ಮೈಸೂರು: ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಕುಂಚ ಹಿಡಿದು ಬಂದ ಕಲಾವಿದರು ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಆಕ್ರೋಶ ಹೊರಹಾಕಿದರು.
ದೇಶದಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಚಿತ್ರದ ಮೂಲಕ ಅಭಿವ್ಯಕ್ತಿಸಿದ ಅವರಿಗೆ ವಾಯುವಿಹಾರಿಗಳು, ನಾಗರಿಕರು ಮಿಡಿದರು.
ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣವನ್ನು ಮರು ತನಿಖೆಗೆ ಆಗ್ರಹಿಸಿ ಇದೇ 28ರಂದು ಆಯೋಜಿಸಿರುವ ‘ಬೆಳ್ತಂಗಡಿ ಚಲೋ’ ಯಶಸ್ವಿಗೆ ಪೂರ್ವಭಾವಿಯಾಗಿ ಭಾನುವಾರ ನಗರದ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಆಯೋಜಿಸಿದ್ದ ‘ಸೌಜನ್ಯ ಭಿತ್ತಿಚಿತ್ರ ರಚನೆ ಶಿಬಿರ’ಕ್ಕೆ ಕಲಾವಿದ ಬಾದಲ್ ನಂಜುಂಡಸ್ವಾಮಿ ಚಾಲನೆ ನೀಡಿದರು.
ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ (ಕಾವಾ), ರವಿವರ್ಮ ಆರ್ಟ್ಸ್ ಕಾಲೇಜು ಮತ್ತು ಕಲಾನಿಕೇತನ ಸಂಸ್ಥೆಯ ವಿದ್ಯಾರ್ಥಿಗಳು, ‘ಸೌಜನ್ಯಗೆ ನ್ಯಾಯ ಬೇಕು’, ‘ಅರೆಸ್ಟ್ ದಿ ಕ್ರಿಮಿನಲ್,’ ‘ತೂರಬೇಡಿ ಗಾಳಿಗೆ ಹೆಣ್ತನದ ಘನತೆ’, ‘ಸ್ಟಾಪ್ ರೇಪ್’ ಎಂಬ ವಾಕ್ಯಗಳಿಗೆ ಅನುಗುಣವಾಗಿ ಚಿತ್ರಗಳನ್ನು ಬರೆದರು.
ರಂಗಕರ್ಮಿ ಸಿ.ಬಸವಲಿಂಗಯ್ಯ, ಭೂಮಿಗೌಡ, ಜಿ.ಪಿ.ಬಸವರಾಜು, ಮೈಮ್ ರಮೇಶ್, ನಾ.ದಿವಾಕರ, ಸವಿತಾ ಮಲ್ಲೇಶ್, ಕೃಷ್ಣಪ್ರಸಾದ್, ಕೆ.ಆರ್.ಗೋಪಾಲಕೃಷ್ಣ, ಜನಾರ್ಧನ್, ಕಾಳೇಗೌಡ ನಾಗವಾರ, ಪ್ರೊ.ಕಾಳಚೆನ್ನೇಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.