ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಡನಾಡಿಗಳ ಒಡಲಾಳ; ರಾಜೀವರ ನೆನೆದು ಭಾವುಕರಾದರು...

ಒಡನಾಡಿಗಳ ಒಡಲಾಳ; ಕಲಿತ ಪಾಠವನ್ನು ಮೌನದಲ್ಲೇ ಒಪ್ಪಿಸಿದ ಶಿಷ್ಯಂದಿರು; ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ
Published 13 ಜೂನ್ 2024, 5:59 IST
Last Updated 13 ಜೂನ್ 2024, 5:59 IST
ಅಕ್ಷರ ಗಾತ್ರ

ಮೈಸೂರು: ಮಂದ್ರ ಸ್ಥಾಯಿಯಲ್ಲಿ ಸುದೀರ್ಘವಾದ ರಾಗಾಲಾಪನೆ ಮಾಡಿದಂತಿತ್ತು ಆ ವಾತಾವರಣ. ದೂರದೂರಿನಿಂದ ಬಂದ ಶಿಷ್ಯರು ಗುರು ರಾಜೀವ ತಾರಾನಾಥರ ‍ಪಾಠವನ್ನು ಮೌನದಲ್ಲಿಯೇ ಒಪ್ಪಿಸುತ್ತಿದ್ದರು. ಪಂಡಿತ್‌ಜೀ ಅವರ ಪಾರ್ಥೀವ ಶರೀರ ನೋಡುತ್ತಲೇ ಕಣ್ಣುಗಳು ತುಂಬುತ್ತಿದ್ದವು.

ಕುವೆಂಪುನಗರದ ಪಂಚಮಂತ್ರ ರಸ್ತೆಯಲ್ಲಿನ ನಿವಾಸದಲ್ಲಿ ರಾಜೀವರ ತಮ್ಮನ ಮಗನನ್ನು ಬಿಟ್ಟರೆ ಅಲ್ಲಿದ್ದವರೆಲ್ಲ ಶಿಷ್ಯಂದಿರು, ಸಾಹಿತ್ಯ ಪ್ರಿಯರು, ಅಭಿಮಾನಿಗಳು, ಹೋರಾಟಗಾರರು, ರಂಗ ಕಲಾವಿದರು, ಮಕ್ಕಳು. ನೆನಪುಗಳನ್ನು ಒಪ್ಪಿಸುತ್ತಿದ್ದರು. ಎದುರಾದ ಸ್ನೇಹಿತರೊಂದಿಗೆ ಒಡನಾಟ ಹೇಳಿಕೊಂಡು ಭಾವುಕರಾಗುತ್ತಿದ್ದರು.

‘ತಬಲಾದಲ್ಲಿ ಸೀನಿಯರ್ ಪರೀಕ್ಷೆ ತೆಗೆದುಕೊಂಡಿರುವ ನನ್ನ ಮಗನಿಗೆ, ‘ಚಲೊ ತಬಲಾ ಬಾರಿಸುತ್ತಿ. ನನಗಿಂತ ದೊಡ್ಡ ಕಲಾವಿದನಾಗುತ್ತಿ. ಆದರೇನು, ಆಗ ನಿನ್ನ ನೋಡಲು ನಾನಿರುವುದಿಲ್ಲ ಎಂದು ರಾಜೀವರು ಹೇಳಿದ್ದರು’ ಎಂದು ಅಭಿನವ ಅವರ ತಾಯಿ ಶ್ರೀವಿದ್ಯಾ ಕಣ್ಣೀರಾದರು.

ಬರುವವರೆಗೂ ಬಿಡುತ್ತಿರಲಿಲ್ಲ: ಸರೋದ್‌ ಕಲಿಯುತ್ತಿರುವ ಸಚಿನ್ ಹಂಪೆ ಅವರು ರಾಜೀವರು ರಿಯಾಜ್ ಮಾಡುತ್ತಿದ್ದ ಕೋಣೆಯಲ್ಲಿ ನಿಂತು, ‘12 ವರ್ಷದಿಂದ ಅವರಲ್ಲಿ ಕಲಿಯುತ್ತಿದ್ದೇನೆ. ಅವರೊಂದಿಗಿನ ಕಲಿಕೆ ಶಾಲಾ ಪಠ್ಯ ಕ್ರಮ ದಂತಲ್ಲ. ಅವರು ಎಷ್ಟು ಹೇಳಿ ಕೊಡುತ್ತಾರೆ, ಏನು ಹೇಳಿ ಕೊಡುತ್ತಾರೆಂಬುದು ಊಹಿಸ ಲಾಗುತ್ತಿರಲಿಲ್ಲ. ಕಲಿಯಲು ಸದಾ ಸಿದ್ಧರಾಗಿರಬೇಕಿತ್ತು. ಮುಂಜಾನೆ 3ಕ್ಕೆ ಎಬ್ಬಿಸಿಬಿಡೋರು. ಲಲಿತಾ ರಾಗ ನುಡಿಸೊ ಹೊತ್ತಿದು ಎನ್ನೋರು. ಅವರು ಬಾರಿಸಿದ್ದನ್ನು ನಾವು ಬಾರಿಸಬೇಕಿತ್ತು. ಬರುವವರೆಗೂ ಬಿಡುತ್ತಿರಲಿಲ್ಲ’ ಎಂದರು.

