ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಶಿಕ್ಷಕರ ಕ್ಷೇತ್ರ: ಮೈತ್ರಿಯಲ್ಲಿ ಅಪಸ್ವರ!

ವಿವೇಕಾನಂದಗೆ ಜೆಡಿಎಸ್‌ ‘ಬಿ ಫಾರಂ’, ಬಿಜೆಪಿ ಅಭ್ಯರ್ಥಿಯಾಗಿ ನಿಂಗರಾಜ್‌ ಗೌಡ ನಾಮಪತ್ರ
Published 15 ಮೇ 2024, 18:27 IST
Last Updated 15 ಮೇ 2024, 18:27 IST
ಅಕ್ಷರ ಗಾತ್ರ

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್‌ ಚುನಾವಣೆಗೆ ‘ಒಮ್ಮತದ ಅಭ್ಯರ್ಥಿ’ ಆಯ್ಕೆ ಮಾಡುವುದು ಎನ್‌ಡಿಎ ಮೈತ್ರಿಕೂಟಕ್ಕೆ ಸಾಧ್ಯವಾಗದಿರುವುದರಿಂದ ಗೊಂದಲ ಏರ್ಪಟ್ಟಿದೆ. ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಯೂ ಎದುರಾಗಿದೆ.

ಈ ಕ್ಷೇತ್ರಕ್ಕೆ ಬಿಜೆಪಿಯಿಂದ ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಈ.ಸಿ. ನಿಂಗರಾಜ್‌ಗೌಡ ಅವರಿಗೆ ಮೇ 12ರಂದು ಟಿಕೆಟ್‌ ಘೋಷಿಸಲಾಗಿತ್ತು. ಅದರಂತೆ ಅವರು, ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ‘ನಾನೇ ಎನ್‌ಡಿಎ ಅಭ್ಯರ್ಥಿ’ ಎಂದು ಹೇಳಿಕೊಂಡಿದ್ದಾರೆ. ‘ಮೈತ್ರಿ ಮಾತುಕತೆಯಂತೆ ಕ್ಷೇತ್ರವನ್ನು ಬಿಜೆಪಿಯು ಜೆಡಿಎಸ್‌ಗೆ ಬಿಟ್ಟು ಕೊಟ್ಟಿದೆ’ ಎಂದು ಹೇಳಲಾಗುತ್ತಿರುವ ನಡುವೆಯೇ, ನಿಂಗರಾಜ್‌ ಗೌಡ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಈ ನಡುವೆ, ಮಂಡ್ಯದ ರಿಯಲ್‌ ಎಸ್ಟೇಟ್ ಉದ್ಯಮಿ ವಿವೇಕಾನಂದ ಅವರಿಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಬುಧವಾರ ಬೆಳಿಗ್ಗೆ ‘ಬಿ ಫಾರಂ’ ವಿತರಿಸಿದ್ದಾರೆ. ಅವರು ಗುರುವಾರ (ಮೇ 16) ನಾಮಪತ್ರ ಸಲ್ಲಿಸಲಿದ್ದಾರೆ. ‘ನಾನೇ ಎನ್‌ಡಿಎ ಅಭ್ಯರ್ಥಿ’ ಎಂದು ಅವರು ಹೇಳುತ್ತಿದ್ದು ಜೆಡಿಎಸ್‌ ನಾಯಕರೂ ಬೆಂಬಲಿಸಿದ್ದಾರೆ.

ಮತ್ತೊಬ್ಬ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದ ವಿಧಾನಪರಿಷತ್‌ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಕೂಡ ಹಿತೈಷಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ತಮಗೇ ಟಿಕೆಟ್‌ ದೊರೆಯುತ್ತದೆ ಎಂಬ ವಿಶ್ವಾಸದಲ್ಲಿದ್ದ ಅವರು, ‘ಮೇ 16ರಂದು ನಾಮಪತ್ರ ಸಲ್ಲಿಕೆಗೆ ಬನ್ನಿ’ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿ ಶಿಕ್ಷಕರು ಹಾಗೂ ಬೆಂಬಲಿಗರನ್ನು ಆಹ್ವಾನಿಸಿದ್ದರು. ಅವರಿಗೇ ಟಿಕೆಟ್‌ ಖಚಿತವಾಗಿದೆ ಎಂದು ಹೇಳಲಾಗಿತ್ತು. ಆದರೆ, ಪಡೆದುಕೊಳ್ಳುವಲ್ಲಿ ವಿವೇಕಾನಂದ ಯಶಸ್ವಿಯಾಗಿದ್ದಾರೆ.

ಬಿಜೆಪಿ ಟಿಕೆಟ್‌ ಘೋಷಣೆ ನಂತರ ನಡೆದ ಬೆಳವಣಿಗೆಯಲ್ಲಿ ಜೆಡಿಎಸ್ ನಾಯಕರ ಒತ್ತಾಯದಂತೆ ಕ್ಷೇತ್ರವನ್ನು ಆ ಪಕ್ಷಕ್ಕೆ ಬಿಟ್ಟು ಕೊಡಲಾಗಿದೆ ಎಂದು ಹೇಳಲಾಗುತ್ತಿದೆ. ಕ್ಷೇತ್ರ ಹಂಚಿಕೆ ವಿಷಯದಲ್ಲಿ ಉಭಯ ಪಕ್ಷಗಳಲ್ಲಿ ಒಮ್ಮತ ಮೂಡಿಬಂದಿಲ್ಲ.

ನಾಮಪತ್ರ ಸಲ್ಲಿಕೆಗೆ ಗುರುವಾರ ಕಡೆಯ ದಿನವಾಗಿದೆ.

‘ಪಕ್ಷವು ನನಗೆ ಅಧಿಕೃತವಾಗಿ ಟಿಕೆಟ್‌ ಘೋಷಿಸಿದ್ದು, ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಸಂಸದೀಯ ಮಂಡಳಿಯಲ್ಲಿ ಚರ್ಚಿಸಿ ಹೆಸರು ಪ್ರಕಟಿಸಿದ ನಂತರ ಕ್ಷೇತ್ರವನ್ನು ಬಿಟ್ಟು ಕೊಡುವುದು ರಾಷ್ಟ್ರೀಯ ಪಕ್ಷಕ್ಕೆ ಮುಖಭಂಗದ ಸಂಗತಿಯಾಗುತ್ತದೆ. ವರಿಷ್ಠರು ಮಾತುಕತೆಗೆ ಬರುವಂತೆ ತಿಳಿಸಿದ್ದರು. ನಾಮಪತ್ರ ಸಲ್ಲಿಕೆ ಮಾಡಿಯೇ ಬರುತ್ತೇನೆ ಎಂದು ತಿಳಿಸಿದ್ದೆ. ಅದಕ್ಕೆ ಒಪ್ಪಿದ್ದರು’ ಎಂದು ಈ.ಸಿ. ನಿಂಗರಾಜ್‌ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ದಕ್ಷಿಣ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಈ.ಸಿ. ನಿಂಗರಾಜ್ ಗೌಡ ಬುಧವಾರ ನಾಮಪತ್ರ ಸಲ್ಲಿಸಿದರು. ಪ್ರಾಂಶುಪಾಲರಾದ ವೈ.ಎಚ್‌. ಲೋಹಿತ್ ಕುಮಾರ್ ಬಿ.ಎನ್. ಸುರೇಶ್ ಡಿ. ಶ್ರೀಕಂಠೇಗೌಡ ಮತ್ತು ಎಂ.ಎಸ್. ಉಮಾಶಂಕರ ಆರಾಧ್ಯ ಜತೆಗಿದ್ದರು
ದಕ್ಷಿಣ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಈ.ಸಿ. ನಿಂಗರಾಜ್ ಗೌಡ ಬುಧವಾರ ನಾಮಪತ್ರ ಸಲ್ಲಿಸಿದರು. ಪ್ರಾಂಶುಪಾಲರಾದ ವೈ.ಎಚ್‌. ಲೋಹಿತ್ ಕುಮಾರ್ ಬಿ.ಎನ್. ಸುರೇಶ್ ಡಿ. ಶ್ರೀಕಂಠೇಗೌಡ ಮತ್ತು ಎಂ.ಎಸ್. ಉಮಾಶಂಕರ ಆರಾಧ್ಯ ಜತೆಗಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT