ಮೈಸೂರು: 'ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುವುದು ಎಸ್‌ಐಟಿ ಅಲ್ಲ, ಸಿದ್ದರಾಮಯ್ಯ–ಶಿವಕುಮಾರ್ ಇನ್‌ವೆಸ್ಟಿಗೇಟಿವ್ ಟೀಮ್ (ಎಸ್‌ಎಸ್‌ಐಟಿ)’ ಎಂದು ಜೆಡಿಎಸ್ ಮುಖಂಡ ಸಾ.ರಾ. ಮಹೇಶ್ ಲೇವಡಿ ಮಾಡಿದರು.
‘ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಹಗರಣದಲ್ಲಿ ಎಸ್‌ಐಟಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಬಳ್ಳಾರಿ ಶಾಸಕ ಬಿ. ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಹೆಸರನ್ನೇ ಕೈಬಿಡಲಾಗಿದೆ. ಕೆಲವು ದಿನದ ಹಿಂದೆ ದದ್ದಲ್ ಅವರೇ ಎಸ್‌ಐಟಿ ತನ್ನನ್ನು ಬಂಧಿಸಲಿ ಎಂದು ಪಟ್ಟು ಹಿಡಿದಿದ್ದರು. ಎಸ್‌ಐಟಿ ನಮ್ಮದೇ ಸಂಸ್ಥೆ ಎಂದು ಆಡಳಿತ ಪಕ್ಷದ ಶಾಸಕರು ಭಾವಿಸಿದ್ದಾರೆ. ಕರ್ನಾಟಕದಲ್ಲಿ ಹಿಂದೆಂದೂ ಪೊಲೀಸರನ್ನು ಈ ಮಟ್ಟಕ್ಕೆ ಬಳಸಿಕೊಂಡ ಉದಾಹರಣೆ ಇಲ್ಲ’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಬಂಧಿಸಿ: ಯಾದಗಿರಿ ಪಿಎಸ್‌ಐ ಪರಶುರಾಮ ಆತ್ಮಹತ್ಯೆಗೆ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ, ಅವರ ಮಗ ಪಂಪನಗೌಡ ಅವರೇ ಕಾರಣ ಎಂದು ಮೃತರ ಪತ್ನಿ ದೂರು ನೀಡಿದ್ದಾರೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಸಂವಿಧಾನದ ಮೇಲೆ ಗೌರವ ಇದ್ದರೆ ಕೂಡಲೇ ಶಾಸಕರನ್ನು ಬಂಧಿಸಬೇಕು. ಶಾಸಕ ಸ್ಥಾನದಿಂದ ಅವರನ್ನು ಅಮಾನತು ಮಾಡಬೇಕು’ ಎಂದು ಮಹೇಶ್ ಒತ್ತಾಯಿಸಿದರು.