‘ಸಂಗೀತದ ಜೊತೆಗೆ ಬದುಕನ್ನೂ ಕಲಿಸಿದರು. ವ್ಯಕ್ತಿತ್ವವನ್ನು ರೂಪಿಸಿದರು. ಆಲೋಚನೆ ಹೇಗಿರಬೇಕು. ಯಾವ ಪುಸ್ತಕ ಓದಬೇಕು. ಯಾವ ಮೌಲ್ಯಗಳು ಜೀವನಕ್ಕೆ ಮುಖ್ಯ ಅದನ್ನು ಕಲಿಸೋರು. ಅಡುಗೆಯನ್ನೂ ಕಲಿಸುತ್ತಿದ್ದರು. ಅಡುಗೆ ಬಗ್ಗೆ ಮಾತನಾಡುತ್ತಿದ್ದರೆ ನಾವು ತಿಂದ್ವೆನೋ ಎಂಬಂತೆ ಭಾಸವಾಗುತ್ತಿತ್ತು. ದೊಡ್ಡ ಅನುಭವ ನೀಡಿದ್ದಾರೆ’ ಎಂದು ನೆನೆದರು.

ಅವರೊಂದು ವಿವಿ: ಅಹಮದಾಬಾದಿ ನಿಂದ ಬಂದಿದ್ದ ಶಿಷ್ಯ– ಸರೋದ್‌ ವಾದಕ ಸೋಹನ್ ನೀಲಕಂಠ, ‘1989 ರಿಂದಲೂ ಪಂಡಿತ್‌ಜೀ ಅವರ ಶಿಷ್ಯ. ಕಛೇರಿಗೆ ಬಂದಾಗೆಲ್ಲ ವಾರ, ತಿಂಗಳ ಕಾಲ ಇದ್ದು ಕಲಿಸುತ್ತಿದ್ದರು. ನಾನೂ ಅವರು ಬಿಡುವಾದಾಗೆಲ್ಲ ಅವರಿದ್ದೆಡೆ ಹೋಗುತ್ತಿದ್ದೆ, ಕಲಿಯುತ್ತಿದ್ದೆ. ಎಷ್ಟೋ ಸಂಗೀತಗಾರರು ಕಲಿಕಾ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ರಾಜೀವರೇ ವಿಶ್ವವಿದ್ಯಾಲಯದಂತಿದ್ದರು’ ಎಂದರು.

‘1988ರಲ್ಲಿ ಇಂಗ್ಲೆಂಡ್‌ನಲ್ಲಿ ಮೊದಲ ಕಛೇರಿ ಕೇಳಿದ್ದೆ. ಮರು ವರ್ಷವೇ ಅಹಮದಾಬಾದ್‌ಗೆ ಬಂದಿದ್ದರು. ಕುಟುಂಬದ ಸದಸ್ಯನಂತೆ ಗಾಯನ– ವಾದನ ಎರಡೂ ಕಲಿಸಿದರು. ಬಹು ಆಯಾಮದ ಕಲಿಕೆಯದು. ಅವರು ದೊಡ್ಡ ರಾಗ ವಿಮರ್ಶಕರಾಗಿ ದ್ದರು. 15 ದಿನದ ಹಿಂದೆ ಆಸ್ಪತ್ರೆಗೆ ಬಂದಾಗಲೂ ನನ್ನಿಂದಲೂ ಹಾಡಿಸಿದರು’ ಎಂದು ಹೇಳಿದರು.

ನಿವೃತ್ತ ಐಜಿಪಿ ಸಿ.ಚಂದ್ರಶೇಖರ್‌, ‘ರೀಜನಲ್‌ ಕಾಲೇಜ್ ಆಫ್ ಎಜುಕೇಶನ್‌ನಲ್ಲಿ ಅವರ ವಿದ್ಯಾರ್ಥಿ. ಗುರುಗಳು ನೀಡಿದ ಕಛೇರಿಗಳ 2 ಸಾವಿರ ಗಂಟೆ ಆಡಿಯೊ ನನ್ನ ಬಳಿ ಇದೆ. ನನ್ನ ಮಾರ್ಗದರ್ಶಕ ಅವರು’ ಎಂದರು.

