಾವ ಬಂದಿದೆ. ಎಲ್‌ಕೆಜಿ ಪ್ರವೇಶಕ್ಕೆ ಇರುವ ಮಿತಿ ಹೆಚ್ಚಳಕ್ಕೂ ಕ್ರಮ ವಹಿಸಲಾಗುವುದು
ಮಧು ಬಂಗಾರಪ್ಪ ಶಿಕ್ಷಣ ಸಚಿವ
ಎಲ್ಲೆಲ್ಲಿ ಹೊಸ ಶಾಲೆಗೆ ಪ್ರಸ್ತಾವ?
(ವಿಧಾನಸಭಾ ಕ್ಷೇತ್ರವಾರು) ಮೈಸೂರು ನಗರ: ನರಸಿಂಹರಾಜ ಕ್ಷೇತ್ರ: ಸ.ಪ್ರೌ.ಶಾಲೆ ಕುಂಬಾರಕೊಪ್ಪಲು. ಕೃಷ್ಣರಾಜ ಕ್ಷೇತ್ರ: ಸ.ಪ್ರೌ.ಶಾಲೆ ಗಂಧನಹಳ್ಳಿ; ಸ.ಪ್ರೌ.ಶಾಲೆ ಕೆಸ್ತೂರುಕೊಪ್ಪಲು; ಸ.ಪ.ಪೂ. ಕಾಲೇಜು ಸಾಲಿಗ್ರಾಮ. ಚಾಮುಂಡೇಶ್ವರಿ ಕ್ಷೇತ್ರ: ಸ.ಪ್ರೌ.ಶಾಲೆ ಉದ್ಬೂರು; ಸ.ಪ್ರೌ.ಶಾಲೆ ಹೂಟಗಳ್ಳಿ; ಸ.ಪ್ರೌ.ಶಾಲೆ ಮೇಟಗಳ್ಳಿ. ಕೃಷ್ಣರಾಜ ಕ್ಷೇತ್ರ: ಪ.ಪೂ. ಕಾಲೇಜು ಬನ್ನಿಕುಪ್ಪೆ. ಪಿರಿಯಾಪಟ್ಟಣ ಕ್ಷೇತ್ರ: ಸ.ಪ್ರೌ.ಶಾಲೆ ಬೆಟ್ಟದಪುರ; ತಿ. ನರಸೀಪುರ ಕ್ಷೇತ್ರ: ಬಾಲಕಿಯರ ಸ.ಪ.ಪೂ.ಕಾಲೇಜು ಬನ್ನೂರು; ಬಾಲಕಿಯರ ಸ.ಪ್ರೌ.ಶಾಲೆ ತಿ. ನರಸೀಪುರ; ಸ.ಪ.ಪೂ. ಕಾಲೇಜು ತಿ. ನರಸೀಪುರ; ನಂಜನಗೂಡು ಕ್ಷೇತ್ರ: ಸ.ಪ.ಪೂ. ಕಾಲೇಜು ಹೆಡಿಯಾಲ; ಸ.ಪ್ರೌಢಶಾಲೆ ಹದಿನಾರು; ಸ.ಪ.ಪೂ. ಕಾಲೇಜು ದೊಡ್ಡಕವಲಂದೆ. ವರುಣ ಕ್ಷೇತ್ರ: ಸ.ಪ್ರೌ. ಶಾಲೆ ವರುಣ; ಸ.ಪ್ರೌ.ಶಾಲೆ ಹಾರೋಹಳ್ಳಿ; ಸ.ಪ್ರೌ.ಶಾಲೆ ವರಕೋಡು. ಎಚ್‌.ಡಿ. ಕೋಟೆ: ಜಿಜೆಸಿ ಬಾಲಕರ ಶಾಲೆ ಎಚ್‌.ಡಿ. ಕೋಟೆ (ವಾರ್ಡ್‌ 13); ಸ.ಬಾಲಕಿಯರ ಪ್ರೌಢಶಾಲೆ ಎಚ್‌.ಡಿ. ಕೋಟೆ (ವಾರ್ಡ್‌ 10); ಬಾಲಕರ ಸ.ಪ್ರ. ಶಾಲೆ ಸರಗೂರು; ಸ.ಪ್ರ.ಶಾಲೆ ಮಾದಾಪುರ. ಹುಣಸೂರು ಕ್ಷೇತ್ರ: ಹನಗೋಡು ರತ್ನಪುರಿ ಬಿಳಿಕೆರೆ ಕರಿಮುದ್ದನಹಳ್ಳಿ ಗ್ರಾಮಗಳಲ್ಲಿನ ಸ.ಪ.ಪೂ. ಕಾಲೇಜುಗಳು ಸ.ಪ್ರೌ.ಶಾಲೆ ಧರ್ಮಾಪುರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT