ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟರ ಹಣ: ಮಾಜಿ ಮೇಯರ್‌ ಶಿವಕುಮಾರ್

ಮಾಜಿ ಮೇಯರ್‌ ಶಿವಕುಮಾರ್ ಆರೋಪ; ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ
Published 22 ಮಾರ್ಚ್ 2024, 5:12 IST
Last Updated 22 ಮಾರ್ಚ್ 2024, 5:12 IST
ಅಕ್ಷರ ಗಾತ್ರ

ಮೈಸೂರು: ‘ಪರಿಶಿಷ್ಟ ಸಮುದಾಯಕ್ಕೆ ಮೀಸಲಿಟ್ಟಿದ್ದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಅನ್ಯಾಯ ಎಸಗಿದೆ’ ಎಂದು ಮಾಜಿ ಮೇಯರ್‌ ಶಿವಕುಮಾರ್ ಆರೋಪಿಸಿದರು. 

ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಅಹಿಂದ ನಾಯಕರೆಂದು ಹೇಳಿಕೊಳ್ಳುತ್ತಲೇ ಸಮುದಾಯಗಳ ಅಭಿವೃದ್ಧಿಯತ್ತ ನಿರ್ಲಕ್ಷ್ಯ ವಹಿಸಿದ್ದಾರೆ. ರಾಷ್ಟ್ರಪತಿ ದ್ರೌಪತಿ ಮುರ್ಮು ಅವರನ್ನು ಏಕವಚನದಲ್ಲಿಯೇ ಕರೆದು ಅವಮಾನಿಸಿದ್ದಾರೆ’ ಎಂದು ದೂರಿದರು.

‘ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹10 ಸಾವಿರ ಕೋಟಿ ಮೀಸಲಿಡುವುದಾಗಿ ಘೋಷಿಸಿ, ಅದರಲ್ಲಿ ₹1,500 ಕೋಟಿ ಬಿಡುಗಡೆ ಮಾಡಿದ್ದಾರೆ. ಆದರೆ, ಪರಿಶಿಷ್ಟ ಸಮುದಾಯಕ್ಕೆ ಯಾವುದೇ ಅನುದಾನವನ್ನೂ ಹಂಚಿಕೆ ಮಾಡಿಲ್ಲ’ ಎಂದು ದೂರಿದರು.

‘ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆ ಆಧರಿತವಾಗಿ ನೀಡಬೇಕೆಂದು ಹೋರಾಟ ನಡೆದಾಗ ಸ್ಪಂದಿಸಿದ್ದು ಬಿಜೆಪಿ ಸರ್ಕಾರ. ಶೇ 3ರಷ್ಟಿದ್ದ ಮೀಸಲಾತಿಯನ್ನು ಶೇ 7.5ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿತ್ತು. ಪರಿವಾರ, ತಳವಾರ ಸಮುದಾಯಗಳನ್ನು ಎಸ್‌.ಟಿಗೆ ಸೇರಿಸಿದ್ದು ಕೇಂದ್ರದಲ್ಲಿನ ಬಿಜೆಪಿ ಸರ್ಕಾರ’ ಎಂದು ಹೇಳಿದರು. 

‘ವಾಲ್ಮೀಕಿ ಜಯಂತಿ, ಒನಕೆ ಓಬವ್ವ, ಬಿರ್ಸಾ ಮುಂಡಾ ಜಯಂತಿ ಆಚರಣೆ ಜಾರಿಗೊಳಿಸಿದ್ದು ಬಿಜೆಪಿ ಸರ್ಕಾರವೇ ಎಂಬುದನ್ನು ನೆನಪಿನಲ್ಲಿಡಲಿ’ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಎಸ್‌ಟಿ ಮೋರ್ಚಾ ನಗರಾಧ್ಯಕ್ಷ ಪಡುವಾರಹಳ್ಳಿ ರಾಮಕೃಷ್ಣ, ಗ್ರಾಮಾಂತರ ಜಿಲ್ಲಾಧ್ಯಕ್ಷ ಮುದ್ದುಕೃಷ್ಣ, ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು, ನಾರಾಯಣ್ ಲೋಲಪ್ಪ, ಕೃಷ್ಣ ನಾಯಕ, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಹಾಜರಿದ್ದರು.

24ಕ್ಕೆ ಎಸ್‌.ಟಿ ಮೋರ್ಚಾ ಸಮಾವೇಶ

  ‘ಬಿಜೆಪಿ ನಗರ ಮತ್ತು ಗ್ರಾಮಾಂತರ ಎಸ್‌.ಟಿ ಮೋರ್ಚಾದ ಮುನ್ನಡೆ ಸಮಾವೇಶ ಮಾರ್ಚ್ 24ರಂದು ಬೆಳಿಗ್ಗೆ 11ಕ್ಕೆ ನಂಜುಮಳಿಗೆಯ ನೇರಂಬಳ್ಳಿ ಸುಬ್ಬರಾವ್‌ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವರು’ ಎಂದು ಮೋರ್ಚಾ ನಗರಾಧ್ಯಕ್ಷ ಪಡುವಾರಹಳ್ಳಿ ರಾಮಕೃಷ್ಣ ತಿಳಿಸಿದರು. ‘ಶಾಸಕರಾದ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಟಿ.ಎಸ್‌.ಶ್ರೀವತ್ಸ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತ ಸಂಸದ ಪ್ರತಾಪಸಿಂಹ ಲೋಕಸಭಾ ಚುನಾವಣೆ ಅಭ್ಯರ್ಥಿಗಳಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಎಸ್‌.ಬಾಲರಾಜ್ ಮುಖಂಡ ಎಸ್‌.ಎ.ರಾಮದಾಸ್‌ ಪಾಲ್ಗೊಳ್ಳುವರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT