ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | 75 ಗಿರಿಜನ ಕುಟುಂಬಕ್ಕೆ ಸೌರ ವಿದ್ಯುತ್‌

ಬಿಲ್ಲೇನಹೊಸಹಳ್ಳಿ, ಲಕ್ಷ್ಮೀಪುರ ಹಾಡಿಗಳಲ್ಲಿ ಮೈಕ್ರೋ ಪವರ್ ಗ್ರಿಡ್ ಘಟಕ
ಎಚ್‌.ಎಸ್.ಸಚ್ಚಿತ್
Published 7 ಜನವರಿ 2024, 6:45 IST
Last Updated 7 ಜನವರಿ 2024, 6:45 IST
ಅಕ್ಷರ ಗಾತ್ರ

ಹುಣಸೂರು: ನಾಗರಹೊಳೆ ಅರಣ್ಯದಂಚಿನ ಬಿಲ್ಲೇನಹೊಸಹಳ್ಳಿ ಮತ್ತು ಲಕ್ಷ್ಮೀಪುರ ಹಾಡಿಗಳಲ್ಲಿ ಮೈಸೂರಿನ ಎನ್‌ಐಇ ಕಾಲೇಜಿನ ‘ಕ್ರೆಸ್ಟ್‌’ (ನವೀಕರಿಸಬಹುದಾದ ಇಂಧನ ಹಾಗೂ ಸುಸ್ಥಿರ ತಂತ್ರಜ್ಞಾನಗಳ ಕೇಂದ್ರ) ವತಿಯಿಂದ ‘ಡೀಡ್‌’ ಸಂಸ್ಥೆ ಸಹಕಾರದಲ್ಲಿ ಮೈಕ್ರೋ ಪವರ್ ಗ್ರಿಡ್ ಘಟಕ ನಿರ್ಮಿಸಿದ್ದು, ಜ.17ರಿಂದ ವಿದ್ಯುತ್‌ ಪೂರೈಕೆಯಾಗಲಿದೆ.

ಈ ಹಾಡಿಗಳಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿ ವರ್ಷಗಳೇ ಉರುಳಿದರೂ ವಿದ್ಯುತ್ ಸಂಪರ್ಕ ಕಲ್ಪಿಸಿರಲಿಲ್ಲ.

‘ಕ್ರೆಸ್ಟ್‌’ನವರು ಸೌರವಿದ್ಯುತ್ ಮತ್ತು ಜೈವಿಕ ಇಂಧನ ಬಳಸಿ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನವನ್ನು ಇಲ್ಲಿ ಬಳಸಿದೆ. ಅರಣ್ಯದಲ್ಲಿ ಹೇರಳವಾಗಿ ಸಿಗುವ ಹೊಂಗೆ, ಬೇವು, ಹಿಪ್ಪೆ, ಅರಳಿ ಬೀಜಗಳಿಂದ ಜೈವಿಕ ಇಂಧನ ತಯಾರಿಸಿ ಅದನ್ನು ಜನರೇಟರ್‌ಗೆ ಪೂರೈಸಿ ವಿದ್ಯುತ್‌ ಉತ್ಪಾದಿಸಲಾಗುತ್ತದೆ. ಇದನ್ನು ಪ್ರಾಯೋಗಿಕವಾಗಿ ಹುಣಸೂರಿನ ಹೆಮ್ಮಿಗೆ ಹಾಡಿಯಲ್ಲಿ ಎನ್‌ಐಇ ಪ್ರಾಧ್ಯಾಪಕ ಶ್ಯಾಮಸುಂದರ್‌ ನೇತೃತ್ವದಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಡೀಡ್ ಸಂಸ್ಥೆ ನಿರ್ದೇಶಕ ಶ್ರೀಕಾಂತ್ ಅವರ ಪ್ರಯತ್ನದಿಂದ ನಾಗರಹೊಳೆ ಅರಣ್ಯದಂಚಿನ ಗಿರಿಜನ ಹಾಡಿಗಳಲ್ಲಿ ಈ ಯೋಜನೆ ಜಾರಿಗೊಂಡಿದೆ.

₹30 ಲಕ್ಷ ವೆಚ್ಚದಲ್ಲಿ ಮೈಕ್ರೋ ಪವರ್ ಗ್ರಿಡ್ ಘಟಕ (ನಮ್ಮ ಗ್ರಿಡ್‌) ನಿರ್ಮಿಸಿದ್ದು, ಇನ್ಫೊಸಿಸ್ ಸಂಸ್ಥೆಯ ಕೆ.ದಿನೇಶ್ ಅವರ ‘ಆಶ್ರಯಹಸ್ತ’ ಸ್ವಯಂ ಸೇವಾ ಸಂಸ್ಥೆ ನೆರವು ನೀಡಿದೆ. 75 ಗಿರಿಜನ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ.

‘ನಮ್ಮ ಗ್ರಿಡ್’ನಲ್ಲಿ 8 ಕಿಲೋವಾಟ್‌ ಸೌರಫಲಕ ಮತ್ತು 7 ಕಿಲೋವಾಟ್‌ ಸಾಮರ್ಥ್ಯದ ಜೈವಿಕ ಇಂಧನ ಜನರೇಟರ್ ಅಳವಡಿಸಲಾಗಿದೆ. 75 ಗಿರಿಜನರ ಮನೆಗಳಿಗೆ ತಲಾ 9 ಕಿಲೋವಾಟ್‌ ಸಾಮರ್ಥ್ಯದ 2 ಬಲ್ಬ್ ಮತ್ತು 5 ಕಿಲೋವಾಟ್‌ನ 1 ಬಲ್ಬ್, ಮೊಬೈಲ್ ಚಾರ್ಜಿಂಗ್ ಮಾಡಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶ್ಯಾಮಸುಂದರ್ ಮಾಹಿತಿ ನೀಡಿದರು.

ಲಕ್ಷ್ಮೀಪುರ ಹಾಡಿಯ ಗಿರಿಜನ ಫಲಾನುಭವಿ ಮನೆಗೆ ಸೌರವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು
ಲಕ್ಷ್ಮೀಪುರ ಹಾಡಿಯ ಗಿರಿಜನ ಫಲಾನುಭವಿ ಮನೆಗೆ ಸೌರವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು

₹30 ಲಕ್ಷ ವೆಚ್ಚದಲ್ಲಿ ನಿರ್ಮಾಣ ಸೌರವಿದ್ಯುತ್, ಜೈವಿಕ ಇಂಧನ ಬಳಸಿ ವಿದ್ಯುತ್ ಜ.17ರಿಂದ ವಿದ್ಯುತ್‌ ಪೂರೈಕೆ

ಹುಣಸೂರು ತಾಲ್ಲೂಕಿನ 35 ಹಾಡಿಗಳ ಪೈಕಿ 2 ಹಾಡಿಗೆ ಸೌರ ವಿದ್ಯುತ್‌ ಕಲ್ಪಿಸಿದ್ದೇವೆ. ಸರ್ಕಾರವು ಪ್ರತಿಯೊಂದು ಹಾಡಿಗೂ ಇದನ್ನು ವಿಸ್ತರಿಸಿ ಅನುಕೂಲ ಕಲ್ಪಿಸಬೇಕು
ಶ್ರೀಕಾಂತ್ ಡೀಡ್ ನಿರ್ದೇಶಕ

ಗಿರಿಜನರಿಗೆ ತರಬೇತಿ ‘ಮೊದಲ ಹಂತದಲ್ಲಿ ಮನೆ ಬೀದಿ ದೀಪಗಳಿಗೆ ವಿದ್ಯುತ್‌ ಪೂರೈಸುವುದು. 2ನೇ ಹಂತದಲ್ಲಿ ಹಿಟ್ಟಿನ ಗಿರಣಿ ಮತ್ತು ಜೈವಿಕ ಇಂಧನ ಎಣ್ಣೆ ತಯಾರಿಸುವ ಗಿರಣಿಗೆ ಪೂರೈಕೆ ಮಾಡಲಾಗುವುದು. ಗ್ರಿಡ್ ನಿರ್ವಹಣೆಗೆ ಗಿರಿಜನರ ಸಮಿತಿ ರಚಿಸಿ ಸದಸ್ಯರಿಗೆ ತರಬೇತಿ ನೀಡಲಾಗುವುದು’ ಎಂದು ಶ್ಯಾಮಸುಂದರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT