ಮೈಸೂರು: ‘ಶೋಷಿತ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಸಬಲತೆಗೆ ಅಗತ್ಯವಾದ ಕೆಲಸಗಳನ್ನು ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭರವಸೆ ನೀಡಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಶರಣ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಎಲ್ಲರಿಗೂ ಸಮಾನತೆ ಹಾಗೂ ಸಮಾನ ಅವಕಾಶಗಳು ಸಿಗಬೇಕೆಂಬುದು ಸಂವಿಧಾನದ ಆಶಯ. ಅದನ್ನು ಸಾಕಾರಗೊಳಿಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಅವಕಾಶ ವಂಚಿತರಿಗೆ ಅವಕಾಶ ಕಲ್ಪಿಸಿ, ತುಳಿತಕ್ಕೊಳಗಾದ ಸಮುದಾಯಗಳನ್ನು ಮೇಲೆತ್ತುವುದೇ ನಮ್ಮ ಪ್ರಮುಖ ಆಶಯ’ ಎಂದರು.
‘ಈ ಕಾರ್ಯಕ್ರಮ 12ನೇ ಶತಮಾನದ ಶರಣ ಚಳವಳಿಯನ್ನು ನೆನಪಿಸಿಕೊಳ್ಳುವುದಾಗಿದೆ. ಸಾಮಾಜಿಕ ಪಿಡುಗು ಮತ್ತು ಮೌಢ್ಯಗಳ ಪ್ರತಿಪಾದನೆ ಮಾಡುತ್ತಿದ್ದ ವೈದಿಕಶಾಹಿಗಳು ಕಾಯಕ ಸಮುದಾಯಗಳಲ್ಲಿ ಮೂಢನಂಬಿಕೆಯ ಅನೇಕ ಸಂಪ್ರದಾಯಗಳನ್ನು ಹೇರಿದ್ದರು. ಇದರ ವಿರುದ್ಧ ಬಸವಣ್ಣ ಹಾಗೂ ಅವರ ಸಮಕಾಲೀನವರಾದ ನುಲಿಯ ಚಂದಯ್ಯ ಅವರು ಹೋರಾಟ ನಡೆಸಿದ್ದರು. ಶ್ರಮ ಹಾಗೂ ಕಾಯಕ ಸಂಸ್ಕೃತಿಯನ್ನು ಜಾಗೃತಿಗೊಳಿಸಿದ್ದರು’ ಎಂದು ಸ್ಮರಿಸಿದರು.
‘ಭಾರತವು ಅನೇಕ ಧರ್ಮ, ಭಾಷೆಯ ವೈವಿಧ್ಯತೆಯ ನಡುವೆಯೂ ಏಕತೆಯನ್ನು ಸಾಧಿಸಿದೆ. ಈ ದೇಶದ ಮೂಲನಿವಾಸಿಗಳು ದಲಿತರು. ಅವರ ಆರ್ಥಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಅಭಿವೃದ್ಧಿಗೆ ಸಂವಿಧಾನವಿದೆ. ಅನುಭವ ಮಂಟಪದ ವಿಚಾರದಡಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡೋಣ’ ಎಂದು ಕರೆ ನೀಡಿದರು.
ಕುಂದೂರು ಮಠದ ಪೀಠಾಧಿಪತಿ ಶರತ್ ಚಂದ್ರ ಸ್ವಾಮೀಜಿ ಹಾಗೂ ಸಾಲೂರು ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಕೆ.ಹರೀಶ್ ಗೌಡ, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಎಕೆಎಂಎಸ್ ಜಂಟಿ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ, ರಾಜ್ಯ ಉಪಾಧ್ಯಕ್ಷೆ ಭೀಮಪುತ್ರಿ ನಾಗಮ್ಮ, ಕೃಷ್ಣದೇವರಾಯ ವಿಶ್ವವಿದ್ಯಾಲಯ ಕುಲಪತಿ ಎನ್.ಮುನಿರಾಜು, ಪ್ರಮುಖರಾದ ಜಿ.ಚಂದ್ರಣ್ಣ, ಎಸ್.ಟಿ.ಅಂಜನ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ, ಮೆರವಣಿಗೆ ನಡೆಯಿತು.
ಸಮುದಾಯದ ಅಭಿವೃದ್ಧಿಗೆ ಬೇಡಿಕೆಗಳು
ಕಾರ್ಯಕ್ರಮದಲ್ಲಿ ಸಚಿವ ಮಹದೇವಪ್ಪ ಅವರಿಗೆ ಸಮುದಾಯದ ಮುಖಂಡರು ಪ್ರಮುಖ ಬೇಡಿಕೆಯ ಮನವಿ ಸಲ್ಲಿಸಿದರು. ನಗರದ ಬ್ಯಾಂಕ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಬಡಾವಣೆ(ಬೋಗಾದಿ)ಯಲ್ಲಿ ಸಮುದಾಯಕ್ಕೆ ನೀಡಿರುವ ನಿವೇಶನದಲ್ಲಿ ಸರ್ಕಾರದ ಅನುದಾನದಲ್ಲಿ ಆರಂಭವಾದ ಹಾಸ್ಟೆಲ್ ಮತ್ತು ವಿದ್ಯಾಸಂಸ್ಥೆಯ ಕಟ್ಟಡಗಳ ನಿರ್ಮಾಣ ಕಾಮಗಾರಿಯು ಹಣದ ಕೊರತೆಯಿಂದ ಅರ್ಧದಲ್ಲೇ ನಿಂತಿದ್ದು ಪೂರ್ಣಗೊಳಿಸಲು ₹3 ಕೋಟಿ ಅನುದಾನ ಒದಗಿಸಬೇಕು. ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸಮುದಾಯದ ಅಭಿವೃದ್ಧಿ ಚಟುವಟಿಕೆಗಾಗಿ ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಘಟಕ ಯೋಜನೆಯಲ್ಲಿ ಶರಣ ನುಲಿಯ ಚಂದಯ್ಯ ಸಮುದಾಯ ಭವನಗಳ ನಿರ್ಮಾಣಕ್ಕೆ ನಿವೇಶನ ಮತ್ತು ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.