ಎಚ್.ಡಿ.ಕೋಟೆ: ಪುರಸಭೆಯಲ್ಲಿ ₹10 ಕೋಟಿಗೂ ಹೆಚ್ಚು ಹಗರಣ ನಡೆದಿರುವುದಾಗಿ ಆರೋಪಿಸಿ ಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯ ವೆಂಕಟೇಶ್ ಅವರು ಜಿಲ್ಲಾಧಿಕಾರಿಗೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ನಗರೋತ್ಥಾನ ಅಭಿವೃದ್ಧಿ ಅಧಿಕಾರಿ ಶುಭ ಅವರು ಬುಧವಾರ ಪುರಸಭೆ ಕಚೇರಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು.
ಬಳಿಕ ಮಾತನಾಡಿದ ಅವರು, ‘ಶೇ 50ರಷ್ಟು ಕಡತಗಳನ್ನು ಪರಿಶೀಲಿಸಿದ್ದು, ಮತ್ತೊಂದು ದಿನ ಭೇಟಿ ನೀಡಿ ಉಳಿದವುಗಳ ಪರಿಶೀಲನೆ ನಡೆಸುತ್ತೇನೆ. ಸರ್ಕಾರಿ ಅನುದಾನ ಬಳಕೆ ಹಾಗೂ ಸಾರ್ವಜನಿಕರಿಗೆ ನೀಡುತ್ತಿರುವ ಸೇವೆಯಲ್ಲಿ ಸಾಕಷ್ಟು ಲೋಪದೋಷಗಳು ಕಂಡುಬಂದಿವೆ. ಪುರಸಭೆಯ ಹಿಂದಿನ ಅಧಿಕಾರಿಗಳು ಎಸಗಿರುವ ಸಾಕಷ್ಟು ಲೋಪಗಳು, ಅಕ್ರಮ ಖಾತೆಗಳನ್ನು ಸರಿಪಡಿಸಲು ಮತ್ತಷ್ಟು ಪರಿಶೀಲನೆ ನಡೆಸುವ ಅಗತ್ಯವಿದೆ’ ಎಂದರು.
‘ಪಟ್ಟಣದ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಗುಣಮಟ್ಟ ಕಡಿಮೆಯಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮವಹಿಸಲಾಗುವುದು. ಕಸ ವಿಲೇವಾರಿ ಹಾಗೂ ಚರಂಡಿ ಶುದ್ಧೀಕರಣಕ್ಕೆ ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.
‘ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು. ಕಾರಣ ಕೇಳಿ ನೋಟಿಸ್ ನೀಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯ ವೆಂಕಟೇಶ್ ಮಾತನಾಡಿ, ‘ಪೈಪ್‌ಲೈನ್, ಮೋಟಾರ್ ಖರೀದಿಗೆ ₹18 ಲಕ್ಷ, ಬೀದಿ ದೀಪಕ್ಕೆ ₹11 ಲಕ್ಷ ವ್ಯಯಿಸಲಾಗಿದೆ. ಕೊಳವೆ ಬಾವಿಗಳಲ್ಲಿದ್ದ ಹಳೆಯ ಮೋಟಾರ್‌ಗಳನ್ನು ಬದಲಿಸಿ ₹4 ಲಕ್ಷ ವೆಚ್ಚದಲ್ಲಿ ಹೊಸದಾಗಿ 10 ಮೋಟಾರುಗಳನ್ನು ಅಳವಡಿಸಲಾಗಿತ್ತು. ಆದರೆ, ಹಳೆಯ ಮೋಟಾರ್ ನಾಪತ್ತೆಯಾಗಿವೆ’ ಎಂದು ಆರೋಪಿಸಿದರು.
‘ಪುರಸಭೆಯ ಅಭಿವೃದ್ಧಿ ವಿಚಾರದಲ್ಲಿ ಅಧಿಕಾರಿ ಕಾಳಜಿ ವಹಿಸುತ್ತಿಲ್ಲ. ಸಭೆ ನಡೆಸಿ ಚರ್ಚಿಸಿದರೂ ಗಮನ ಹರಿಸುತ್ತಿಲ್ಲ’ ಎಂದು ದೂರಿದರು.
ಪುರಸಭಾ ಮುಖ್ಯಾಧಿಕಾರಿ ಪಿ.ಸುರೇಶ್, ಪ್ರಥಮ ದರ್ಜೆ ಸಹಾಯಕ ಮೃತ್ಯುಂಜಯ, ವ್ಯವಸ್ಥಾಪಕ ಮುರುಗೇಶ್, ನರಸು ಕುಂಡ್ರೆ, ಸಿಬ್ಬಂದಿ ಸಂತೋಷ್ ಹರೀಶ್ ಜಯಶೀಲ, ರಘು, ಪರಮೇಶ್, ರೇಷ್ಮಾ ಇದ್ದರು.
ನಗರೋತ್ಥಾನ ಅಭಿವೃದ್ಧಿ ಅಧಿಕಾರಿ ಶುಭ ಭೇಟಿ ಅನುದಾನ ಬಳಕೆಯಲ್ಲಿ ಲೋಪ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಗುಣಮಟ್ಟ ಕುಸಿತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.