ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರಮನೆ ವಿಚಾರದಲ್ಲಿ ಕಾಲು ಕೆರೆದುಕೊಂಡು ಹೋಗುವ ಸಿದ್ದರಾಮಯ್ಯ: ವಿಶ್ವನಾಥ್ ಟೀಕೆ

Published 14 ಆಗಸ್ಟ್ 2024, 13:42 IST
Last Updated 14 ಆಗಸ್ಟ್ 2024, 13:42 IST
ಅಕ್ಷರ ಗಾತ್ರ

ಮೈಸೂರು: ‘ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲಾ ಮೈಸೂರು ಅರಮನೆ ವಿಚಾರದಲ್ಲಿ ಕಾಲು ಕೆರೆದುಕೊಂಡು ಹೋಗುತ್ತಾರೆ. ನಾನೊಬ್ಬ ಸಮಾಜವಾದಿ ಎಂದು ಹೇಳಿಕೊಳ್ಳುತ್ತಲೇ ತೀಟೆ ಮಾಡುತ್ತಾರೆ’ ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್‌ ಟೀಕಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಉಪ ಮುಖ್ಯಮಂತ್ರಿ ಆಗಿದ್ದಾಗಲೂ ಕೈ ಹಾಕಿದ್ದರು. ಈಗ ಮುಖ್ಯಮಂತ್ರಿ ಆದ ಮೇಲೂ ಕೈ ಹಾಕಿದ್ದಾರೆ. ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರವೇ ಬೇರೆ. ಚಾಮುಂಡಿಬೆಟ್ಟವೇ ಬೇರೆ. ಈ ದೇವಸ್ಥಾನದ ಕೆಲಸ ಅದರ ಪಾಡಿಗೆ ನಡೆದುಕೊಂಡು ಹೋಗಲು ಬಿಡಬೇಕು’ ಎಂದರು.

‘ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪಾದಯಾತ್ರೆ ಹಾಗೂ ಜನಾಂದೋಲನ ಸಮಾವೇಶ ನಡೆಸಿದ ಬಿಜೆಪಿ-ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಾಯಕರು ಜನರಿಗೆ ಏನು ಸಂದೇಶ ಕೊಟ್ಟಿರಿ? ಕರ್ನಾಟಕದ ರಾಜಕಾರಣ ಅಧೋಗತಿಗೆ ಹೋಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ನಾಡನ್ನು ಆಳ್ವಿಕೆ ಮಾಡಿದವರಲ್ಲಿ ಎಂತಹ ಮಹಾನ್ ನಾಯಕರು ಇದ್ದಾರೆ. ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಧೂಳೀಪಟ ಮಾಡಿಬಿಟ್ಟರು’ ಎಂದು ಆರೋಪಿಸಿದರು. ‘ಮುಡಾ ವಿಚಾರದಲ್ಲಿ ಏನಾಗಬೇಕು ಎಂಬುದನ್ನು ಕಾನೂನು ತೀರ್ಮಾನಿಸುತ್ತದೆ. ಸಾರ್ವಜನಿಕರು ಕೇಳುವ ಪ್ರಶ್ನೆಗಳಿಗೆ ನಿಮ್ಮ ಉತ್ತರವೇನು ಸಿದ್ದರಾಮಯ್ಯನವರೇ? ನೀವು ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ನಿವೇಶನವನ್ನು ಕೊಟ್ಟಿಲ್ಲ’ ಎಂದು ಟೀಕಿಸಿದರು.

‘ಜನಾಂದೋಲನ ಸಮಾವೇಶದಲ್ಲಿ, ಬಡವರಿಗೆ ನಿವೇಶನ ಕೊಡುವ ಬಗ್ಗೆಯಾಗಲೀ, ಮುಡಾ ಸ್ವಚ್ಛಗೊಳಿಸುವ ಕುರಿತಾಗಲಿ ಮಾತನಾಡಲಿಲ್ಲ. ವೈಯಕ್ತಿಕ ಟೀಕೆ– ಟಿಪ್ಪಣಿಗಳಲ್ಲೇ ಯಾತ್ರೆ ಹಾಗೂ ಸಮಾವೇಶ ಮುಗಿದು ಹೋದವು’ ಎಂದು ಲೇವಡಿ ಮಾಡಿದರು.

‘ಸಿದ್ದರಾಮಯ್ಯ ಅವರು ನಾನೊಬ್ಬ ಅಹಿಂದ ಮುಖ್ಯಮಂತ್ರಿ ಎಂದು ಹೇಳುವುದು ಹಾಸ್ಯಾಸ್ಪದ. ಒಕ್ಕಲಿಗರು, ಲಿಂಗಾಯತರು ನಿಮಗೆ ಮತ ಹಾಕಲಿಲ್ಲವೇ? ನೀವು ಮೊದಲು ಸರಿ, ಆಮೇಲೆ ಬೇರೆಯವರ ಬಗ್ಗೆ ಮಾತನಾಡಿ’ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

‘ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ನನ್ನ ಮೇಲೆ ₹50 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲು ನೋಟಿಸ್ ಕೊಟ್ಟಿದ್ದಾರೆ. ಸುರೇಶ್‌ ನನ್ನನ್ನು ಹೆದರಿಸಲು ಬರಬೇಡ, ನನಗೂ ಕಾನೂನು ಗೊತ್ತಿದೆ’ ಎಂದು ತಿರುಗೇಟು ನೀಡಿದರು.

‘ಮುಡಾ ಹಗರಣದ ತನಿಖೆ ಏನಾಗಿದೆ? ಸಚಿವರು ಮುಡಾಕ್ಕೆ ಬಂದು ಹೋದ ಮೇಲೂ 500 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಭೈರತಿ ಸುರೇಶ್ ₹ 50 ಕೋಟಿ ಕೇಳಿದರೆ, ಸಿದ್ದರಾಮಯ್ಯ ₹ 62 ಕೋಟಿ ಕೇಳುತ್ತಿದ್ದಾರೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT