ಮೈಸೂರು: ಬೆಳಗಾವಿ ಜಿಲ್ಲೆಯ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಇಲ್ಲಿನ ದಿಗಂಬರ ಜೈನ ಸಮಾಜ, ಶ್ವೇತಾಂಬರ ಜೈನ ಸಮಾಜ ಹಾಗೂ ಜೈನ ಯುವಕ ಮಂಡಲದ ಸದಸ್ಯರು ಇಲ್ಲಿನ ಗಾಂಧಿ ವೃತ್ತದಲ್ಲಿ ಬುಧವಾರ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು.
ಸಮಾಜದ ಅಧ್ಯಕ್ಷ ಎಂ.ಆರ್.ಸುನೀಲ್ ಕುಮಾರ್ ಮಾತನಾಡಿ, ‘ಅಹಿಂಸಾ ತತ್ವ ಸಾರುವ ಮುನಿಗಳನ್ನು ಹಿಂಸಾತ್ಮಕವಾಗಿ ಕೊಲೆ ಮಾಡಿರುವುದು ವಿಷಾದನೀಯ. ಈ ರೀತಿಯ ಘಟನೆಗಳು ನಾಗರಿಕ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮುಂದೆ ಈ ರೀತಿಯ ಘಟನೆಗಳು ಮರುಕಳಿಸದೇ ಇರಲು ಕೃತ್ಯ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಜೈನ ಧರ್ಮವು ವಿಶ್ವಕ್ಕೆ ಅಹಿಂಸೆ ತತ್ವ ಬೋಧಿಸಿದೆ. ಅಧ್ಯಾತ್ಮ ಪ್ರವರ್ತಕರಾದ ಜೈನ ಮುನಿಗಳಿಗೆ ತೊಂದರೆ ಆಗದಂತೆ ಸರ್ಕಾರದಿಂದ ಭದ್ರತೆ ನೀಡಬೇಕು. ಆ ಮೂಲಕ ಭವಿಷ್ಯದಲ್ಲಿ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಬೇಕು. ಸಮಾಜಕ್ಕೆ ಮಾರ್ಗದರ್ಶನ ಮಾಡುವವರ ರಕ್ಷಣೆ ಮಾಡುವುದು ಒಳಿತು’ ಎಂದರು.
ಬಳಿಕ ಆಲ್ಬರ್ಟ್ ವಿಕ್ಟರ್ ರಸ್ತೆ, ಮಿರ್ಜಾ ರಸ್ತೆ, ಮೈಲಾರಿ ಹೋಟೆಲ್ ಮಾರ್ಗವಾಗಿ ಮೆರವಣಿಗೆ ಸಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಮೂಲಕ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿದರು.
ದಿಗಂಬರ ಜೈನ ಸಮಾಜದ ಕಾರ್ಯದರ್ಶಿ ಪಿ.ಎಸ್.ಲಕ್ಷ್ಮೀಶ್ ಬಾಬು, ವಿನೋದ್ ಜೈನ್, ಸುರೇಶ್ ಕುಮಾರ್ ಜೈನ್, ಯುವರಾಜ್ ಭಂಡಾರಿ, ರತ್ನರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.