‘ತಾರಾನಾಥರು ಬಹುತ್ವ ಭಾರತದ ಸಂಕೇತವಾಗಿದ್ದರು. ಅವರ ಕಲಾ ಪ್ರತಿಭೆಯನ್ನು ಸ್ಮರಿಸುತ್ತಾ ಅವರ ಚಿಂತನಾ ಪ್ರತಿಭೆ ಯನ್ನು ನಾವು ಮರೆಯುತ್ತಿದ್ದೇವೆ. ಭಾರತದ ಜಾತ್ಯತೀತತೆಯ ಪ್ರಬಲ ಪ್ರತಿಪಾದಕ ರಾಗಿದ್ದರು. ಅದಕ್ಕೆ ಅವರ ಗುರು ಪರಂಪರೆ ಕಾರಣ’ ಎಂದವರು ಲೇಖಕ ರಹಮತ್ ತರೀಕೆರೆ.

‘ಅವರು ತಿರುಚ್ಚಿಯಲ್ಲಿ ಪ್ರಾಧ್ಯಾಪಕ ರಾಗಿದ್ದರು. ಮೋಟಾರ್‌ ಬೈಕ್‌ನಲ್ಲಿಯೇ ಬೆಂಗಳೂರಿಗೆ ಬಂದು ಮೈಸೂರಿಗೆ ಹೋಗುತ್ತಿದ್ದರು. ಕನ್ನಡದ ಪ್ರತಿಭೆ ತಮಿಳುನಾಡಿನಲ್ಲಿ ಇರುವುದು ಸರಿಯಲ್ಲವೆಂದು ರಾಮಕೃಷ್ಣ ಹೆಗಡೆ ಅವರು ಇವರಿಗಾಗೇ ಸಂಸ್ಕೃತಿ ಇಲಾಖೆಯಲ್ಲಿ ಉನ್ನತ ಹುದ್ದೆ ಸೃಷ್ಟಿ ಮಾಡಿ ಕರೆಸಿಕೊಂಡರು. ಮೊದಲ ವಿಶ್ವಕನ್ನಡ ಸಮ್ಮೇಳನ ಯಶಸ್ಸಿನಲ್ಲಿ ರಾಜೀವ ತಾರಾನಾಥರ ಶ್ರಮ
ವಿದೆ’ ಎಂದು ಲೇಖಕಿ ವಿಜಯಮ್ಮ ತಿಳಿಸಿದರು.

ಊಟ ಅವರೇ ಮಾಡಿಸುತ್ತಿದ್ದರು...

ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಪ್ರಾಧ್ಯಾಪಕ ಅರಣ್ಯ ಕುಮಾರ್ ‘2004ರಿಂದ ಅವರಲ್ಲಿ ಸಿತಾರ್ ಪಾಠ ಕಲಿಯುತ್ತಿರುವೆ. ಊಟವನ್ನು ಅವರೇ ಮಾಡಿಸುತ್ತಿದ್ದರು. ರಿಯಾಜ್ (ಅಭ್ಯಾಸ) ಮಾಡಬೇಕು. ಸಂಗೀತ ಕಲಿಯಬೇಕು. ಅವರ ಗುರುಗಳಿಗೆ ನ್ಯಾಯ ಕೊಡಬೇಕು ಎನ್ನುತ್ತಿದ್ದರು. ಎಲ್ಲ ಶ್ರೇಯಸ್ಸಿದ್ದರೂ ಗುರುಗಳಿಗೇ ಒಪ್ಪಿಸುತ್ತಿದ್ದರು. ಅಂಥ ಗುರುಭಕ್ತಿಯನ್ನು ಅನುಭವಿಸಿದ್ದೇನೆ’ ಎಂದು ಸ್ಮರಿಸಿದರು. ಹಿಂದೂಸ್ಥಾನಿ ಗಾಯಕ ಫಯಾಜ್‌ ಖಾನ್ ‘ಸಂಗೀತ ಪಾಠದಿಂದಲೇ ಉಣಿಸಿ ತಿನಿಸಿ ಕಲಿಸುವ ಮಾತೃ ಹೃದಯವದು. ಸಾಹಿತ್ಯ– ಸಂಗೀತದಲ್ಲಿ ಪಂಡಿತ್‌ಜೀ ಸರಿಸಮಾನರಾರು ಇರಲಿಲ್ಲ. ಮುಂದೆಯೂ ಬರುವುದಿಲ್ಲ. ಒಟ್ಟಿಗೆ ಕಛೇರಿಗೆ ಕೂರೋಣವೆಂದಿದ್ದರು. ನಾನು ಉದ್ಧಟತನ ಮಾಡಲಿಲ್ಲ. ಅವರಿಂದ ಕಲಿಯುವುದೇ ಬಹಳವಿತ್ತು. ತಂದೆಯಂತೆ ದಾರಿ ತೋರಿದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT