ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ವಿದ್ಯಾರ್ಥಿ ವೇತನ ಸಮಸ್ಯೆ ಬಗೆಹರಿಸಿ’

ಎಐಡಿಎಸ್‌ಒ ಕಾರ್ಯಕರ್ತರ ಒತ್ತಾಯ
Published 25 ಜೂನ್ 2024, 4:14 IST
Last Updated 25 ಜೂನ್ 2024, 4:14 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಮೈಸೂರು: ‘ವಿದ್ಯಾರ್ಥಿ ವೇತನ ಹಾಗೂ ಶುಲ್ಕಕ್ಕೆ ಸಂಬಂಧಿಸಿದ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ’ ಎಐಡಿಎಸ್‌ಒ ಕಾರ್ಯಕರ್ತರು ಸೋಮವಾರ ಕ್ರಾಫರ್ಡ್‌ ಭವನದ ಮುಂಭಾಗ ಪ್ರತಿಭಟಿಸಿದರು.

ಮಹಾರಾಣಿ ಮಹಿಳಾ ಕಲಾ ಕಾಲೇಜು ಸ್ನಾತಕೋತ್ತರ ವಿಭಾಗದಲ್ಲಿನ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಶುಲ್ಕದ ಬಗ್ಗೆ ಗೊಂದಲವಿದೆ. ವಿದ್ಯಾರ್ಥಿಗಳು ಕಾಲೇಜಿಗೆ ಸೇರಬೇಕಾದರೆ ₹600 ಅನ್ನು ತೆಗೆದುಕೊಂಡು ದಾಖಲಾತಿ ಮಾಡಿಕೊಂಡಿದ್ದಾರೆ. ಆದರೆ ಈವರೆಗೆ ಸಂಪೂರ್ಣ ವಿದ್ಯಾರ್ಥಿ ವೇತನ ಬಂದಿಲ್ಲ’ ಎಂದು ದೂರಿದರು.

‘ಪ್ರಥಮ ಮತ್ತು ದ್ವಿತೀಯ ವರ್ಷದಲ್ಲಿ ಸ್ನಾತಕೋತ್ತರ ಓದುತ್ತಿರುವ ವಿದ್ಯಾರ್ಥಿಗಳಿಗೆ ₹2 ಸಾವಿರ, ₹4 ಸಾವಿರ ವಿದ್ಯಾರ್ಥಿ ವೇತನ ಬಂದಿದೆ. ಆದರೆ ಕಾಲೇಜು ಆಡಳಿತ ಮಂಡಳಿಯು ದಿಢೀರನೆ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ₹11 ಸಾವಿರ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ₹19,498 ಶುಲ್ಕವನ್ನು ಕಟ್ಟಬೇಕೆಂದು ಹೇಳಿದ್ದಾರೆ’ ಎಂದು ಆರೋಪಿಸಿದರು.

‘ದ್ವಿತೀಯ ವರ್ಷ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಸೆಮಿಸ್ಟರ್‌ನಲ್ಲಿ ಪರೀಕ್ಷಾ ಶುಲ್ಕವನ್ನು ಕಟ್ಟಲು ಹೇಳಿರಲಿಲ್ಲ. ಈಗ ಏಕಾಏಕಿ  ಪಾವತಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಯುಯುಸಿಎಂಎಸ್‌ ಪೋರ್ಟಲ್‌ನಲ್ಲಿ ಶುಲ್ಕವನ್ನು ಕಟ್ಟುವಂತೆ ತೋರಿಸುತ್ತಿಲ್ಲ ಇದು ವಿದ್ಯಾರ್ಥಿಗಳಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ದಿಢೀರನೆ ಶುಲ್ಕ ಪಾವತಿಸಲು ಸೂಚಿಸಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದ್ದು, ಶುಲ್ಕ ಪಾವತಿಗೆ ಕಾಲಾವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ವಿ.ಆರ್‌.ಶೈಲಜಾ ಅವರಿಗೆ ಮನವಿ ಪತ್ರ ನೀಡಿದರು. ಪ್ರತಿಭಟನೆಯಲ್ಲಿ ಎಐಡಿಎಸ್ಓ ಉಪಾಧ್ಯಕ್ಷರಾದ ನಿತಿನ್, ಸ್ವಾತಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT